
ನರಸಿಂಹರಾಜಪುರ: ಗ್ರಾಮೀಣ ಅಂಚೆ ನೌಕರರು ಸಂಘಟಿತರಾಗಿ ಹೋರಾಟ ಮಾಡಿದ ಫಲವಾಗಿ ಹಲವು ಸವಲತ್ತುಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಗ್ರಾಮೀಣ ಅಂಚೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಪ್ರಕಾಶ್ ಹೇಳಿದರು.
ಪಟ್ಟಣದ ಅಂಚೆ ಕಚೇರಿ ಆವರಣದಲ್ಲಿ ಬುಧವಾರ ನಡೆದ ಹೊನ್ನೆಕೂಡಿಗೆ ಉಪ ಅಂಚೆಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ 41 ವರ್ಷ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಕೆ.ಟಿ.ಶೇಷಣ್ಣಗೌಡರ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಅಂಚೆ ನೌಕರರು ದಿನಕ್ಕೆ 7–8 ಗಂಟೆ ಕೆಲಸ ಮಾಡಿದರೂ ಕಡಿಮೆ ಸಂಬಳ ಸಿಗುತ್ತಿದೆ. ಗ್ರಾಮೀಣ ಅಂಚೆ ನೌಕರರಾಗಿ ಕೆಲಸ ನಿರ್ವಹಿಸಿದವರಿಗೆ 62 ವರ್ಷವಾದ ನಂತರ ಅವಲ ಅವಲಂಬಿತರಿಗೆ ಕೆಲಸ ಕೊಡುವ ಆದೇಶ ಬಂದಿದೆ. ಮೇ 18 ರಂದು ಗ್ರಾಮೀಣ ಅಂಚೆ ನೌಕರರ ಸಮಾವೇಶವನ್ನು ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದೆ ಎಂದರು.
ಗ್ರಾಮೀಣ ಅಂಚೆ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ ಮಾತನಾಡಿ, ಗ್ರಾಮೀಣ ಅಂಚೆ ನೌಕರರಿಗೆ ನಿವೃತ್ತಿಯಾದ ನಂತರ ಪಿಂಚಣಿ ಇಲ್ಲವಾಗಿದೆ. ನಿವೃತ್ತಿಯ ದಿನವೇ ಗ್ರ್ಯಾಚುಟಿ ಸೌಲಭ್ಯ ಕೊಡುವಂತೆ ಒತ್ತಾಯಿಸಲಾಗುವುದು ಎಂದರು.
ಮೊರಾರ್ಜಿ ವಸತಿ ಶಾಲೆಯ ರಾಮೋಹನ್, ಅಂಚೆ ಇಲಾಖೆಯ ರವಿಶಂಕರ್, ತಿಪ್ಪೇಶ್, ರಫೀಕ್, ಕಡಹಿನಬೈಲು ಗ್ರಾಮ ಪಂಚಾಯಿತಿ ಸದಸ್ಯ ಎ.ಬಿ.ಮಂಜುನಾಥ್ ಮಾತನಾಡಿದರು.
ಪಟ್ಟಣದ ಮುಖ್ಯ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಂಚೆ ಇಲಾಖೆಯ ನಿಧಿಶ್ರೀ, ರಿತಿನ್. ಎಸ್.ನಾಗೇಶ್, ತಕ್ಷಕ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.