ಬಂಧನ (ಸಾಂದರ್ಭಿಕ ಚಿತ್ರ)
ಆಲ್ದೂರು: ಮದ್ಯ ಸೇವನೆಗೆ ಹಣ ಕೊಡಲಿಲ್ಲವೆಂದು ಕುಪಿತಗೊಂಡ ಮಗ ಹೆತ್ತ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಬುಧವಾರ ಆವತಿ ಹೋಬಳಿಯ ಅರೇನೂರು ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ.
ಅರೇನೂರು ಹಕ್ಕಿಮಕ್ಕಿ ಗ್ರಾಮದ ಭವಾನಿ ಹತ್ಯೆಯಾದವರು. ಈಕೆಯ ಪುತ್ರ ಪವನ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ಯ ಸೇವಿಸಲು ಹಣ ನೀಡದಿದ್ದಕ್ಕೆ ಭವಾನಿ ಅವರನ್ನು ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಆರೋಪಿಯ ತಂದೆ ಸೋಮೇಗೌಡ ಅವರು ನೀಡಿದ ದೂರಿನ ಮೇರೆಗೆ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಬೆಂಗಳೂರಿನ ಬಾರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿ ಪವನ್ ಕಳೆದ ವರ್ಷ ದೀಪಾವಳಿಗೆ ಮನೆಗೆ ಬಂದವನು ಮತ್ತೆ ವಾಪಸ್ ಹೋಗಿರಲಿಲ್ಲ. ಕುಡಿತದ ಚಟಕ್ಕೆ ಬಿದ್ದಿದ್ದ ಆತ ನಿತ್ಯವೂ ಮದ್ಯ ಸೇವಿಸಲು ಹಣ ನೀಡುವಂತೆ ತನ್ನನ್ನು ಮತ್ತು ಪತ್ನಿಯನ್ನು ಪೀಡಿಸುತ್ತಿದ್ದ. ಬುಧವಾರ ಕೂಡ ಹಣ ನೀಡುವಂತೆ ಪೀಡಿಸುತ್ತಿದ್ದ. ನಮ್ಮ ಬಳಿ ಹಣ ಇಲ್ಲ ಎಂದ ತಾಯಿಯ ಮೇಲೆ ಕೊಡಲಿಯಿಂದ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಜಗಳ ಬಿಡಿಸಲು ಹೋದ ನನ್ನ ಮೇಲೂ ಹಲ್ಲೆಗೆ ಮುಂದಾದ. ನಾನು ತಪ್ಪಿಸಿಕೊಂಡು ತೋಟದ ಒಳಗೆ ಹೋಗಿ ಸ್ವಲ್ಪ ಹೊತ್ತಿನ ಬಳಿಕ ಬರುವಷ್ಟರಲ್ಲಿ ಆಕೆಯನ್ನು ಕೊಲೆ ಮಾಡಿ, ಮನೆಗೆ ಬೆಂಕಿ ಹಚ್ಚಿದ್ದ. ನೆರೆ–ಹೊರೆಯವರ ಸಹಾಯದಿಂದ ಬೆಂಕಿಯನ್ನು ನಂದಿಸಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.