ಶೃಂಗೇರಿ: ಕ್ರಿಸ್‍ಮಸ್ ರಜೆ ಹಾಗೂ ವರ್ಷಾಂತ್ಯದ ಹಿನ್ನೆಲೆ ಶೃಂಗೇರಿ ಶಾರದಾ ಪೀಠಕ್ಕೆ ಪ್ರವಾಸಿಗರ ದಂಡು ಹರಿದು ಬಂದಿದೆ.
ಪಟ್ಟಣದ ವಾಹನ ನಿಲುಗಡೆ ಸ್ಥಳವಾದ ಗಾಂಧಿ ಮೈದಾನದಲ್ಲಿ ಪ್ರವಾಸಿಗರ ವಾಹನ ಹಾಗೂ ಶಾರದಾ ಮಠದ ಎದುರು ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಬಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಪೀಠಕ್ಕೆ ಬರುತ್ತಿದ್ದು, ಪ್ರವಾಸೋದ್ಯಮ ಚೇತರಿಕೆ ಕಂಡು ಬಂದಿದೆ.
ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆ ಅಲ್ಲದೇ ಪಟ್ಟಣದ ಎಲ್ಲ ರಸ್ತೆಯಲ್ಲೂ ವಾಹನಗಳು ನಿಲುಗಡೆಯಾಗಿವೆ. ತಾಲ್ಲೂಕಿನ ಕಿಗ್ಗಾ ಶಾಂತ ಸಮೇತ ಋಷ್ಯಶೃಂಗ ಸ್ವಾಮಿ ದೇವಸ್ಥಾನ, ದುರ್ಗಾ ದೇವಸ್ಥಾನ, ಕಾಳಿಕಾಂಬ ದೇವಸ್ಥಾನ, ಕಾಲಭೈರವ ದೇವಸ್ಥಾನ ಮತ್ತು ಸಿರಿಮನೆ ಪಾಲ್ಸ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿದೆ.
ಪಟ್ಟಣದ ವಸತಿ ಗೃಹಗಳು, ಹೋಂಸ್ಟೇಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ರೂಮ್‌ಗಳಿಗೆ ಮುಂಗಡವಾಗಿ ಕಾಯ್ದಿರಿಸಲಾಗಿತ್ತು. ಕೆಲವರಿಗೆ ವಸತಿ ಗೃಹಗಳು, ಹೋಂಸ್ಟೇಗಳಲ್ಲಿ ಕೊಠಡಿ ಸಿಗದೆ ಶೃಂಗೇರಿಯಿಂದ 30 ಕಿ.ಮೀ ದೂರವಿರುವ ಕೊಪ್ಪ, ಬಾಳೆಹೊನ್ನೂರು, ತೀರ್ಥಹಳ್ಳಿಯಲ್ಲಿ ತಂಗಿದ್ದಾರೆ. ಕೆಲವರು ಪಟ್ಟಣದ ರಸ್ತೆಯ ಅಕ್ಕಪಕ್ಕದಲ್ಲಿ ಮಲಗಿದ್ದಾರೆ. ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿದ್ದರಿಂದ ಅಂಗಡಿ, ಹೋಟೆಲ್, ವಸತಿ ಗೃಹಗಳು ಮತ್ತು ಇನ್ನಿತರ ವ್ಯಾಪಾರ ಮಳಿಗೆಗಳಲ್ಲಿ ಆದಾಯ ಜಾಸ್ತಿಯಾಗಿದೆ.
ಉಭಯ ಗುರುಗಳು ವಾಸ್ತವ್ಯ ಇರುವ ಗುರು ಭವನಕ್ಕೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಗುರುದರ್ಶನ ಬೆಳಿಗ್ಗೆ 11ರಿಂದ ಮಧ್ಯಾಹ್ನದವರೆಗೆ ಮಾತ್ರ ಇದೆ. ಶಾರದಾ ಮಠದ ಎದುರಿನ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಮಕ್ಕಳ ಅಕ್ಷರಭ್ಯಾಸವೂ ನಡೆಯುತ್ತಿದ್ದು, ದಿನವೂ ಸಾವಿರಾರು ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯುತ್ತಿದೆ.
ಶಾರದಾ ಮಠದಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಇದ್ದು ದಿನನಿತ್ಯ 20 ಸಾವಿರಕ್ಕೂ ಹೆಚ್ಚು ಜನರು ಊಟ ಮಾಡುತ್ತಿದ್ದಾರೆ. ಹೆಚ್ಚಿನ ಪ್ರವಾಸಿಗರಿಂದ ವಿವಿಧ ರೀತಿಯ ಪೂಜೆ ಪುರಸ್ಕಾರಗಳು ನಡೆಯುವುದರಿಂದ ಶಾರದಾ ಪೀಠದ ಆದಾಯವು ಅಧಿಕವಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಶಾರದಾ ಮಠದ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.