ತರೀಕೆರೆ: ಅರೆ ಮಲೆನಾಡು ಪ್ರದೇಶವಾದ ತರೀಕೆರೆ ತಾಲ್ಲೂಕಿನಲ್ಲಿ ಕಸಬಾ, ಲಕ್ಕವಳ್ಳಿ, ಅಮೃತಾಪುರ ಮತ್ತು ಲಿಂಗದಹಳ್ಳಿ ಹೋಬಳಿಯಲ್ಲಿ ಕಂದಾಯ ಭೂಮಿಯ ಜತೆಗೆ ಸಾಕಷ್ಟು ಪ್ರದೇಶ ಅರಣ್ಯ ಪ್ರದೇಶವನ್ನು ಒಳಗೊಂಡಿದೆ. ಇದರಿಂದ ಈ ತಾಲ್ಲೂಕಿನಲ್ಲಿ ರೈತರ ಭೂಮಿ ಮತ್ತು ನಿವೇಶನಕ್ಕಾಗಿ ಅರಣ್ಯ ಇಲಾಖೆ ಮತ್ತು ರೈತರ ನಡುವೆ ಸಂಘರ್ಷಗಳು ನಿರಂತರ ಸಾಗಿವೆ.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ತಾಲ್ಲೂಕಿನ ಲಕ್ಕವಳ್ಳಿ ಹೋಬಳಿಯ ಗೋಪಾಲ ಕಾಲೊನಿ, ಗೋಪಾಲ ಭೂಸೇನಹಳ್ಳಿ ವ್ಯಾಪ್ತಿಯಲ್ಲಿ ನಿವೇಶನ ಮತ್ತು ಭೂಮಿ ಮಂಜೂರು ಮಾಡಲಾಗಿದೆ. ಭದ್ರಾ ಮುಳುಗಡೆ ಸಂತ್ರಸ್ತರಾದ ಎನ್.ಆರ್.ಪುರ ತಾಲ್ಲೂಕಿನ ಸೂಸಲ್‍ವಾನಿ, ಮೆಣಸೂರು, ಲಕ್ಕುಂದ, ದಾನವಾಸ, ರಾವೂರು ಗ್ರಾಮಗಳ ಜನರಿಗೆ 1958ರಿಂದ 1962ರವರೆಗೆ ತರೀಕೆರೆ ತಾಲ್ಲೂಕಿನ ರಂಗೇನಹಳ್ಳಿ, ಬಾವಿಕೆರೆ, ಕುಂದೂರು, ಮಾಳಿಕೊಪ್ಪ, ಮಾರಿದಿಬ್ಬ ಮತ್ತು ಗುಡ್ಡದ ಬೀರನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ನಿವೇಶನ ಹಾಗೂ ಜಮೀನು ಮಂಜೂರು ಮಾಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಗಳ ಸರಿಯಾದ ರೀತಿಯ ಸಮನ್ವಯತೆ ಇಲ್ಲದ ಕಾರಣ ಆಯಾ ಕಾಲಘಟ್ಟದಲ್ಲಿ ಕೆಲ ಕಾನೂನು ಮಾರ್ಪಾಡಾಗಿದ್ದರೂ ಸಹ ಆ ಸಂದರ್ಭದಲ್ಲಿ ಭೂಮಿಗೆ ಸಂಬಂಧಿಸಿದ ದಾಖಲೆಗಳು ಸರಿಯಾದ ರೀತಿಯಲ್ಲಿ ದಾಖಲಾಗಿಲ್ಲ. ಇದರಿಂದ ಅರಣ್ಯ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ರೈತರು ಹಾಗೂ ನಿವಾಸಿಗಳ ಸಮಸ್ಯೆಗಳು ಕಗ್ಗಂಟಾಗಿಯೇ ಉಳಿದಿವೆ.
