ADVERTISEMENT

ಶೃಂಗೇರಿ– ವಿವಿಧೆಡೆ ವಿದ್ಯುತ್ ಇಲ್ಲದೆ ಪರದಾಟ

ಕರೆಂಟಿದ್ದರೂ ವೋಲ್ಟೇಜ್‌ ಇಲ್ಲ; ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವ ಮನಸ್ಸಿಲ್ಲ

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 13:00 IST
Last Updated 18 ಜುಲೈ 2018, 13:00 IST
ಶೃಂಗೇರಿ ತಾಲ್ಲೂಕಿನ ಮಸಿಗೆ ಗ್ರಾಮದಲ್ಲಿ ಅರ್ಧ ದೂರದಲ್ಲಿ ಸ್ಥಾಪಿತಗೊಂಡ ವಿದ್ಯುತ್‍ ಪರಿವರ್ತಕ.
ಶೃಂಗೇರಿ ತಾಲ್ಲೂಕಿನ ಮಸಿಗೆ ಗ್ರಾಮದಲ್ಲಿ ಅರ್ಧ ದೂರದಲ್ಲಿ ಸ್ಥಾಪಿತಗೊಂಡ ವಿದ್ಯುತ್‍ ಪರಿವರ್ತಕ.   

ಶೃಂಗೇರಿ: ಪಟ್ಟಣದಿಂದ ಸುಮಾರು ಐದು ಕಿ.ಮೀ. ದೂರದಲ್ಲಿರುವ ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸಿಗೆ ಗ್ರಾಮದ ಹಲವಾರು ಮನೆಗಳಲ್ಲಿ ವಿದ್ಯುತ್ ಸಂಪರ್ಕವಿದೆ. ಆದರೆ, ರಾತ್ರಿ ಸಮಯ ಎದುರಾಗುವ ವೋಲ್ಟೇಜ್ ಸಮಸ್ಯೆಗಳಿಂದ ಜನರು ತೊಂದರೆಗೀಡಾಗಿದ್ದಾರೆ.

1956ರಲ್ಲಿ ಶೃಂಗೇರಿಗೆ ವಿದ್ಯುತ್ ಸರಬರಾಜು ಆದ ಒಂದೇ ವರ್ಷದಲ್ಲಿ ವಿದ್ಯುತ್ ಸಂಪರ್ಕ ಪಡೆದ ಹಿರಿಮೆ ಮಸಿಗೆ ಗಾಮದ್ದಾಗಿತ್ತು. ಇಲ್ಲಿರುವ ಸಸಿಮನೆ, ಕಾಮಲೆ, ಕೆಂಜಿಗೆರೆ, ಬೆನಕನಹಳ್ಳಿ, ಹನಗೋಡು, ಕೋಗಾರು, ಕಲ್ಮೆಟ್ಟು ಮುಂತಾದ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ವಿದ್ಯುತ್ ಪರಿವರ್ತಕವನ್ನು ಅಳವಡಿಸಲಾಗಿತ್ತು. ಆದರೆ, ಇದು ಮನೆಗಳಿಂದ ಸುಮಾರು 1.5 ಕಿ.ಮೀ. ದೂರದಲ್ಲಿದೆ. ಹಾಗಾಗಿ ವೋಲ್ಟೇಜ್ ಸಮಸ್ಯೆ ತೀವ್ರವಾಗಿ ಸಂಜೆ ಸಮಯ ವಿದ್ಯುತ್ ಇದ್ದರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದಲ್ಲಿ ವಿದ್ಯುತ್ ಕಡಿತವಾಗುವುದು ಸಾಮಾನ್ಯವಾಗಿದೆ. ಬೇಸಿಗೆಯಲ್ಲಿ ನೀರಿನ ಪಂಪ್, ಅಡಿಕೆ ಸುಲಿಯುವ ಯಂತ್ರ ಚಾಲನೆ ರಾತ್ರಿ 10ರ ಬಳಿಕ ವೋಲ್ಟೇಜ್ ಬಂದಾಗ ಚಾಲನೆ ಮಾಡುವ ಸ್ಥಿತಿ ಉಂಟಾಗಿದೆ. ಇದರಿಂದ ರೈತರು ಹೈರಾಣಾಗಿದ್ದಾರೆ.

ADVERTISEMENT

ಸಚಿವರಿಗೆ ಮನವಿ: ಹಲವಾರು ಬಾರಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಮತ್ತೊಂದು ಪರಿವರ್ತಕ ಮಾತ್ರ ಮಂಜೂರಾಗಲಿಲ್ಲ. 2014ರಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಅವರು ನೀಡಿದ ಆದೇಶದಂತೆ ಮೆಸ್ಕಾಂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವಿದ್ಯುತ್ ಮಾರ್ಗವನ್ನು ಪರಿಶೀಲಿಸಿ, ಪರಿವರ್ತಕ ಅಳವಡಿಸಲು ಅಂದಾಜುಪಟ್ಟಿ ಸಿದ್ಧಪಡಿಸಿ ಮಂಜೂರಾತಿಗೆ ರವಾನಿಸಿದ್ದರು.

