ಶೃಂಗೇರಿ: ‘ಜ್ಞಾನದ ಆಗಾಧ ಪ್ರಪಂಚ ಪುಸ್ತಕ ರೂಪದಲ್ಲಿ ಹರಡಿಕೊಂಡಿದೆ. ಪುಸ್ತಕ ಓದುವುದರಿಂದ ನಮ್ಮೊಳಗಿನ ಚಿಂತನೆ ಬೆಳೆಯುತ್ತದೆ’ ಎಂದು ಶೃಂಗೇರಿಯ ಆದಿಚುಂಚನಗಿರಿ ಮಠದ ಗುಣನಾಥ ಸ್ವಾಮೀಜಿ ಹೇಳಿದರು.
ಬಿಜಿಎಸ್ ದರ್ಶಿನಿ ಸಂಯುಕ್ತ ಪ್ರೌಢಶಾಲೆಯ ಮೂವರು ವಿದ್ಯಾರ್ಥಿ ಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಅವರನ್ನು ಶೃಂಗೇರಿ ಆದಿಚುಂಚನಗಿರಿ ಶಾಖಾಮಠದ ಸಭಾಂಗಣದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
‘ಮನುಷ್ಯನ ಬದುಕನ್ನು ಉತ್ತಮ ಗೊಳಿಸಲು ಶಿಕ್ಷಣ ನೀಡಿದ ಕೊಡುಗೆ ಅನನ್ಯ. ಅಧುನಿಕ ಶೈಲಿಯ ಜೀವನದಲ್ಲಿ ನಾವು ಬಹು ಮಾಧ್ಯಮಗಳ ಪ್ರಭಾವಕ್ಕೆ ಒಳಗಾಗಿದ್ದೇವೆ. ಜೀವನದಲ್ಲಿ ಶಿಕ್ಷಣದ ಅಂಕ ಗಳಿಕೆಯ ಜೊತೆಗೆ ಬದುಕಿನ
ಅನುಭವಕ್ಕೆ ಪುಸ್ತಕಗಳು ನೀಡುವ ಅರಿವು ಶ್ರೇಷ್ಠವಾದುದು. ನಾವು ವೇದಿಕೆ ಯಲ್ಲಿ ಮಾತನಾಡುವ ವಿಚಾರಗಳು ಆಚಾರವಾಗಬೇಕು’ ಎಂದರು.
‘ಪ್ರತಿ ಶಾಲೆಗಳು ಶಿಕ್ಷಣದ ಜೊತೆಗೆ ಜೀವನದ ಗುರಿಯನ್ನು ತಿಳಿಸಿದಾಗ ಮಾತ್ರ ಮಕ್ಕಳಿಗೆ ಓದಿನ ಮಹತ್ವದ ಬಗ್ಗೆ ಅರಿವು ಉಂಟಾಗುತ್ತದೆ. ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಲು ಪುಸ್ತಕ ಜ್ಞಾನದ ಜೊತೆಗೆ ಮಸ್ತಕ ಜ್ಞಾನವೂ ಬೇಕು. ವಿಷಯ ಜ್ಞಾನದೊಂದಿಗೆ ಸಾಮಾನ್ಯ ಜ್ಞಾನವೂ ಅವಶ್ಯಕ ವ್ಯವಹಾರ ಜ್ಞಾನವಿ ದ್ದಾರೆ ಎಲ್ಲಿಯೂ ಗೆದ್ದು ಬರಬಹುದು. ಶಾಲಾ ಕಾಲೇಜುಗಳಲ್ಲಿ ಅನುಸರಿಸುವ ಪಠ್ಯ ಕ್ರಮವೇ ಬೇರೆ, ಜೀವನದಲ್ಲಿ ಅನುಸರಿಸಬೇಕಾದ ಪಠ್ಯ ಕ್ರಮವೇ ಬೇರೆ. ಜೀವನವೆಂಬ ಪರೀಕ್ಷೆಯನ್ನು ಪಾಸ್ ಮಾಡಿಕೊಳ್ಳಲು ಜೀವನ ಶಿಕ್ಷಣವನ್ನು ಪಡೆದಿರಬೇಕು’ ಎಂದು ಹೇಳಿದರು.
ಮಕ್ಕಳ ಮನಸ್ಸು ಬರೇ ಭತ್ತ ತುಂಬುವ ಚೀಲಗಳಾಗಬಾರದು, ಭತ್ತ ಬೆಳೆಯುವ ಗದ್ದೆಗಳೂ ಆಗಬೇಕು. ಜೀವನದ ಶಿಕ್ಷಣವೆಂದರೆ ವಿಷಯ ಸಂಗ್ರಹಣೆ ಮಾತ್ರವಲ್ಲ, ಅದು ಆರೋಗ್ಯ ಶಿಕ್ಷಣ, ನೈತಿಕ ಶಿಕ್ಷಣ, ಪರಿಸರ ಶಿಕ್ಷಣ, ಸಹಬಾಳ್ವೆಯ ಶಿಕ್ಷಣ ಇತ್ಯಾದಿ ಶಿಕ್ಷಣಗಳನ್ನೊಳಗೊಂಡ ಸಂಪೂರ್ಣ ಶಿಕ್ಷಣವೂ ಹೌದು ಎಂದು ಗುಣನಾಥ ಸ್ವಾಮೀಜಿ ಹೇಳಿದರು.
625 ಅಂಕ ಗಳಿಸಿದ ವಿದ್ಯಾರ್ಥಿನಿ ಶಮಾ ಎಸ್ ಶೆಟ್ಟಿ ಮಾತನಾಡಿ, ‘ತಂದೆ, ತಾಯಿ ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಕಷ್ಟಪಟ್ಟು ಓದಿದ್ದರಿಂದ ಸಾಧನೆ ಮಾಡಲು ಸಾಧ್ಯವಾಯಿತು. ಮುಂದೆ ವೈದ್ಯೆಯಾಗುವ ಕನಸು ಹೊಂದಿದ್ದೇನೆ’ ಎಂದರು.
ಪ್ರಾಂಶುಪಾಲ ಕೆ.ಸಿ ನಾಗೇಶ್, ಮುಖ್ಯಶಿಕ್ಷಕ ಕಿರಣ್, ಶಿಕ್ಷಕಿ ರಾಜಮ್ಮ ಹಾಗೂ ರಾಮಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.