
ಮೂಡಿಗೆರೆ: ‘ಪರಿಶಿಷ್ಟ ಪಂಗಡದ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಒಳಮೀಸಲಾತಿ ಜಾರಿಗೊಳಿಸಲು ಅಧ್ಯಯನ ನಡೆಸುವ ಸಲುವಾಗಿ ಸರ್ಕಾರ ಆಯೋಗವೊಂದನ್ನು ರಚಿಸಿ, ಅದರ ವರದಿಯ ಆಧಾರದ ಮೇಲೆ ಶೀಘ್ರವಾಗಿ ಒಳಮೀಸಲಾತಿ ಜಾರಿಗೊಳಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ ಹೇಳಿದರು.
ಗಿರಿಜ್ಯೋತಿ ಗಿರಿಜನ ಸಂಘದಿಂದ ಪಟ್ಟಣದ ಲ್ಯಾಂಪ್ಸ್ ಸಹಕಾರ ಸಂಘದ ಭವನದಲ್ಲಿ ಶುಕ್ರವಾರ ನಡೆದ ಶ್ರೀಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ವಾಲ್ಮೀಕಿ ಹೊರತು ಪಡಿಸಿದರೆ, ಪ. ಪಂಗಡದ 49 ಬುಡಕಟ್ಟು ಸಮುದಾಯಗಳಿವೆ. 2024ರಲ್ಲಿ ಸರ್ಕಾರ ಪ. ಜಾತಿಗೆ ಒಳಮೀಸಲಾತಿ ಘೋಷಿಸಿದೆ. ಅದನ್ನು ಪ. ಪಂಗಡದ ಸಮುದಾಯಗಳಿಗೂ ವಿಸ್ತರಿಸಬೇಕು. ಅರಣ್ಯ ಹಕ್ಕು ಕಾಯ್ದೆಯಂತೆ ಪ್ರತಿ ಆದಿವಾಸಿಗಳಿಗೆ ಜಮೀನು ಒದಗಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆಯಿದೆ. ಇದರಿಂದಾಗಿ ಆದಿವಾಸಿಗಳ ಕಾಲೆಳೆಯುವರ ಸಂಖ್ಯೆ ಹೆಚ್ಚಾಗುತ್ತಿದೆ. ಆದಿವಾಸಿಗಳು ಸರ್ಕಾರದ ಸವಲತ್ತುಗಳನ್ನು ಪಡೆಯಲು ಇರುವವರೆಂದು ನಂಬಿದ್ದಾರೆ. ಆದರೆ, ಆದಿವಾಸಿಗಳು ಪಡೆದಿರುವುದಕ್ಕಿಂತ ಹೆಚ್ಚು ಸಮಾಜಕ್ಕೆ ಕೊಟ್ಟಿದ್ದಾರೆ ಎಂಬುದನ್ನು ಆಳುವ ವರ್ಗ ಅರ್ಥಮಾಡಿಕೊಳ್ಳಬೇಕು. ರೋಗಗಳಿಗೆ ಗಿಡಮೂಲಿಕೆ ಔಷಧಗಳನ್ನು ನೀಡಲು ಆರಂಭಿಸಿದವರು ಆದಿವಾಸಿಗಳು ಎಂಬುದನ್ನು ಅರಿಯಬೇಕು ಎಂದರು.
ಆಧ್ಯಾತ್ಮಿಕತೆ, ಪೂಜೆ, ಪುರಸ್ಕಾರಗಳನ್ನು ಕಲಿತು ಈಗ ಇತರರಂತೆ ಪೂಜೆ ಪುರಸ್ಕಾರ ನಡೆಸುತ್ತಿದ್ದಾರೆ. ಮನುಷ್ಯನಿಗೆ ಮುಖ್ಯವಾಗಿ ಜ್ಞಾನ, ಶಿಕ್ಷಣ, ಆಧ್ಯಾತ್ಮಿಕ ಶಕ್ತಿ, ಸಂಘಟನಾ ಶಕ್ತಿ ಮತ್ತು ಸಾಮರ್ಥ್ಯ ಇವೆಲ್ಲವೂ ಬೇಕಾಗಿದೆ. ಪುರಾತನ ಕಾಲದಲ್ಲಿ ಆದಿವಾಸಿಗಳಿಗೆ ಶಿಕ್ಷಣದ ಕೊರತೆಯಿತ್ತು. ಈಗ ಎಲ್ಲಾ ರಂಗದಲ್ಲಿ ಆದಿವಾಸಿಗಳು ಬಲಿಷ್ಠರಾಗಿದ್ದಾರೆ. ಪ್ರತಿಯೊಬ್ಬರಿಗೂ ನಿವೇಶನ, ಮನೆ ದೊರಕಿದಾಗ ಮಾತ್ರ ಶಿಕ್ಷಣ ಮತ್ತು ಸ್ವಾತಂತ್ರ್ಯ ಸಿಗುತ್ತದೆ’ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಮುಖಂಡ ಬಿ.ಬಿ. ನಿಂಗಯ್ಯ ಮಾತನಾಡಿ, ‘300 ಸರ್ಕಾರಿ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸಿದ್ದರಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದು ನೇರವಾಗಿ ಪ.ಜಾತಿ ಹಾಗೂ ಪಂಗಡದ ಸಮುದಾಯಗಳ ಉದ್ಯೋಗಿಗಳ ಮೇಲೆ ಸವಾರಿ ಮಾಡಿದಂತಾಗಿದೆ. ಅರಣ್ಯ ಹಕ್ಕು ಕಾಯ್ದೆಯಂತೆ ಆದಿವಾಸಿಗಳಿಗೆ ಕೃಷಿ ಜಮೀನು ನೀಡಬೇಕು. ರಾಜಕೀಯ ಕುತಂತ್ರದಿಂದಾಗಿ ಪ.ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತರು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇದರ ಬಗ್ಗೆ ಚಿಂತನ-ಮಂಥನ ಕಾರ್ಯಕ್ರಮ ನಡೆಸಿ, ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲು ತುಳಿತಕ್ಕೊಳಗಾದ ಸಮುದಾಯದವರು ಚಿಂತನೆ ನಡೆಸಬೇಕಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಿರ್ಸಾ ಮುಂಡಾ ಅವರ ಆಶಯವನ್ನು ಈಡೇರಿಸಲು ಸರ್ಕಾರಗಳು ಸಿದ್ಧವಾಗಿಲ್ಲ. ಹಾಗಾಗಿ ನಮಗೆ ರಾಜಕೀಯವಾಗಿ ಯಾವುದೆ ರಾಜಕೀಯ ಪಕ್ಷದ ಅಗತ್ಯವಿಲ್ಲ. ಉತ್ತಮ ಅಭ್ಯರ್ಥಿಯನ್ನು ಒಗ್ಗಟ್ಟಾಗಿ ಆಯ್ಕೆ ಮಾಡಬೇಕು. ರಾಜಕೀಯವಾಗಿ ಪ.ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ರಾಜಕೀಯವಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಸಾಮಾಜಿಕವಾಗಿ ಇನ್ನೂ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದರು.
ಗಿರಿಜ್ಯೋತಿ ಗಿರಿಜನ ಸಂಘದ ಅಧ್ಯಕ್ಷ ವಿಜೇಂದ್ರ, ಕಾಂಗ್ರೆಸ್ ಮುಖಂಡ ಎಂ.ಪಿ. ಕುಮಾರಸ್ವಾಮಿ, ರಾಜ್ಯ ಲ್ಯಾಂಪ್ಸ್ ಮಹಾ ಮಂಡಳಿ ಮಾಜಿ ಅಧ್ಯಕ್ಷ ಮುತ್ತಪ್ಪ, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಆರ್.ಕೃಷ್ಣ, ತಾಲ್ಲೂಕು ಹಸಲರು ಸಂಘದ ಅಧ್ಯಕ್ಷ ಕೆ.ಟಿ. ಪೂವಪ್ಪ, ಹಳೆಮೂಡಿಗೆರೆ ಗ್ರಾ.ಪಂ. ಸದಸ್ಯ ಚಂದ್ರೇಶ್, ಸತ್ತಿಹಳ್ಳಿ ಗ್ರಾ.ಪಂ. ಸದಸ್ಯ ವಿಶ್ವ, ಮುಖಂಡರಾದ ಹರೀಶ್ ಸಬ್ಬೇನಹಳ್ಳಿ, ಚಂದ್ರಶೇಖರ್, ಪುಷ್ಪ, ಸುನಿತಾ, ಮಹೇಶ್, ಗಿರಿಜನ ಅಭಿವೃದ್ಧಿ ಇಲಾಖೆ ಅಧಿಕಾರಿ ನವೀನ್, ಸಮಾಜ ಕಲ್ಯಾಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸೋಮಶೇಖರ್, ಲ್ಯಾಂಪ್ಸ್ ಸೊಸೈಟಿ ಸಿಇಒ ಎಚ್.ಕೆ. ಕೃಷ್ಣಪ್ಪ ಇದ್ದರು.
ಹಸಲರು ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ
‘ಚಿಕ್ಕಮಗಳೂರು ಹಾಸನ ಶಿವಮೊಗ್ಗ ಕೊಡಗು ಉಡುಪಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಸಲರು ಸಮುದಾಯದ 45 ಸಾವಿರ ಜನಸಂಖ್ಯೆಯಿದೆ. ಈ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. 2005ರ ಕಾಯ್ದೆಯಂತೆ ಅರಣ್ಯ ಹಕ್ಕು ಸಮಿತಿಯಿಂದ ಆದಿವಾಸಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಆದರೆ ಇದುವರೆಗೂ ಪಕ್ಕಾಪೋಡಿ ಮಾಡಿಲ್ಲ. ಇದರಿಂದ ಜಮೀನು ಅಭಿವೃದ್ಧಿಪಡಿಸಲು ಸಾಧ್ಯವಾಗದೆ ಕಾಫಿ ಇಳುವರಿ ಬರುತ್ತಿಲ್ಲ. ಬ್ಯಾಂಕಿನಿಂದ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ಪಕ್ಕಾಪೋಡಿ ಮಾಡಿಕೊಡಬೇಕು’ ಎಂದು ರಾಜ್ಯ ಲ್ಯಾಂಪ್ಸ್ ಮಹಾಮಂಡಳಿ ಮಾಜಿ ಅಧ್ಯಕ್ಷ ಮುತ್ತಪ್ಪ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.