ADVERTISEMENT

‘ವೀರಪ್ಪಗೌಡ ವೃತ್ತ ಉಳಿಸಿ, ಪ್ರತಿಮೆ ನಿರ್ಮಿಸಿ’

ಕೆ.ಎನ್.ವೀರಪ್ಪ ಗೌಡ ವೃತ್ತ ಉಳಿಸುವ ಬೃಹತ್‌ ಸಮಾವೇಶ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:04 IST
Last Updated 28 ಸೆಪ್ಟೆಂಬರ್ 2025, 5:04 IST
ಶೃಂಗೇರಿ ಆರ್ಯ ಈಡಿಗರ ಸಮೂದಾಯ ಭವನದಲ್ಲಿ ಕೆ.ಎನ್ ವೀರಪ್ಪ ಗೌಡರ ಅಭಿಮಾನಿ ಬಳಗ ಆಯೋಜಿಸಿದ ವೀರಪ್ಪ ಗೌಡರ ಸಮಾವೇಶದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಗೇರ್‍ಬೈಲ್ ಶಂಕರಪ್ಪ ಮಾತನಾಡಿದರು
ಶೃಂಗೇರಿ ಆರ್ಯ ಈಡಿಗರ ಸಮೂದಾಯ ಭವನದಲ್ಲಿ ಕೆ.ಎನ್ ವೀರಪ್ಪ ಗೌಡರ ಅಭಿಮಾನಿ ಬಳಗ ಆಯೋಜಿಸಿದ ವೀರಪ್ಪ ಗೌಡರ ಸಮಾವೇಶದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಗೇರ್‍ಬೈಲ್ ಶಂಕರಪ್ಪ ಮಾತನಾಡಿದರು   

ಶೃಂಗೇರಿ: ‘ಭೂ ಸುಧಾರಣೆಯ ಹರಿಕಾರ, ಕ್ಷೇತ್ರದ ಮೊದಲ ಶಾಸಕ ಕೆ.ಎನ್.ವೀರಪ್ಪ ಗೌಡರ ಹೆಸರನ್ನು 40 ವರ್ಷಗಳ ಹಿಂದೆಯೇ ಪಟ್ಟಣದ ಈಗಿನ ರಾಷ್ಟ್ರೀಯ ಹೆದ್ದಾರಿ 169ರ ವೃತ್ತಕ್ಕೆ ಇಡಲಾಗಿದ್ದು, ಆ ವೃತ್ತವನ್ನು ಕೆ.ಎನ್.ವೀರಪ್ಪ ಗೌಡ ವೃತ್ತ ಎಂದೇ ಉಳಿಸಬೇಕು ಹಾಗೂ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಕೆ.ಎನ್ ವೀರಪ್ಪ ಗೌಡರ ಅಭಿಮಾನಿ ಬಳಗದ ಅಧ್ಯಕ್ಷ ಕಾಫಿತೋಟ ಮಲ್ಲಪ್ಪ ಹೆಗ್ಡೆ ಒತ್ತಾಯಿಸಿದರು.

ಶೃಂಗೇರಿ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಕೆ.ಎನ್.ವೀರಪ್ಪ ಗೌಡರ ಅಭಿಮಾನಿ ಬಳಗ ಆಯೋಜಿಸಿದ್ದ ಅನಾದಿ ಕಾಲದಿಂದ ಇರುವ ಕೆ.ಎನ್.ವೀರಪ್ಪ ಗೌಡ ವೃತ್ತ ಉಳಿಸುವ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

