ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು: ‘ಬಿಜೆಪಿಯ ನಿಜವಾದ ಕಾರ್ಯಕರ್ತರು ನನ್ನ ವಿರುದ್ಧ ಪತ್ರ ಚಳವಳಿ ಮಾಡಿಲ್ಲ. ಬೇರೆ ಪಕ್ಷದಲ್ಲಿದ್ದು, ಪಕ್ಷ ವಿರೋಧಿ ಚಟುವಟಿಕೆ ನಡೆಸಿ ರೂಢಿ ಇರುವವರೇ ಈಗ ಹೀಗೆ ಮಾಡಿಸಿರುವ ಅನುಮಾನ ಇದೆ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
‘ಅಧಿಕಾರಕ್ಕಾಗಿ ಬೇರೆ ಪಕ್ಷದಿಂದ ಬರುತ್ತಾರೆ, ಅಧಿಕಾರ ಅನುಭವಿಸಿ ವಾಪಸ್ ಹೋಗುತ್ತಾರೆ. ಪತ್ರ ಬರೆದಿರುವುದನ್ನು ನೋಡಿದರೆ ಯಾರೋ ಒಬ್ಬರ ಪ್ರಾಯೋಜಕತ್ವ ಇರುವುದು ಸ್ಪಷ್ಟವಾಗುತ್ತದೆ’ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.
‘ಅಭ್ಯರ್ಥಿಯಾಗುವ ಆಕಾಂಕ್ಷೆ ಎಲ್ಲರಿಗೂ ಇರುತ್ತದೆ. ಟಿಕೆಟ್ ಕೇಳುವ ಹಕ್ಕು ಸಾಮಾನ್ಯ ಕಾರ್ಯಕರ್ತನಿಗೂ ಇದೆ. ಆದರೆ, ಬೇರೆಯವರ ತೇಜೋವಧೆ, ಅಪಪ್ರಚಾರ ಮಾಡುವುದು ಸರಿಯಲ್ಲ. ಪಕ್ಷದ ಹೈಕಮಾಂಡ್‌ನವರು ಮತ್ತು ಮತದಾರರು ಗಮನಿಸುತ್ತಿದ್ದಾರೆ’ ಎಂದರು.
ಉಡುಪಿ– ಚಿಕ್ಕಮಗಳೂರು ಕೇತ್ರ ಮತ್ತು ನಾನು ಸಂಸದೆಯಾದ ಬಳಿಕ ಮಾಡಿರುವ ಅಭಿವೃದ್ಧಿ ಕೆಲಸಗಳು ಎಲ್ಲರಿಗೂ ಕಾಣಿಸುತ್ತಿವೆ. ಅಭಿವೃದ್ಧಿ ಆಧಾರದಲ್ಲಿ ಚರ್ಚೆ ನಡೆಯಬೇಕು. ಇದೇ ವಿಷಯ ಮುಂದಿಟ್ಟು ಜನರ ಮುಂದೆ ಹೋಗಬೇಕು ಎಂದು ಅಭಿಪ್ರಾಯಪಟ್ಟರು.
ಪತ್ರ ಚಳವಳಿಯಲ್ಲಿ ನಂಬಿಕೆ ಇಲ್ಲ: ಪ್ರಮೋದ್ ಮಧ್ವರಾಜ್
‘ಶೋಭಾ ಕರಂದ್ಲಾಜೆ ವಿರುದ್ಧ ನಡೆದ ಪತ್ರ ಚಳವಳಿ ಬಗ್ಗೆ ನನಗೆ ಗೊತ್ತಿಲ್ಲ. ಈ ರೀತಿಯ ಅಭಿಯಾನದ ಬಗ್ಗೆ ವೈಯಕ್ತಿಕವಾಗಿ ನನಗೆ ನಂಬಿಕೆ ಇಲ್ಲ’ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದರು. ‘ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ನಾನು ಆಕಾಂಕ್ಷಿಯಾಗಿದ್ದೇನೆ. ಕಾರ್ಯಕರ್ತರು ಮುಖಂಡರ ಅಭಿಪ್ರಾಯವನ್ನು ಪಕ್ಷ ಪಡೆಯುತ್ತದೆ. ಸಮೀಕ್ಷೆಗಳನ್ನೂ ನಡೆಸುತ್ತದೆ. ಟಿಕೆಟ್ ಕೊಡುವುದು ಪಕ್ಷದ ಸಂಸದೀಯ ಮಂಡಳಿಗೆ ಬಿಟ್ಟ ವಿಷಯ’ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ‘ಮೀನುಗಾರ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಎಂದು ಪಕ್ಷ ನಿರ್ಧರಿಸಿದರೆ ನನಗೆ ಅವಕಾಶ ನೀಡಬೇಕು ಎಂದು ಕೇಳಿದ್ದೇನೆ. ಟಿಕೆಟ್ ಸಿಗದಿದ್ದರೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. ಜೀವ ಇರುವ ತನಕ ಬಿಜೆಪಿ ತೊರೆಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.