ಲಕ್ಕವಳ್ಳಿ ಹೋಬಳಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಿರುವ ಜಮೀನು ಮತ್ತು ವಾಸಿಸುವ ಗ್ರಾಮಗಳು ಅರಣ್ಯ ಇಲಾಖೆಗೆ ವ್ಯಾಪ್ತಿಗೆ ಒಳಪಡುತ್ತಿವೆ. ಹಾಗಾಗಿ ಅಲ್ಲಿನ ಜಮೀನು ವಾಸ ಮಾಡುವ ಪ್ರದೇಶವನ್ನು ತೊರೆಯಬೇಕು ಎಂದು ಅರಣ್ಯ ಇಲಾಖೆ ನೋಟೀಸ್ ನೀಡಲಾಗಿದೆ. ಇದರಿಂದ ಜನ ಕಂಗಾಲಾಗಿದ್ದಾರೆ.
ಕಂದಾಯ ಇಲಾಖೆ ಜಾಗದಲ್ಲಿ ರೈತರಿಗೆ ಜಮೀನು, ನಿವೇಶನ, ಸ್ಮಶಾನ ಮತ್ತು ಸಾರ್ವಜನಿಕ ಉದ್ದೇಶಗಳಿಗೆ ಮಂಜೂರಾಗಿರುವ ಕೆಲ ಭಾಗದಲ್ಲಿ ಅರಣ್ಯ ಇಲಾಖೆಯವರು ಸೆಕ್ಷನ್ – 4ರ ನೆಪದಲ್ಲಿ ಸಾರ್ವಜನಿಕರು ಮತ್ತು ರೈತರಿಗೆ ಹೆದರಿಸುತ್ತಿರುವ ಘಟನೆಗಳು ವರದಿಯಾಗಿವೆ. ಅಲ್ಲದೇ ತಾಲ್ಲೂಕಿನ ಹಲವಾರು ಭಾಗಗಳಲ್ಲಿ ನಿವೇಶನ ರಹಿತರು 94ಸಿ, 94ಸಿಸಿ, ಹಾಗೂ ಫಾರಂ 50, 53 ಮತ್ತು 57ರಲ್ಲಿ ರೈತರು ತಮ್ಮ ಭೂಮಿಯ ಹಕ್ಕು ಪಡೆದುಕೊಳ್ಳಲು ಸಾವಿರಾರು ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಕೆಲವು ಪ್ರಕರಣಗಳನ್ನು ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅದರಲ್ಲಿ ಕೆಲವೇ ಕೆಲ ಪ್ರಕರಣಗಳಿಗೆ ಅನುಮತಿ ದೊರಕಿದೆ.ಹಲವಾರು ಪ್ರಕರಣಗಳು ನನೆಗುದಿಗೆ ಬಿದ್ದಿವೆ. ಇದರಿಂದ ಫಲಾನುಭವಿಗಳು ಚಾತಕಪಕ್ಷಿಯಂತೆ ಕಾಯುವ ಸ್ಥಿತಿ ಬಂದೊದಗಿದೆ.
‘ನಮ್ಮ ಊರು ಮತ್ತು ಜಮೀನು ಮನೆ ಮಠಗಳನ್ನು ಬಿಟ್ಟು ನಮ್ಮ ಪೂರ್ವಿಕರನ್ನು ಲಾರಿಗಳಲ್ಲಿ ತುಂಬಿಕೊಂಡು ಇಲ್ಲಿ ಬಂದು ಬಿಟ್ಟಿದ್ದರು. ಜಮೀನಿನ ದಾಖಲೆಗಳನ್ನು ಪಡೆದುಕೊಂಡು ಇಲ್ಲಿ ಮನೆ, ಊರು, ತೋಟ ಮಾಡಿಕೊಂಡು ಜೀವನ ಸಾಗಿಸಿದ್ದಾರೆ. ಅವರಲ್ಲಿ 60 ಹೆಚ್ಚು ಮಂದಿ ಮರಣ ಹೊಂದಿದ್ದಾರೆ. 3ನೇ ತಲೆಮಾರಿನವರಾದ ನಮಗೆ ಅರಣ್ಯ ಇಲಾಖೆಯವರು ತೆರವು ಮಾಡಲು ನೋಟೀಸ್ ನೀಡಿರುವುದು ನಮಗೆ ಗಾಬರಿಯಾಗಿದೆ’ ಎಂದು ಭದ್ರಾ ಸಂತ್ರಸ್ತ ಸಿರಾಜ್ ಎ.ಜಿ. ಆತಂಕ ವ್ಯಕ್ತಪಡಿಸಿದರು.