‘ವೀರಪ್ಪ ಗೌಡರು ಕ್ಷೇತ್ರದ ಮೊದಲ ವಿಧಾನಸಭಾ ಸದಸ್ಯರಾಗಿ 40 ಸಾವಿರ ಕುಟುಂಬಗಳಿಗೆ ಆಗಿನ ಕಾಲದಲ್ಲಿ ಜಮೀನಿಗೆ ಮತ್ತು ವಸತಿ ಮನೆಗೆ ಖಾತೆ ಮಾಡಿಸಿ ಬದುಕು ಕಲ್ಪಿಸಿದ್ದಾರೆ.ರಾಜ್ಯದಲ್ಲಿ ಮೊದಲ ಬಾರಿಗೆ ಉಳುವವನೇ ಭೂ ಒಡೆಯ ಕಾನೂನು ಜಾರಿಗೆ ತಂದು ಉಳ್ಳವರಿಂದ ಊಳುವವನಿಗೆ ಭೂಮಿ ಹಂಚಿ, ಇಡೀ ರಾಜ್ಯಕ್ಕೆ ಮಾದರಿಯಾಗಿ ಹಿಂದುಳಿದ ವರ್ಗಗಳ ಹರಿಕಾರ ದೇವರಾಜು ಅರಸು ಅವರ ಪ್ರಶಂಸೆ ಪಾತ್ರರಾಗಿದ್ದರು. ಸುಮಾರು 6,500 ಕುಟುಂಬಗಳಿಗೆ ಗೇಣಿ ಭೂಮಿಯನ್ನು ಕೊಡಿಸಿದ್ದರು. ಅಂತವರ ಪ್ರತಿಮೆ ಅನಾವರಣಗೊಳ್ಳಬೇಕು' ಎಂದು ಆಗ್ರಹಿಸಿದರು.

ADVERTISEMENT

ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಗೇರ್‍ಬೈಲ್ ಶಂಕರಪ್ಪ ಮಾತನಾಡಿ, `ಈ ಕ್ಷೇತ್ರಕ್ಕೆ ಭದ್ರ ಬುನಾದಿಯನ್ನು ಹಾಕಿ ಹಲವಾರು ಕಾರ್ಯಗಳನ್ನು ಮಾಡಿದಂತಹ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ವೀರಪ್ಪ ಗೌಡರ ಹೆಸರು ಮುಂದಿನ ಜನಾಂಗ ನೆನಪಿಡುವ ದೃಷ್ಟಿಯಿಂದ ಅವರ ಪ್ರತಿಮೆ ಮತ್ತು ವೃತ್ತ ಎಂದು ರಾಷ್ಟ್ರೀಯ ಹೆದ್ದಾರಿ 169ರ ರಸ್ತೆಯಲ್ಲಿ ಆಗಬೇಕು' ಎಂದರು.

ಆರ್ಯ ಈಡಿಗರ ಸಂಘದ ಅಧ್ಯಕ್ಷ ಅಗಸೋಳ್ಳಿ ನಾರಾಯಣ್ ಮಾತನಾಡಿ, ‘ಮಾಜಿ ಶಾಸಕ ಕೆ.ಎನ್ ವೀರಪ್ಪ ಗೌಡರು ಯಾವುದೇ ಒಂದು ಜನಾಂಗಕ್ಕೆ ಸೀಮಿತವಾಗಿರದೇ, ಅವರು ಎಲ್ಲಾ ವರ್ಗದವರಿಗೂ ಸಹಾಯ ಮಾಡಿ, ಬಡವರನ್ನು ಭೂಮಿಯ ಒಡೆಯರನ್ನಾಗಿ ಮಾಡಿದ್ದಾರೆ. ಅಂತವರ ಹೆಸರು ಮುಂದಿನ ಜನಾಂಗ ಆರಾಧಿಸಬೇಕು. ಆದರಿಂದ ಅವರ ಪ್ರತಿಮೆ ರಾಷ್ಟ್ರೀಯ ಹೆದ್ದಾರಿ 169ರ ರಸ್ತೆಯಲ್ಲಿ ನಿರ್ಮಾಣ ಮಾಡಬೇಕು’ ಎಂದು ಆಗ್ರಹಿಸಿದರು. 

