ಚಿಕ್ಕಮಗಳೂರು:ಪ್ರತಿಯೊಬ್ಬರೂ ಅಕ್ಷರ ಕಲಿತು ಜ್ಞಾನವನ್ನು ಬೆಳೆಸಿಕೊಂಡು ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡರೆ ಸಮಾಜಮುಖಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರ ವ್ಯಕ್ತಿಯ ಬದುಕನ್ನು ರೂಪಿಸಲು ಶಿಕ್ಷಣ ನೆರವಾಗುತ್ತದೆ. ಅಲ್ಲದೆ ಬದುಕು ಹೇಗಿರಬೇಕೆಂಬುದನ್ನು ಕಲಿಸುವುದೇ ಶಿಕ್ಷಣ. ಸಾಕ್ಷರತೆ ಎಂಬುದು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಉದ್ಯೋಗ ಅವಕಾಶಗಳನ್ನು ಕಲ್ಪಿಸುತ್ತದೆ ಎಂದು ಹೇಳಿದರು.
ಕೇರಳ, ಗೋವಾ ಸಣ್ಣ ರಾಜ್ಯಗಳಾಗಿದ್ದರೂ ಕೂಡ ಬಹಳ ಹಿಂದೆಯೇ ಶೇ100 ರಷ್ಟು ಸಾಕ್ಷರತೆಯನ್ನು ಸಾಧಿಸಿವೆ. ಆದರೆ ನಮ್ಮ ಕರ್ನಾಟಕ ಬೇರೆ ಬೇರೆ ವಿಷಯದಲ್ಲಿ ಇಡೀ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ. ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಸಮಾಜದ ಬಡವರನ್ನು ಮುನ್ನೆಲೆಗೆ ತರುವ ಯತ್ನ ನಡೆದಿದೆ. 1990ನೇ ಇಸವಿಯಲ್ಲಿ ಈ ಜಿಲ್ಲೆಯ ದಿವಂಗತ ಸುಂದ್ರೇಶ್ ಅವರು ಸಾಕ್ಷರತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದರು
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಾವು ಶಿಕ್ಷಣ ಪಡೆದು ನಮ್ಮವರಿಗೂ ಶಿಕ್ಷಣ ಕಲಿಸುವುದೇ ಸಾಕ್ಷರತಾ ದಿನಾಚರಣೆಯ ಮುಖ್ಯ ಉದ್ದೇಶ. ಕೇರಳ ಸಂಪೂರ್ಣವಾಗಿ ಅಕ್ಷರಸ್ಥವಾಗಿ ದಶಕಗಳೇ ಕಳೆದಿವೆ. ಆದರೆ ನಾವಿನ್ನೂ ಸಂಪೂರ್ಣವಾಗಿ ಸಾಕ್ಷರರಾಗಿಲ್ಲ ಎಂದು ವಿಷಾದಿಸಿದರು.
ಶಿಕ್ಷಣ ಪಡೆದವರು ತಮ್ಮ ಸುತ್ತಮುತ್ತಲಿನ ಅನಕ್ಷರಸ್ಥರಿಗೆ ಕನಿಷ್ಠ ತಮ್ಮ ಸಹಿ ಮಾಡುವುದನ್ನು ಕಲಿಸಿದರೆ ಈ ಸಾಕ್ಷರತಾ ದಿನಾಚರಣೆಗೆ ಒಂದು ತೂಕ ಹೆಚ್ಚಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ರವೀಶ್, ಮುಖಂಡರಾದ ಕೆ.ಟಿ.ರಾಧಾಕೃಷ್ಣ, ಡಯಟ್ ಪ್ರಾಂಶುಪಾಲ ವೈ.ಬಿ.ಸಂದ್ರೇಶ್, ಜಿಲ್ಲಾ ನೋಡಲ್ ಅಧಿಕಾರಿ ಸಾಕ್ಷರತಾ ಇಲಾಖೆಯ ಮಂಜನಾಯ್ಕ್, ಸಂಪನ್ನೂಲ ವ್ಯಕ್ತಿ ಲೋಕೇಶ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.