ADVERTISEMENT

‘ಸರ್ಫೇಸಿ’: ‘ಧ್ವನಿ ಎತ್ತದ ಬಿಜೆಪಿ ನಾಯಕರು’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 2:24 IST
Last Updated 4 ಡಿಸೆಂಬರ್ 2021, 2:24 IST
ಶಿವಕುಮಾರ್
ಶಿವಕುಮಾರ್   

ಚಿಕ್ಕಮಗಳೂರು: ‘ಬೆಳೆಗಾರರು ಪಡೆದಿರುವ ಸಾಲ ವಸೂಲಾತಿಗೆ ‘ಸರ್ಫೇಸಿ’ (ಆರ್ಥಿಕ ಸ್ವತ್ತುಗಳ ಭದ್ರತೆ, ಪುನಾರಚನೆ ಮತ್ತು ಭದ್ರತೆ) ಕಾಯ್ದೆಯಡಿ ಹಲವರಿಗೆ ಹರಾಜು ನೋಟಿಸ್‌ ನೀಡ ಲಾಗಿದೆ. ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದರು.

‘ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಬ್ಯಾಂಕ್‌ಗಳು ಸಾಲ ವಸೂಲಾತಿಗೆ ‘ಸರ್ಫೇಸಿ’ ಪ್ರಯೋಗಿಸುತ್ತಿವೆ. ಸಚಿವೆ ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಬಿ.ಎಸ್‌.ಯಡಿಯೂರಪ್ಪ ಅವರು ಬೆಳೆಗಾರರ ಆಸ್ತಿ ಉಳಿಸುವ ನಿಟ್ಟಿನಲ್ಲಿ ಧ್ವನಿ ಎತ್ತುತ್ತಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಬಿಜೆಪಿಯವರು ಹೆಣದ ಮೇಲೂ ಹಣ ವಸೂಲಿ ಮಾಡುತ್ತಿದ್ದಾರೆ. ಕೋವಿಡ್‌ನಿಂದ ಮೃತರಾದ ವ್ಯಕ್ತಿಯ ಕುಟುಂಬದವರು ಪರಿಹಾರ ಪಡೆಯಲು ಕೋವಿಡ್ ಸಾವಿನ ಪ್ರಮಾಣ ಪತ್ರ ಕೊಡಿಸಲು ಬಿಜೆಪಿ ಜನಪ್ರತಿನಿಧಿಗಳು ಅವರಿಂದ ಹಣ ಪಡೆಯುತ್ತಿದ್ದಾರೆ’ ಎಂದು ಆಪಾದಿಸಿದರು.

ADVERTISEMENT

‘ಗುತ್ತಿಗೆ ಕಾಮಗಾರಿ ಮೊತ್ತದ ಶೇ 40ರಷ್ಟು ಲಂಚ ರೂಪದಲ್ಲಿ ಅಧಿಕಾರಿ
ಗಳು, ಚುನಾಯಿತ ಪ್ರತಿನಿಧಿಗಳಿಗೆ ಸೇರುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದಾರೆ. ಪ್ರಧಾನಿಯವರು ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಶೇ 10 ಕಮಿಷನ್‌ ಸರ್ಕಾರ ಎಂದು ನಿರಾಧಾರ ಆರೋಪ ಮಾಡಿದ್ದರು’ ಎಂದರು.

‘ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಪ್ರಧಾನಿ ಮೋದಿ ಅವರು ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದಿದ್ದಾರೆ. ಕಾಯ್ದೆಗಳನ್ನು ವಿರೋಧಿಸಿ ಚಳವಳಿಯಲ್ಲಿ ತೊಡಗಿದ್ದ ರೈತರನ್ನು ಬಿಜೆಪಿಯವರು ಖಲಿಸ್ಥಾನಿಗಳು, ಭಯೋತ್ಪಾದಕರು ಎಂದೆಲ್ಲ ದೂಷಿಸಿದ್ದರು’ ಎಂದು ಟೀಕಿಸಿದರು

ಮುಖಂಡರಾದ ಬಿ.ಎಂ.ಸಂದೀಪ್‌, ಮೋಟಮ್ಮ, ಸಿ.ಆರ್.ಸಗೀರ್‌ ಅಹಮದ್‌, ಅಂಶುಮಂತ್‌, ಗಾಯತ್ರಿ ಶಾಂತೇಗೌಡ, ಕೆ.ಜೆ.ಜಾರ್ಜ್‌, ಬಿ.ಎಲ್‌.ಶಂಕರ್‌, ಸಚಿನ್‌ ಮೀಗಾ, ಶ್ರೀನಿವಾಸ್‌, ಕೆ.ಎಸ್‌.ಆನಂದ್‌, ಟಿ.ಡಿ.ರಾಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.