ADVERTISEMENT

ಕುದುರೆಮುಖ ಸಮಸ್ಯೆ: ಅಧಿವೇಶನದಲ್ಲಿ ಪ್ರಸ್ತಾಪ

ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಶಾಸಕ ರಾಜೇಗೌಡ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 3:13 IST
Last Updated 11 ಡಿಸೆಂಬರ್ 2025, 3:13 IST
ಟಿ.ಡಿ. ರಾಜೇಗೌಡ
ಟಿ.ಡಿ. ರಾಜೇಗೌಡ   

ಶೃಂಗೇರಿ: ‘ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬುಡಕಟ್ಟು ಪರಿಸರದಲ್ಲಿ ದಶಕಗಳಿಂದ ವಾಸಿಸುವ ಕುಟುಂಬಗಳಿಗೆ ಪುನರ್ವಸತಿ ಸಮಸ್ಯೆ ಬಗೆಹರಿಸಬೇಕು’ ಎಂದು ಶಾಸಕ ಟಿ.ಡಿ.ರಾಜೇಗೌಡ ಅವರು ಬೆಳಗಾವಿ ಅಧಿವೇಶನದಲ್ಲಿ ಒತ್ತಾಯಿಸಿದರು.

‘ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳಗಿರುವ ಮೂಲ ನಿವಾಸಿಗಳಿಗೆ 2008ರೊಳಗೆ ಪುನರ್ವಸತಿ ಕಲ್ಪಿಸಲು ಮತ್ತು ಪರಿಹಾರ ನೀಡಲು 2003ರಲ್ಲಿ ಸರ್ಕಾರ ಆದೇಶ ಮಾಡಿದೆ. ಕೆಲವರಿಗೆ ಇದುವರೆಗೂ ಪರಿಹಾರ ನೀಡಿಲ್ಲ. 2005ರ ಮೌಲ್ಯಮಾಪನ ಮಾಡಿದ ಪರಿಹಾರವನ್ನು ಈಗ ನೀಡಲು ಅರಣ್ಯ ಇಲಾಖೆ ಹೊರಟಿದೆ’ ಎಂದು ಹೇಳಿದರು.

ಇದರಿಂದ ಮೂಲ ನಿವಾಸಿಗಳಿಗೆ ಅನ್ಯಾಯವಾಗಿದೆ. ಹಣದ ಮೌಲ್ಯ ಹೆಚ್ಚಾಗಿದ್ದು, ಭೂಮಿಯ ಬೆಲೆ ಸಹ ಅಷ್ಟೇ ಹೆಚ್ಚಾಗಿದೆ. ಈಗ ನೀಡುತ್ತಿರುವ ಪುನರ್ವಸತಿ ಮೌಲ್ಯದಿಂದ ಅನೇಕ ಕುಟುಂಬಗಳು ಬೀದಿಗೆ ಬೀಳುವ ಸ್ಥಿತಿ ಇದೆ ಎಂದರು.

ADVERTISEMENT

‘ಸರ್ಕಾರದ ಯೋಜನೆಯಿಂದಾಗಿ ಮೂಲ ನಿವಾಸಿಗಳು ದಿಕ್ಕೆ ದೆಸೆ ಇಲ್ಲದಂತಾಗಿದ್ದಾರೆ. ಆದ್ದರಿಂದ ಈಗಿನ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕು. ನಾಲ್ಕು ಪಟ್ಟು ಹೆಚ್ಚಿನ ಪರಿಹಾರ ನಿಗದಿ ಮಾಡಬೇಕು. ಇಲ್ಲದಿದ್ದರೆ ಅಷ್ಟೇ ಪ್ರಮಾಣದ ಕಂದಾಯ ಭೂಮಿಯನ್ನು ಅವರಿಗೆ ನೀಡಬೇಕು ಸದನದಲ್ಲಿ ಆಗ್ರಹಿಸಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ದೂರವಾಣಿ ಮೂಲಕ ತಿಳಿಸಿದರು. 

ರಾಜೇಗೌಡ ಅವರು ಎತ್ತಿದ ಪ್ರಶ್ನೆಗೆ ಶಾಸಕ ನಯನಾ ಮೋಟಮ್ಮ ಮತ್ತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಕೂಡ ಧ್ವನಿಗೂಡಿಸಿದರು.

ಸಚಿವರಿಂದ ಭರವಸೆ’

‘ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ನಿವಾಸಿಗಳ ಪುನರ್ವಸತಿ ಮತ್ತು ಪರಿಹಾರ ಸಂಬಂಧ 2005ರ ಮೌಲ್ಯಮಾಪನ ಆದೇಶವನ್ನು ರೈತರ ಹಿತದೃಷ್ಟಿಯಿಂದ ಪುನರ್ ಪರಿಶೀಲಿಸಲಾಗುವುದು ಎಂಬ ಭರವಸೆಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ನೀಡಿದ್ದಾರೆ’ ಎಂದು ರಾಜೇಗೌಡ ತಿಳಿಸಿದರು. ‘ಇತ್ತೀಚಿಗೆ ಆನೆ ದಾಳಿಯಿಂದ ಇಬ್ಬರು ಮೃತಪಟ್ಟ ಕುಟುಂಬ ಮತ್ತು ಆ ಊರಿನ ಉಳಿದ ಕುಟುಂಬಗಳ ಪುನರ್ವಸತಿಗೆ ₹22 ಕೋಟಿ ನೀಡಲಾಗುತ್ತಿದೆ’ ಎಂದು ಸಚಿವರು ತಿಳಿಸಿದ್ದಾರೆ ಎಂದೂ ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.