ಮಂದಗತಿಯ ಕಾಮಗಾರಿ: 2015ರಲ್ಲಿ ಮೆಸ್ಕಾಂ ಅಧಿಕಾರಿಗಳು ಗ್ರಾಮಕ್ಕೆ ಬಂದು ಪರಿವರ್ತಕ ಮಂಜೂರಾತಿಯ ಬಗ್ಗೆ ಅಧಿಕೃತವಾಗಿ ದೃಢಪಡಿಸಿ ಕಾಮಗಾರಿ ಪ್ರಾರಂಭಿಸಿದರು. 22 ಕಂಬಗಳ ಬದಲಿಗೆ ಕೇವಲ 9 ಕಂಬಗಳಿಗೆ ಅಂದಾಜು ಪಟ್ಟಿ ತಯಾರಿಸಿದ ಅಧಿಕಾರಿಗಳು ಅಗತ್ಯವಿರುವಲ್ಲಿಗೆ ಬೇಕಾದ ಪರಿವರ್ತಕವನ್ನು 13 ಕಂಬದಷ್ಟು ಹಿಂದೆ ಸ್ಥಾಪಿಸಿದರು. ಇದರಿಂದ ಗ್ರಾಮದಲ್ಲಿ ಯಥಾಸ್ಥಿತಿ ವೋಲ್ಟೇಜ್ ಸಮಸ್ಯೆ ಮುಂದುವರಿದಿದೆ. ಮೆಸ್ಕಾಂ ಅಧಿಕಾರಿಗಳು ಗ್ರಾಮಸ್ಥರಿಗೆ ಒಂದು ವರ್ಷದ ಒಳಗೆ ಅಗತ್ಯವಿರುವ ಕಾಮಲೆಗುಡ್ಡದ ಬಳಿ ಹೊಸ ಪರಿವರ್ತಕ ಅಳವಡಿಸಿಕೊಡುವ ಭರವಸೆ ನೀಡಿದ್ದರು. ಆದರೆ, ಮೂರು ವರ್ಷ ಕಳೆದರೂ ಭರವಸೆ ಈಡೇರಿಲ್ಲ.

ತಾಲ್ಲೂಕಿನ ಆನೆಗುಂದ, ವಿದ್ಯಾರಣ್ಯಪುರ, ಜೆ.ಸಿ.ಬಿ.ಎಂ ಕಾಲೇಜಿನ ಹಾಸ್ಟೆಲ್ ಬಳಿ ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ. ಮಳೆಗಾಲದಲ್ಲಿ ಮಳೆ ಮತ್ತು ಗಾಳಿ ಹೆಚ್ಚಾದ್ದರಿಂದ ನೆಮ್ಮಾರ್, ಕೆರೆಕಟ್ಟೆ, ತೆಕ್ಕೂರು, ಕುಂಚೇಬೈಲು, ಮೆಣಸೆ, ಹೊಳೆಕೊಪ್ಪ, ಬೇಗಾರ್ ಬೀದರಗೊಡು, ಕಾವಡಿ, ಅಡ್ಡಗದ್ದೆ ಮುಂತಾದ ಕಡೆಗಳಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಕಂಬ ತುಂಡಾಗಿ ನಾಲ್ಕೈದು ದಿನ ವಿದ್ಯುತ್ ಕಡಿತ ಉಂಟಾಯಿತು. ಟಿ.ಸಿ ಕೆಟ್ಟಿರುವುದರಿಂದ ಗ್ರಾಮೀಣ ಪ್ರದೇಶದ ಜನರು ಮೂರು ದಿನಗಳಿಂದ ಕತ್ತಲಿನಲ್ಲಿ ಕಾಲ ಕಳೆಯುವಂತಾಗಿದೆ.

ಕಂಪ್ಯೂಟರ್ ಸೆಂಟರ್, ಬ್ಯಾಂಕ್‌ಗಳಲ್ಲಿ ಇಂಟರ್‌ನೆಟ್‌ ಸ್ಥಗಿತಗೊಂಡು ಗ್ರಾಹಕರು ಪರದಾಡುವಂತಾಗಿದೆ. ಅಂಗಡಿ, ಮನೆಗಳಲ್ಲಿ ಇರುವ ಇನ್‍ವರ್ಟರ್‌ ಬ್ಯಾಟರಿ ಚಾರ್ಜ್ ಖಾಲಿಯಾಗಿ ಮೊಬೈಲ್ ಮತ್ತು ಟಿ.ವಿಯ ಸಂಪರ್ಕ ಕಡಿತಗೊಂಡಿವೆ. 9 ಗ್ರಾಮ ಪಂಚಾಯಿತಿ ಹಾಗೂ ಒಂದು ಪಟ್ಟಣ ಪಂಚಾಯಿತಿ ಒಳಗೊಂಡಿರುವ ಶೃಂಗೇರಿಯಲ್ಲಿ ಮಳೆ ಅತಿಯಾದರೆ ಮನೆಗಳಿಗೆ ನೀರು ಪೂರೈಕೆ ಮಾಡಲು ವಿದ್ಯುತ್ ಇಲ್ಲದ ಕಾರಣ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ಪಟ್ಟಣ ಪಂಚಾಯಿತಿ ಕುಡಿಯುವ ನೀರಿನ ಪೂರೈಕೆಗಾಗಿ ಒಂದು ದಿನಕ್ಕೆ ₹6 ಸಾವಿರ ಹಣವನ್ನು ಮೋಟರ್ ಓಡಿಸಲು ಡೀಸೆಲ್ ಖರೀದಿಗಾಗಿ ವ್ಯಯಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.