ADVERTISEMENT

ಅಲ್ಲಲ್ಲಿ ಧರೆ, ಮನೆ ಕುಸಿತ

ನರಸಿಂಹರಾಜಪುರ ಮುಂದುವರಿದ ಮಳೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 16:44 IST
Last Updated 22 ಆಗಸ್ಟ್ 2018, 16:44 IST
ನರಸಿಂಹರಾಜಪುರ ತಾಲ್ಲೂಕು ಬಾಳೆಹಿತ್ತಲು ಹೊಳೆಕೊಪ್ಪ ರಸ್ತೆಯಲ್ಲಿ ಮೋರಿ ಕುಸಿದು ಹೋಗಿರುವುದು
ನರಸಿಂಹರಾಜಪುರ ತಾಲ್ಲೂಕು ಬಾಳೆಹಿತ್ತಲು ಹೊಳೆಕೊಪ್ಪ ರಸ್ತೆಯಲ್ಲಿ ಮೋರಿ ಕುಸಿದು ಹೋಗಿರುವುದು   

ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಬುಧವಾರವೂ ಸಹ ಮಳೆ ಮುಂದುವರಿದಿದ್ದು, ಹಲವು ಕಡೆ ಧರೆ ಹಾಗೂ ಮನೆಯು ಸಹ ಕುಸಿತವಾಗಿದೆ.

ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿಯ ಬಾಳೆಹಿತ್ತಲು- ಹೊಳೆಕೊಪ್ಪ ರಸ್ತೆಯಲ್ಲಿ ಮೋರಿಯೊಂದು ಕುಸಿದಿದ್ದು ರಸ್ತೆಯಲ್ಲಿ ಹೊಂಡ ಉಂಟಾಗಿದೆ. ಹೊಳೆಕೊಪ್ಪ ರಸ್ತೆಯು ಕಾನೂರು ಮುಖ್ಯ ರಸ್ತೆಯಿಂದ ಹೊಳೆಕೊಪ್ಪ –ಕಾಸನ- ಗುಡ್ಡೇಹಳ್ಳ ಮೂಲಕ ಎನ್.ಆರ್.ಪುರ, ಕೊಪ್ಪ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯಾಗಿದೆ.

ಕುದುರೆಗುಂಡಿ ಸಮೀಪದಲ್ಲಿ ಕಾನೂರು ರಸ್ತೆಗೆ ಹಳ್ಳದ ನೀರು ಬಂದು ರಸ್ತೆ ಕಡಿತಗೊಂಡಾಗ ಬಸ್ ಹಾಗೂ ಇತರೆ ನೂರಾರು ವಾಹನಗಳು ಇದೇ ರಸ್ತೆಯಿಂದ ಗುಡ್ಡೇಹಳ್ಳದ ಮೂಲಕ ಮುಖ್ಯರಸ್ತೆಗೆ ಬರುತ್ತವೆ. ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಓಡಾಡಿದ್ದರಿಂದ ಬಾಳೆಹಿತ್ಲು ಸಮೀಪದ ಹೊಳೆಕೊಪ್ಪ ರಸ್ತೆಯಲ್ಲಿ ಮೋರಿ ಕುಸಿದು ಹೊಂಡಬಿದ್ದಿದೆ. ಅಲ್ಲದೆ, ರಸ್ತೆಯ ಇನ್ನೊಂದು ಭಾಗ ಕುಸಿದಿದೆ. ಈ ಗ್ರಾಮದ ಮೂಲಕ ಹಾದು ಹೋಗುವ ರಸ್ತೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಸಂಬಂಧಪಟ್ಟವರು ಇತ್ತ ಗಮನಹರಿಸಿ ರಸ್ತೆ ಅಭಿವೃದ್ಧಿಪಡಿಸ ಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ADVERTISEMENT

ರಸ್ತೆ ಕುಸಿದು ಅಡಿಕೆ ತೋಟಕ್ಕೆ ಬಿದ್ದ ಮಣ್ಣು: ತಾಲ್ಲೂಕಿನ ಹರಾವರಿ ಗ್ರಾಮದ ತಟ್ಟೆಸರದಿಂದ ಹೊಸಗದ್ದೆ ಹೋಗುವ ರಸ್ತೆ ಕುಸಿದು ರಾಜೇಶ, ಅನಿಲ, ನಾಗರಾಜ್, ಸುಧೀರ್ ಎಂಬುವರು ಅಡಿಕೆ ತೋಟಕ್ಕೆ ಧರೆಕುಸಿದಿದೆ. ಸ್ಥಳಕ್ಕೆ ಕಾನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು.

ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಉಮಾದೇವಿ ಅವರ ಮನೆಯ ಗೋಡೆ ಬುಧವಾರ ಬೆಳಿಗ್ಗೆ ಕುಸಿದಿದ್ದು ನಷ್ಟವುಂಟಾಗಿದೆ. ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್.ರಾಜಶೇಖರ್, ಗ್ರಾಮ ಲೆಕ್ಕಾಧಿಕಾರಿ ರಾಜು ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.