ADVERTISEMENT

ಸುವರ್ಣವನ ಈಗ ಸುಂದರ ಉದ್ಯಾನ

ಸೌತಿಕೆರೆಯ ಪ್ರಕೃತಿ ಸೌಂದರ್ಯದ ತಾಣ ಉದ್ಘಾಟನೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 2:34 IST
Last Updated 3 ಜನವರಿ 2021, 2:34 IST
ನರಸಿಂಹರಾಜಪುರದ ಸೌತಿಕೆರೆಯಲ್ಲಿ ನಿರ್ಮಾಣವಾಗಿರುವ ಪ್ರಕೃತಿದತ್ತವಾದ ಸುವರ್ಣವನ
ನರಸಿಂಹರಾಜಪುರದ ಸೌತಿಕೆರೆಯಲ್ಲಿ ನಿರ್ಮಾಣವಾಗಿರುವ ಪ್ರಕೃತಿದತ್ತವಾದ ಸುವರ್ಣವನ   

ನರಸಿಂಹರಾಜಪುರ: ಸ್ವಾತಂತ್ರ್ಯ ದೊರೆತ ಸವಿನೆನಪಿಗಾಗಿ ತಾಲ್ಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೌತಿಕೆರೆ ಗ್ರಾಮದ ಪ್ರಕೃತಿ ದತ್ತವಾದ ಗಿಡ ಮರಗಳ ಮಧ್ಯೆ ನಿರ್ಮಿಸಿರುವ ಸುವರ್ಣವನ ಪ್ರಸ್ತುತ ಉದ್ಯಾನವಾಗಿ ರೂಪುಗೊಂಡಿದೆ. ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲು ಸಿದ್ಧವಾಗಿದೆ.

ಸೌತಿಕೆರೆ ಗ್ರಾಮದ 10 ಹೆಕ್ಟೇರ್‌ಲ್ಲಿ ಸುಮಾರು ₹ 58 ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿ ಅರಣ್ಯ ವಿಭಾಗ ನಿರ್ಮಿಸಿದ್ದ ಸುವರ್ಣವನವನ್ನು 1999ರಲ್ಲಿ ಅಂದಿನ ಶಿಕ್ಷಣ ಸಚಿವರಾಗಿದ್ದ ಎಚ್.ಜಿ. ಗೋವಿಂದೇಗೌಡರು ಉದ್ಘಾಟಿಸಿದ್ದರು. ನಂತರ ನಿರ್ವಹಣೆ ಕೊರತೆಯಿಂದ ಇದು ಸೊರಗಿತ್ತು. ಪ್ರಸ್ತುತ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಇಲಾಖೆಯಿಂದ ಅಭಿವೃದ್ಧಿ ಪಡಿಸಲಾಗಿದೆ.

ಉದ್ಯಾನದಲ್ಲಿ ವಾಯುವಿಹಾರಕ್ಕೆ ಅನುಕೂಲವಾಗುವಂತೆ (2ಕಿ.ಮೀ) ಗ್ರಾವೆಲ್ ಹಾಕಿ ರಸ್ತೆ ನಿರ್ಮಿಸಲಾಗಿದೆ. ‘ಎಡೇಹಳ್ಳಿ’ ಎಂಬ ಹೆಸರಿನಿಂದ ‘ನರಸಿಂಹರಾಜಪುರ’ ಎಂದು ಹೆಸರು ಬರಲು ಕಾರಣವಾದ ಕಂಠೀರವ ನರಸಿಂಹರಾಜ ಒಡೆಯರ್ ಹೆಸರಿನಲ್ಲಿ ಬಯಲುರಂಗ ಮಂದಿರ ನಿರ್ಮಿಸಿ ವೇದಿಕೆಯಲ್ಲಿ ಅವರ ಭಾವಚಿತ್ರ ಬಿಡಿಸಲಾಗಿದೆ. ವಾಯುವಿಹಾರಕ್ಕೆ ಬರುವವರಿಗೆ ಯೋಗ ಮಾಡಲು ಬಯಲು ರಂಗಮಂದಿರದಲ್ಲಿ ಯೋಗಾಸನ ಭಂಗಿಯನ್ನು ಚಿತ್ರಿಸಲಾಗಿದೆ.

ADVERTISEMENT

ಶುದ್ಧ ಕುಡಿಯುವ ನೀರಿನ ಘಟಕ, ವಿಶ್ರಾಂತಿ ಕೊಠಡಿ ಹೊಸ ರೂಪ ಪಡೆದಿದೆ. ಉಪಾಹಾರ ಗೃಹ ನಿರ್ಮಿಸಲಾಗಿದೆ. ಮಕ್ಕಳ ಮನರಂಜನೆಗೆ ಜಾರುಬಂಡೆ, ಜೋಕಾಲಿ, ಅಲ್ಲಲ್ಲಿ ಮರಗಳ ಮಧ್ಯೆ ದೊಡ್ಡ ಬಲೆಗಳನ್ನು ಅಳವಡಿಸಿ ಸಾಹಸಮಯ ಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಉದ್ಯಾನದ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಪಟ ಅಳವಡಿಸಲು ಸಿದ್ಧತೆ ನಡೆದಿದೆ. ನಕ್ಷತ್ರವನ, ರಾಶಿವನ ನಿರ್ಮಿಸಲಾಗಿದೆ. ಹಳೆಯ ಮರಗಳು, ಹೊಸ ಮರಗಳ ಮೇಲೆ ನಾಮಫಲಕ ಕಾಣಿಸುತ್ತಿದೆ.

ತಡೆಗೋಡೆ ಮೇಲೆ ವನ್ಯಪ್ರಾಣಿಗಳ ಚಿತ್ರ, ಬೋಟಿಂಗ್ ಸೌಲಭ್ಯ ಹೀಗೆ ಉದ್ಯಾನದ ಮೆರುಗು ಹೆಚ್ಚಿಸಲು ಕ್ರಮವಾಗುತ್ತಿದೆ.

ಸಾಹಸ ಕ್ರೀಡೆಗೆ ಅವಕಾಶ
ಉದ್ಯಾನವನ್ನು ಪಿಕ್‌ನಿಕ್ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಮರಗಳ ನಡುವೆ ಲೋ ಲೆವಲ್ ಕ್ಯಾನೋಪಿ ವಾಕ್, ಹೈ ರೋಪ್ ಕೋರ್ಸ್ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಉದ್ಯಾನದ ಸುತ್ತಲೂ ಸೈಕ್‌ಲಿಂಗ್ ಪಾತ್ ನಿರ್ಮಿಸಿದ್ದು, ಬಾಡಿಗೆ ಸೈಕಲ್ ನೀಡಲಾಗುತ್ತದೆ. ಉದ್ಯಾನ ನಿರ್ವಹಣೆಗಾಗಿ ಸಿಸಿಎಫ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಉದ್ಘಾಟನೆ ಬಳಿಕ ಪ್ರವೇಶ ಶುಲ್ಕ ನಿಗದಿಪಡಿಸಲಾಗುವುದು. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಪ್ರವೇಶಕ್ಕೆ ಅವಕಾಶ ಎಂದು ವಲಯ ಅರಣ್ಯಾಧಿಕಾರಿ ರಂಗನಾಥ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.