‘ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಂದಾಯ ದಾಖಲೆಗಳಲ್ಲಿ ಅರಣ್ಯ, ತುರುಮಂದಿ, ರಾಜ ಪ್ರಮುಖರು, ಇಒ, ಪಿಡಿಒ ಮತ್ತಿತರೆ ತಾಂತ್ರಿಕ ಕಾರಣಗಳಿಂದ ಸುಮಾರು 10,250ಕ್ಕೂ ಹೆಚ್ಚು ಫಲಾನುಭವಿಗಳು ತಮ್ಮ ಹಕ್ಕು ಪಡೆದುಕೊಳ್ಳುವಲ್ಲಿ ವಂಚಿತರಾಗಿದ್ದರು. ಈ ಬಗ್ಗೆ ಸದನದಲ್ಲಿ ಹಲವಾರು ಪ್ರಸ್ತಾಪಿಸಿದ್ದು, ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಮಂತ್ರಿ ಮತ್ತು ಅಧಿಕಾರಿಗಳ ಸಾಲು ಸಾಲು ಸಭೆಗಳನ್ನು ನಡೆಸಿ, ಸಮಸ್ಯೆಗಳಿಗೆ ಉನ್ನತ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಈ ಪ್ರಯತ್ನದಿಂದ ಉಪಗ್ರಾಮ, ಕಂದಾಯ ಗ್ರಾಮಗಳನ್ನು ಮಾಡಲು ಸರ್ಕಾರ ರಾಜ್ಯದಾದ್ಯಂತ ಸೂಚನೆ ನೀಡಿದೆ. ನಮ್ಮ ಕ್ಷೇತ್ರದಲ್ಲಿ 187 ಕಂದಾಯ ಮತ್ತು ಉಪ ಗ್ರಾಮಗಳನ್ನಾಗಿ ಮಾಡಲು ಪ್ರಕ್ರಿಯೆ ಚಾಲನೆಯಲ್ಲಿದೆ’ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
- ಮೂರು ತಲೆಮಾರಿನ ಬಳಿಕ ನೋಟಿಸ್; ಕಂಗಾಲಾದ ನಿವಾಸಿಗಳು
ಲಕ್ಕವಳ್ಳಿ ಹೋಬಳಿಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಿರುವ ಜಮೀನು ಮತ್ತು ವಾಸಿಸುವ ಗ್ರಾಮಗಳು ಅರಣ್ಯ ಇಲಾಖೆಗೆ ವ್ಯಾಪ್ತಿಗೆ ಒಳಪಡುತ್ತಿವೆ. ಹಾಗಾಗಿ ಅಲ್ಲಿನ ಜಮೀನು ಹಾಗೂ ವಾಸ ಮಾಡುವ ಪ್ರದೇಶವನ್ನು ತೊರೆಯಬೇಕು ಎಂದು ಅರಣ್ಯ ಇಲಾಖೆ ನೋಟಿಸ್ ನೀಡಿದ್ದು ಈ ಜಮೀನುಗಳಿಂದ ಬದುಕು ಕಟ್ಟಿಕೊಂಡಿದ್ದ ಮೂರನೇ ತಲೆಮಾರಿನ ಜನ ಅರಣ್ಯ ಇಲಾಖೆಯ ನೋಟಿಸ್‌ನಿಂದಾಗಿ ದಿಕ್ಕು ತೋಚದಂತಾಗಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಿರುವ ಗ್ರಾಮಗಳಲ್ಲಿ ಯಾವುದೇ ಸರ್ವೇ ನಂಬರ್ ಆಕಾರ್ ಬಂದ್ ಮತ್ತು ಜಮೀನಿ ದಾಖಲೆಗಳಿಗೆ ತಾಳೆಯಾಗದೆ ಮೂಲ ಸಂತ್ರಸ್ತರ ಹೆಸರಿನಲ್ಲೇ ಇವೆ. ಇದರಿಂದ ಮೂರನೇ ತಲೆಮಾರಿನಲ್ಲಿರುವ ಇಂದಿನ ಪೀಳಿಗೆ ಜನರಿಗೆ ಬ್ಯಾಂಕ್ ಸಾಲ ಸರ್ಕಾರಿ ಸೌಲಭ್ಯಗಳು ದೊರಕದೇ ವಂಚಿತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.