ADVERTISEMENT

‘ಚಿಕ್ಕಮಗಳೂರು ಎಂದಿಗೂ ಮರೆಯಲಾಗದ ಊರು’; ಸಚಿವ ಸುನೀಲ್‌ ಕುಮಾರ್‌

‘ಸ್ನೇಹ ಸಮ್ಮಿಲನ’ ಕಾರ್ಯಕ್ರಮದಲ್ಲಿ ಸಚಿವ ಸುನೀಲ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 16:33 IST
Last Updated 4 ಅಕ್ಟೋಬರ್ 2021, 16:33 IST
ಚಿಕ್ಕಮಗಳೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ‘ಸ್ನೇಹ ಸಮ್ಮಿಲನ’ ಕಾರ್ಯಕ್ರಮದಲ್ಲಿ ಸಚಿವ ಸುನೀಲ್‌ ಕುಮಾರ್‌ ಮಾತನಾಡಿದರು. ಮುಖಂಡರಾದ ಎಚ್‌.ಸಿ.ಕಲ್ಮರುಡಪ್ಪ, ನರೇಂದ್ರ ಪೈ, ಸ.ಗಿರಿಜಾಶಂಕರ್‌, ಶಾಸಕ ಸಿ.ಟಿ.ರವಿ ಇದ್ದರು.
ಚಿಕ್ಕಮಗಳೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ‘ಸ್ನೇಹ ಸಮ್ಮಿಲನ’ ಕಾರ್ಯಕ್ರಮದಲ್ಲಿ ಸಚಿವ ಸುನೀಲ್‌ ಕುಮಾರ್‌ ಮಾತನಾಡಿದರು. ಮುಖಂಡರಾದ ಎಚ್‌.ಸಿ.ಕಲ್ಮರುಡಪ್ಪ, ನರೇಂದ್ರ ಪೈ, ಸ.ಗಿರಿಜಾಶಂಕರ್‌, ಶಾಸಕ ಸಿ.ಟಿ.ರವಿ ಇದ್ದರು.   

ಚಿಕ್ಕಮಗಳೂರು: ‘ಈ ಜಿಲ್ಲೆಯಲ್ಲಿ ನಡೆಸಿದ ಹೋರಾಟಗಳನ್ನು ಎಂದಿಗೂ ಮರೆಯಲಾಗದು. ಚಳವಳಿಗಳೇ ನಮ್ಮನ್ನು ಈ ಎತ್ತರಕ್ಕೆ ಬೆಳೆಸಿದ್ದು’ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ಕುಮಾರ್‌ ನೆನಪಿಸಿಕೊಂಡರು.

ಸ್ನೇಹಿತರ ಬಳಗದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ‘ಸ್ನೇಹ ಸಮ್ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಹೋರಾಟಗಳಲ್ಲಿ ರೋಚಕತೆ, ಆತ್ಮೀಯತೆ, ಖುಷಿ ಇತ್ತು. ಹೋರಾಟದಿಂದ ಎಂದೂ ಬೇಸರವಾಗಿಲ್ಲ’ ಎಂದು ಹೇಳಿದರು.

‘ಶಿವಮೊಗ್ಗ ಜಿಲ್ಲೆಯಲ್ಲಿ ಕಾಶ್ಮೀರ ಹೋರಾಟ ಮೂಲಕ ನನ್ನ ಹೋರಾಟದ ಬದುಕು ಆರಂಭವಾಯಿತು. ಚಿಕ್ಕಮಗಳೂರಿನ ಎಂ.ಜಿ ರಸ್ತೆ, ಐಜಿ ರಸ್ತೆ, ಮಾರುಕಟ್ಟೆ ರಸ್ತೆ ಸಹಿತ ವಿವಿಧೆಡೆಗಳಲ್ಲಿ ಬ್ಯಾನರ್‌ ಕಟ್ಟಿದ್ದೇವೆ. ಬ್ಯಾನರ್‌ ಕಟ್ಟುವುದು ಖುಷಿ ನೀಡುತ್ತಿತ್ತು’ ಎಂದರು.
‘ರಾಷ್ಟ್ರೀಯತೆ, ಹೋರಾಟದ ಸೆಳೆತ ಇತ್ತು. ಚಿಕ್ಕಮಗಳೂರಿನ ಬಸವನಹಳ್ಳಿಯ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದೆ. ಜಿಲ್ಲೆಯ ಎಲ್ಲ ಗ್ರಾಮಗಳು ಪರಿಚಿತ. ಪ್ರತಿ ಹೋರಾಟವೂ ಹೊಸ ಸ್ಫೂರ್ತಿ ನೀಡುತ್ತಿತ್ತು. ಸಿ.ಟಿ.ರವಿ, ನಾನು ಎಲ್ಲರೂ ಸೇರಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೆವು’ ಎಂದು ಹೇಳಿದರು.

