ಚಿಕ್ಕಮಗಳೂರು: ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಪರಿಸರ ಕಾಳಜಿ ಹೊಂದಿದ್ದು ಅದನ್ನು ನಾವುಗಳು ಅರ್ಥೈಹಿಸಿಕೊಂಡು ಅನುಸರಿಸಬೇಕು ಎಂದು ಲೇಖಕ ಡಾ.ಕಲೀಮ್ ಉಲ್ಲಾ ಹೇಳಿದರು.
ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟದ ಭರವಸೆಯ ಕೋಶದ ವತಿಯಿಂದ ಏರ್ಪಡಿಸಿದ್ದ ತೇಜಸ್ವಿಯವರ ಸಾಹಿತ್ಯದಲ್ಲಿ ಪರಿಸರಪ್ರಜ್ಞೆ ಹಾಗೂ ವೈಚಾರಿಕತೆ ಎಂಬ ವಿಶೇಷ ಉಪನ್ಯಾಸದಲ್ಲಿ ಅವರು ಅಭಿಪ್ರಾಯಪಟ್ಟರು.
ತೇಜಸ್ವಿ ಅವರು ಮೂಡಿಗೆರೆಯಂತಹ ಗ್ರಾಮೀಣ ಪರಿಸರದಲ್ಲಿ ಬಂದು ನೆಲೆಯೂರಿ ಕಾಡನ್ನು ಅರ್ಥಮಾಡಿಕೊಂಡು 55 ಕಥೆಗಳನ್ನು ಬರೆದಿದ್ದಾರೆ. ಬಹುತೇಕವು ಕಾಡಿನ ಸಂಸ್ಕೃತಿಯನ್ನೇ ಪರಿಚಯಿಸುತ್ತವೆ. ಪರಿಸರದ ಕಥೆ, ಏರೋಪ್ಲೇನ್‌ಚಿಟ್ಟೆ ಮೊದಲಾದ ಕಥೆಗಳು ಪಠ್ಯಪುಸ್ತಕಗಳಿಂದ ದೊರೆಯುವ ತಿಳಿವಳಿಕೆಗಳಿಗಿಂತ ಲೋಕಜ್ಞಾನ ಮುಖ್ಯ ಎಂಬುದ ವೈಶಿಷ್ಟ್ಯವನ್ನು ಪ್ರತಿಪಾದಿಸುತ್ತವೆ ಎಂದರು.
ಕಾಜಾಣ ಪಕ್ಷಿ 136 ಪಕ್ಷಿಗಳನ್ನು ಅನುಕರಿಸುತ್ತದೆ. ಹಾಗಾಗಿ ಕಣ್ಣಿಗೆ ಕಾಣಿಸುವುದಷ್ಟೇ ಇಕಾಲಜಿಯ ಗುಣವಲ್ಲ ಅದೊಂದು ಅಂತರವಲಯದ ಸಂಬಂಧವೇ ಆಗಿದೆ. ಮರ ಹಾಗೂ ಪಕ್ಷಿಗೂ ನೀರು ಮತ್ತು ಮರದ ಬೇರಿಗೂ ನಿಗೂಢವಾದ ಸಂಬಂಧವಿದೆ. ಹೀಗೆ ಪ್ರಕೃತಿಯಲ್ಲಿ ಶಕ್ತಿಯುತ ಗುಣವಿದೆ ಎಂಬುದು ತೇಜಸ್ವಿಯವರ ದೂರದೃಷ್ಟಿ ನಿಲುವಾಗಿತ್ತು. ಇದಕ್ಕೆ ಅವರ ‘ಮಹಾ ಪಲಾಯನ’ ಕೃತಿ ಉತ್ತಮ ನಿದರ್ಶನ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಕೆ.ಸಿ.ಚಾಂದಿನಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮೂಡಲಗಿರಿಯಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಪುಷ್ಪಾಭಾರತಿ, ಕನ್ನಡ ಉಪನ್ಯಾಸಕ ಡಾ.ಸಂಪತ್, ಉಪನ್ಯಾಸಕರಾದ ಸುಧಾ, ನಸ್ರೀನ್‌ಬಾನು, ಪರ್ವತೇಗೌಡ, ಜಯಕುಮಾರ್, ಆದಿನಾರಾಯಣ, ಚಂದ್ರಶೇಖರ್, ನಟರಾಜ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.