ಸಮಾವೇಶವನ್ನು ಭೂ ಸುಧಾರಣೆ ಕಾನೂನಿನಲ್ಲಿ ಭೂಮಿ ಕಳೆದುಕೊಂಡ ಹೊನ್ನವಳ್ಳಿ ರಮೇಶ್, ಹೆಚ್ಚೇ ನರೇಂದ್ರ ಹೆಗಡೆ, ನೇಗಿಲು ನೀಡುವ ಮೂಲಕ ಉದ್ಘಾಟಿಸಿದರು. 1000ಕ್ಕೂ ಅಧಿಕ ಸಾರ್ವಜನಿಕರು ಸೇರಿದ್ದರು.

ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ, ಮುಖಂಡರಾದ ಕಚ್ಚೋಡಿ ಶ್ರೀನಿವಾಸ್, ಮಾರನಕೊಡಿಗೆ ನಟರಾಜ್, ಜಗದೀಶ್ ಹೆಗ್ಡೆ, ವೆಂಕಟೇಶ್ ಹೆಚ್ಗುಂದ, ನವೀನ್ ಕಿಗ್ಗಾ, ಸಚ್ಚೀಂದ್ರ, ಹಾಲಪ್ಪ ಗೌಡ ತೆಕ್ಕೂರು, ಕೆ.ಸಿ ವೆಂಕಟೇಶ್, ಅಂಗುರ್ಡಿ ದಿನೇಶ್, ಭಾರ್ಗವಿ ವಿವೇಕ್, ಪುಟ್ಟಪ್ಪ ಹೆಗ್ಡೆ, ಹಾಗಲಗಂಚಿ ವೆಂಕಟೇಶ್, ಭರತ್ ಗೌಡ ಗಿಣಿಕಲ್, ವಿವಿಧ ಸಮೂದಾಯಗಳ ಮುಖಂಡ ಪುಷ್ಪ ಚಿದಂಬರ್, ಚಂದ್ರಶೇಖರ್ ಸೂರ್ಡಿ, ಖಾದರ್, ಪ್ರದೀಪ್ ಯಡದಾಳು, ಕೃಷ್ಣಪ್ಪ ಹಾಜರಿದ್ದರು.

‘ಬೇರೆ ಯಾರ ಪ್ರತಿಮೆಗೆ ಅವಕಾಶ ನೀಡುವುದಿಲ್ಲ’ ‘

ಪಟ್ಟಣದಲ್ಲಿ ಮಾಜಿ ಶಾಸಕ ಕೆ.ಎನ್ ವೀರಪ್ಪ ಗೌಡರ ವೃತ್ತ ಕಳೆದ ನಾಲ್ಕು ದಶಕಗಳಿಂದ ಇದೆ. ಈ ವೃತ್ತದಲ್ಲಿ ವೀರಪ್ಪ ಗೌಡರ ಪ್ರತಿಮೆ ಹೊರತು ಪಡಿಸಿ ಬೇರೆ ಯಾವುದೇ ಪ್ರತಿಮೆಯನ್ನು ನಿಲ್ಲಿಸಬಾರದು. ಈ ಕೂಗು ಯಾರ ಪರನೂ ಅಲ್ಲ ಯಾರ ವಿರೋದ್ದವೂ ಅಲ್ಲ. ಇದು ಜನಪರವಾದ ನಿಲುವು. ವೀರಪ್ಪ ಗೌಡರು ಸಾರ್ವಜನಿಕರ ಆಸ್ತಿ. ಅಟ್ಟ ಹತ್ತಿದ ಏಣಿಯ ಹಂಗು ಏಕೆ ಎಂಬಂತೆ ವೀರಪ್ಪ ಗೌಡರು ಭೂಮಿ ನೀಡಿದ ಮೇಲೆ ಅವರ ಹಂಗು ಏಕೆ ಎಂದು ಸುಮ್ಮನೆ ಕುಳಿತುಕೊಳ್ಳುವುದಲ್ಲ’ ಎಂದು ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.