ADVERTISEMENT

ಹೋರಾಟಗಳಲ್ಲಿ ಪಾಲ್ಗೊಂಡು ಕೇಸುಗಳ ಬಿದ್ದ ಪ್ರಸಂಗಗಳು, ಅನುಭವಿಸಿದ ಕಷ್ಟಸುಖಗಳನ್ನು ಅವರು ನೆನೆದರು.

ಶಾಸಕ ಸಿ.ಟಿ.ರವಿ ಮಾತನಾಡಿ, ‘ಜನರ ಭಾವನೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಜನರ ಆಶಯಕ್ಕೆ ತಕ್ಕಂತೆ ವಿಚಾರಕ್ಕೆ ಶಕ್ತಿ ತುಂಬಬೇಕು’ ಎಂದು ಹೇಳಿದರು.

‘ವಿಚಾರಕ್ಕಾಗಿ ನಾವು ಹೋರಾಟ ಮಾಡಿದೆವು. ಒಡನಾಡಿಗಳು ನಮಗೆ ಬೆನ್ನೆಲುಬಾಗಿದ್ದರು. ಅಯೋಧ್ಯೆ, ದತ್ತ ಪೀಠ ಹೋರಾಟದಲ್ಲಿ ತೊಡಗಿಕೊಂಡೆವು. ಕರಸೇವೆಗೆ ಅಯೋಧ್ಯೆಗೆ ಹೋಗಿದ್ದೆವು’ ಎಂದು ನೆನೆಪಿಸಿಕೊಂಡರು.

‘ನಾವು ವಿಚಾರದ ಪ್ರತಿನಿಧಿಗಳು. ಪಕ್ಷ ಬಿಟ್ಟು ಎಂದಿಗೂ ಬೇರೆ ಯೋಚನೆ ಮಾಡಿಲ್ಲ.

ನಮ್ಮ ಜತೆಗಿದ್ದ ಹಲವು ಹಿರಿಯರು ತಪಸ್ಸಿನ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ನಾವು ವಿಚಾರಕ್ಕಾಗಿ ಹೋರಾಟ ಮಾಡುತ್ತೇವೆ, ವ್ಯಕ್ತಿಗತ ರಾಜಕಾರಣ ಮಾಡಲ್ಲ’ ಎಂದು ಹೇಳಿದರು.

‘ಬದುಕಿನಲ್ಲಿ ಹಲವು ತಿರುವುಗಳನ್ನು ಕಂಡಿದ್ದೇವೆ. ನಾನು ಮತ್ತು ಸುನೀಲ್‌ ಒಡನಾಡಿಗಳು. ರಾಷ್ಟ್ರವಾದ, ಹಿಂದುತ್ವವನ್ನು ಪ್ರತಿಪಾದಿಸುತ್ತೇವೆ. ಹಲವಾರು ಹೋರಾಟಗಳನ್ನು ಮಾಡಿದ್ದೇವೆ’ ಎಂದು ಹೇಳಿದರು.

‘ಹೋರಾಟದಲ್ಲಿ ಜೊತೆಗಿದ್ದವರು ನಿಜವಾದ ಒಡನಾಡಿಗಳು, ಅವರನ್ನು ಎಂದಿಗೂ ಮರೆಯಬಾರದು. ಅಧಿಕಾರ ಇದ್ದಾಗ ಆಕರ್ಷಣೆಯಾಗಿ ಹಲವರು ಜೊತೆಯಾಗುತ್ತಾರೆ. ಆಂಥವರಿಂದು ತುಸು ಅಂತರ ಕಾಪಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ದತ್ತಪೀಠಕ್ಕಾಗಿ ಹೋರಾಟ ಮಾಡುತ್ತೇವೆ. ಬಾಬಾಬುಡನ್‌ ದರ್ಗಾದ ತಂಟೆಗೆ ನಾವು ಹೋಗಲ್ಲ. ದತ್ತಪೀಠದ ಲಕ್ಮಣರೇಖೆ ಉಲ್ಲಂಘನೆಯಾಗಬಾರದು ಎಂಬುದು ನಮ್ಮ ಗುರಿ’ ಎಂದರು.

ಮುಖಂಡ ಸಿ.ಎಚ್‌.ಲೋಕೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀಲ್‌ಕುಮಾರ್‌ ಅವರೊಂದಿಗಿನ ಒಡನಾಟವನ್ನು ಹಲವರು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.