ADVERTISEMENT

ಅವ್ಯವಸ್ಥೆಗೆ ಲಂಚ, ಸ್ವಾರ್ಥ ಕಾರಣ: ಸಂತೋಷ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2025, 13:45 IST
Last Updated 14 ಜನವರಿ 2025, 13:45 IST
ಶಿರವಾಸೆಯ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣಮಹೋತ್ಸವ ಸಮಾರಂಭ ಕಾರ್ಯಕ್ರಮವನ್ನು ಸಂತೋಷ ಹೆಗ್ಡೆ ಉದ್ಘಾಟಿಸಿದರು
ಶಿರವಾಸೆಯ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣಮಹೋತ್ಸವ ಸಮಾರಂಭ ಕಾರ್ಯಕ್ರಮವನ್ನು ಸಂತೋಷ ಹೆಗ್ಡೆ ಉದ್ಘಾಟಿಸಿದರು   

ಚಿಕ್ಕಮಗಳೂರು: ‘ತೃಪ್ತಿ ಮತ್ತು ಮಾನವೀಯತೆ ಮೌಲ್ಯಗಳನ್ನು ಬದುಕಿನಲ್ಲಿ ಎಲ್ಲರೂ ಅನುಸರಿಸಿದರೆ ಸಮಾಜದಲ್ಲಿ ಶಾಂತಿ-ನೆಮ್ಮದಿ-ಸೌಹಾರ್ದ ಮೂಡುತ್ತದೆ’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.

ತಾಲ್ಲೂಕಿನ ಶಿರವಾಸೆಯ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಬಹುತೇಕ ಅವ್ಯವಸ್ಥೆಗಳಿಗೆ ಲಂಚ ಮತ್ತು ಸ್ವಾರ್ಥ ಕಾರಣ. ಜೀವನ ಪಥದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಲಂಚ ತೆಗೆದುಕೊಳ್ಳುವುದರ ಜೊತೆಗೆ ಲಂಚ ಕೊಡುವುದು ಅಪರಾಧ ಎಂಬುದನ್ನು ಅರಿಯಬೇಕು. ಸರಿ ದಾರಿಯಲ್ಲಿ ನಡೆಯುವ ಸಂಕಲ್ಪವನ್ನು ವಿದ್ಯಾರ್ಥಿ, ಯುವಜನತೆ ಮಾಡಿದರೆ ಮಾತ್ರ ದೇಶಕ್ಕೆ ಭವಿಷ್ಯವಿದೆ ಎಂದರು.

ADVERTISEMENT

ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆಯನ್ನು ರಾಜ್ಯಸಭಾ ಸದಸ್ಯ ಜಯರಾಮ್ ರಮೇಶ್ ಲೋಕಾರ್ಪಣೆ ಮಾಡಿದರು. ‘ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಂ.ಭೋಜೇಗೌಡ 50 ವರ್ಷ ಶಾಲೆ ಕ್ರಮಿಸಿದ ಹಾದಿಯನ್ನು ಪರಿಚಯಿಸಿದರು. ಎಂ.ಎಲ್.ಮೂರ್ತಿ ಮಾತನಾಡಿ, ‘ಈ ಭಾಗದ ಶೈಕ್ಷಣಿಕ ಕ್ರಾಂತಿಗೆ ವಿವೇಕಾನಂದ ವಿದ್ಯಾಸಂಸ್ಥೆಯ ಕೊಡುಗೆ ಅಪಾರ’ ಎಂದರು.

ಹೊರನಾಡು ಕ್ಷೇತ್ರದ ಭೀಮೇಶ್ವರ ಜೋಷಿ ಅವರು ಎಸ್.ಬಿ.ಮುಳ್ಳೇಗೌಡರ ಕಂಚಿನ ಪುತ್ಥಳಿ ಅನಾವರಣಗೊಳಿಸಿದರು. ಸಾಧಕರಾದ ಶಾರದಮ್ಮ ಮುಳ್ಳೇಗೌಡ, ಮಹಾಚಂದ್ರ ಪ್ರತಿಷ್ಠಾನದ ರವಿಶಂಕರ್ ದಂಪತಿ, ಕೆ.ವಿ.ಬಸವನಗೌಡ, ಸಂಸ್ಥೆಯ ನಿರ್ದೇಶಕ ಅಣ್ಣೆಗೌಡ, ಕೆ.ಎಸ್.ರಮೇಶ್, ಬಿ.ಎಂ.ಭೋಜೇಗೌಡ,  ಶಿಕ್ಷಕಿ ಅನುಸೂಯಾ ವಿಶ್ವನಾಥ್‍ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.