ಕಡೂರು: ಸುಡು ಬಿಸಿಲಿನಲ್ಲಿ ಬಂದವರಿಗೆ ತಂಪೆರೆಯುವ ಎಳನೀರು ದರ ಇನ್ನಷ್ಟು ಹೆಚ್ಚಾಗಿದೆ. ಚಿಲ್ಲರೆಯಾಗಿ ಒಂದು ಎಳನೀರಿಗೆ ₹50-60 ದರ ಕಂಡಿದ್ದು, ಸಾರ್ವಕಾಲಿಕ ದಾಖಲೆಯಾದರೂ, ಬೆಳೆಗಾರರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ ಎಂಬುದು ರೈತರ ಅಂಬೋಣ.
ಕಡೂರು ಭಾಗದಲ್ಲಿ ಬೆಳೆಯುವ ಎಳನೀರಿಗೆ ವಿಶಿಷ್ಟ ರುಚಿ ಇರುವುದರಿಂದ ಹೆಚ್ಚಿನ ಬೇಡಿಕೆಯಿದೆ. ಈ ಎಳನೀರು ಮುಂಬೈ, ದೆಹಲಿ, ಮಂಗಳೂರು, ಪುಣೆ, ನಾಸಿಕ್‌ಗೂ ರವಾನೆಯಾಗುತ್ತದೆ. ಪ್ರತಿವಾರ ಕನಿಷ್ಠ 12ರಿಂದ 15 ಲಾರಿ ಲೋಡ್ ಎಳನೀರು ಹೊರರಾಜ್ಯಗಳಿಗೆ ಹೋಗುತ್ತದೆ. ಪ್ರತಿ ಲೋಡ್‌ನಲ್ಲಿ 12ರಿಂದ 14 ಸಾವಿರ ಎಳನೀರು ಇರುತ್ತದೆ.
ಸ್ಥಳೀಯ ವ್ಯಾಪಾರಿಗಳು ರೈತರ ತೋಟಗಳಿಗೇ ಹೋಗಿ ಎಳನೀರು ಖರೀದಿಸುತ್ತಾರೆ. ಒಂದು ಎಳನೀರಿಗೆ ₹20ರಂತೆ ನೀಡಿ ಖರೀದಿಸುತ್ತಾರೆ. ಎಳನೀರು ಕೆಡವುವ, ಸಾಗಿಸುವ ಖರ್ಚು ವ್ಯಾಪಾರಿಯದೇ. ಒಂದೂವರೆ ತಿಂಗಳಿಗೊಮ್ಮೆ ಎಳನೀರು ಕೊಟ್ಟರೆ ರೈತರಿಗೆ ಲಾಭದಾಯಕ. ತೆಂಗಿನ ಕಾಯಿಯಲ್ಲಿ ಇಷ್ಟು ಲಾಭವಿಲ್ಲ. ಹಾಗಾಗಿ ರೈತರೂ ಎಳನೀರು ಕೊಡುವುದೇ ಲೇಸೆಂದು ನಿರ್ಧರಿಸಿದ್ದಾರೆ ಎನ್ನುತ್ತಾರೆ ಬೆಳೆಗಾರರು.
ಬಯಲು ಪ್ರದೇಶವಾದ ಕಡೂರಿನಲ್ಲಿ ತೆಂಗು ಪ್ರಮುಖ ಬೆಳೆ. ಆದರೆ, ಕಳೆದ ವರ್ಷ ಬರಗಾಲ, ಗರಿರೋಗ ಮುಂತಾದ ಕಾರಣಗಳಿಂದ ತೆಂಗಿನ ಫಸಲು ಕಡಿಮೆಯಾಯಿತು. ಫಸಲು ಕುಸಿದಿದ್ದರಿಂದ ಕಳೆದೆರಡು ತಿಂಗಳುಗಳಿಂದ ತೆಂಗಿನ ಕಾಯಿ ಬೆಲೆ ಏರುಮುಖದಲ್ಲಿದೆ. ಸಹಜವಾಗಿಯೇ ಎಳನೀರಿನ ಬೆಲೆಯೂ ಏರುತ್ತಲೇ ಇದೆ. ಎಳನೀರು ಖರೀದಿಸಿದ ಸ್ಥಳೀಯ ವ್ಯಾಪಾರಿಗಳು ಹೊರರಾಜ್ಯಗಳಿಗೆ ಕಳುಹಿಸುವ ವ್ಯಾಪಾರಿಗಳಿಗೆ ₹35ರಂತೆ ಮಾರಾಟ ಮಾಡುತ್ತಾರೆ ಎಂಬುದು ರೈತರು ನೀಡುವ ಮಾಹಿತಿ.
ಸ್ಥಳೀಯವಾಗಿ ಎಳನೀರು ಮಾರಾಟ ಮಾಡುವವರೂ ಕಡೂರಿನಲ್ಲಿ ಸಾಕಷ್ಟಿದ್ದಾರೆ. ನಿತ್ಯ 150-200 ಎಳನೀರನ್ನು ರಸ್ತೆ ಬದಿಯಿಟ್ಟು ಮಾರಾಟ ಮಾಡುತ್ತಾರೆ. ಒಂದು ಎಳನೀರಿಗೆ ₹50ರಿಂದ ₹60 ರ ತನಕ ಬೆಲೆಯಿದೆ. ಚಳಿಗಾಲ ಆರಂಭ ಆಗಿರುವುದರಿಂದ ಜನರು ಹೆಚ್ಚು ಎಳನೀರು ಕುಡಿಯುವುದಿಲ್ಲ ಎನ್ನುವ ಭಾವನೆ ಇದ್ದರೂ, ನಿತ್ಯ 100ಕ್ಕೂ ಹೆಚ್ಚು ಎಳನೀರು ಮಾರಾಟ ಮಾಡುತ್ತೇನೆ ಎನ್ನುತ್ತಾರೆ ಎಳನೀರು ಚಿಲ್ಲರೆ ವ್ಯಾಪಾರಿ ಟೀಕೇಶ್.
ಸ್ಥಳೀಯವಾಗಿ ರಸ್ತೆ ಬದಿ ಎಳನೀರು ಮಾರಾಟ ಮಾಡುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರು, ಹುಷಾರು ತಪ್ಪಿದವರೇ ಪ್ರಮುಖ ಗ್ರಾಹಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.