ADVERTISEMENT

ಕಡಬಗೆರೆ: ಭಿಕ್ಷೆ ಬೇಡಿ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಾಣ

ಕಡಬಗೆರೆ; ಟಾರ್ಪಲ್ ಬಳಸಿ ತಾತ್ಕಾಲಿಕ ತಂಗುದಾಣ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2023, 15:26 IST
Last Updated 10 ಸೆಪ್ಟೆಂಬರ್ 2023, 15:26 IST
ಬಾಳೆಹೊನ್ನೂರು ಸಮೀಪದ ಕಡಬಗೆರೆಯಲ್ಲಿ ಬಸ್ ನಿಲ್ದಾಣ ಹೋರಾಟ ಸಮಿತಿ ಸದಸ್ಯರು ಬಿಕ್ಷಾಟನೆ ನಡೆಸಿ ಬಸ್‌ ನಿಲ್ದಾಣಕ್ಕೆ ವಂತಿಗೆ ಸಂಗ್ರಹಿಸಿದರು
ಬಾಳೆಹೊನ್ನೂರು ಸಮೀಪದ ಕಡಬಗೆರೆಯಲ್ಲಿ ಬಸ್ ನಿಲ್ದಾಣ ಹೋರಾಟ ಸಮಿತಿ ಸದಸ್ಯರು ಬಿಕ್ಷಾಟನೆ ನಡೆಸಿ ಬಸ್‌ ನಿಲ್ದಾಣಕ್ಕೆ ವಂತಿಗೆ ಸಂಗ್ರಹಿಸಿದರು    

ಕಡಬಗೆರೆ(ಬಾಳೆಹೊನ್ನೂರು): ದೇವದಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಬಗೆರೆಯಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಬಸ್ ನಿಲ್ದಾಣ ನಿರ್ಮಿಸಲು ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ‘ಕಡಬಗೆರೆ ಬಸ್ ನಿಲ್ದಾಣ ಹೋರಾಟ ಸಮಿತಿ ಸದಸ್ಯರು’ ಭಿಕ್ಷಾಟನೆ ಮೂಲಕ ಸಾರ್ವಜನಿಕರಿಂದ  ಹಣ ಸಂಗ್ರಹಿಸಿ ತಾತ್ಕಾಲಿಕವಾಗಿ ಟಾರ್ಪಲ್ ಬಳಸಿ ತಂಗುದಾಣ ನಿರ್ಮಿಸಿದರು.

ಸಮತಿ ಸದಸ್ಯ ಚಂದ್ರಶೇಖರ್ ರೈ ಮಾತನಾಡಿ, ‘ ಆರು ವರ್ಷಗಳಿಂದ ಕಡಬಗೆರೆಯಲ್ಲಿ ಸಾರ್ವಜನಿಕ ಬಸ್ ನಿಲ್ದಾಣ ನಿರ್ಮೀಸುವಂತೆ ಒತ್ತಾಯಿಸಲಾಗಿತ್ತು. ಆಗ ಜಾಗದ ಸಮಸ್ಯೆ ಇತ್ತು. ಹೋರಾಟದ ನಂತರ ಜಾಗದ ಸಮಸ್ಯೆ ಬಗೆಹರಿದಿದೆ. ಬಸ್ ನಿಲ್ದಾಣದ ಕಾಮಗಾರಿ ಅರ್ಧಂಬರ್ದ ಆಗಿದ್ದು ಏಳು ತಿಂಗಳಿನಿಂದ ಸ್ಥಗಿತಗೊಂಡಿದೆ. ಬಾಳೆಹೊನ್ನೂರು, ಚಿಕ್ಕಮಗಳೂರು, ಬಿದಿರೆ ಸೇರಿದಂತೆ ವಿವಿಧಡೆಗೆ ತೆರಳಲು ನಿತ್ಯ ಸಾವಿರಾರು ಜನರು ಇಲ್ಲಿ ಸೇರುತ್ತಾರೆ. ಮಳೆ, ಬಿಸಿಲಿನಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾಯಲು ಅಂಗಡಿ ಮುಂಗಟ್ಟು, ಮರದ ನೆರಳನ್ನು ಆಶ್ರಯಿಸಬೇಕಾಗಿದೆ ಎಂದು ಆರೋಪಿಸಿದರು.

ಕಾಮಗಾರಿ ಪೂರ್ಣಗೊಳಿಸುವಂತೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಅರ್ಜಿ ಸಲ್ಲಿಸಿ ಮನವಿ ನೀಡಿದರೂ ಸ್ಪಂದಿಸಿರಲಿಲ್ಲ.ಇದರಿಂದ ಬೇಸತ್ತು ಇಂದು ಸಾರ್ವಜನಿಕರಿಂದ ಭಿಕ್ಷೆ ಮೂಲಕ ₹6 ಸಾವಿರ ಸಂಗ್ರಹಿಸಿ ಟಾರ್ಪಲ್ ಖರೀದಿಸಿ ತಾತ್ಕಾಲಿಕವಾಗಿ  ನಿಲ್ದಾಣ ನಿರ್ಮಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಕುರ್ಚಿಗಳನ್ನು ಹಾಕಲಾಗಿದೆ. ಗ್ರಾಮ ಪಂಚಾಯಿತಿ ತಕ್ಷಣ ಇಲ್ಲಿ ಖಾಯಂ ಬಸ್ ನಿಲ್ದಾಣ ನಿರ್ಮಾಣವನ್ನು ಪೂರ್ಣಗೊಳಿಸಬೇಕು.ತಟಸ್ಥ ಧೋರಣೆಯನ್ನು ಜನಪ್ರತಿನಿಧಿಗಳು ಮುಂದುವರಿಸಿದರೆ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.

ADVERTISEMENT

ಸುರೇಶ್ ಕೋಟ್ಯಾನ್, ಸಂಪತ್, ಪ್ರಶಾಂತ್, ರಾಕೇಶ್, ಅಜಿತ್ ಭಟ್, ಕುಮಾರ್ ಇದ್ದರು.

ಟಾರ್ಪಲ್ ಬಳಸಿ ಮಾಡಿರುವ ಬಸ್ ನಿಲ್ದಾಣ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.