ಚಿಕ್ಕಮಗಳೂರು: ಇಡೀ ಜಿಲ್ಲೆಯೇ ಪ್ರವಾಸಿ ತಾಣದಂತೆ ಪರಿಸರ ಸೌಂದರ್ಯ ಹೊದ್ದಿರುವ ಜಿಲ್ಲೆಯಲ್ಲಿ ಹೊಸದಾಗಿ 24 ಪ್ರವಾಸಿ ತಾಣಗಳನ್ನು ಸರ್ಕಾರ ಗುರುತಿಸಿದ್ದು, ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡಿದೆ.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ 12 ತಾಣಗಳನ್ನು ಈ ಮೊದಲು ಗುರುತಿಸಲಾಗಿತ್ತು. ಈಗ ಅವುಗಳ ಸಂಖ್ಯೆ 15ಕ್ಕೆ ಏರಿಕೆ ಮಾಡಲಾಗಿದೆ. ಹೊಸದಾಗಿ ಮರ್ಲೆ ಚನ್ನಕೇಶವ ದೇವಸ್ಥಾನ, ಝರಿ ಜಲಪಾತ, ಹಿರೇಕೊಳಲೆ ಕೆರೆ, ಬಂಡೇಕಲ್ಲು ಬೆಟ್ಟ–ತೋಟಪ್ಪನಬೆಟ್ಟ ಹಾಗೂ ಕಾಫಿ ಮ್ಯೂಸಿಯಂ ಸೇರಿ 5 ತಾಣಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಹಿಂದಿನ ಪಟ್ಟಿಯಲ್ಲಿ ದಂಡರಮಕ್ಕಿ ಕೆರೆ ಮತ್ತು ಕೋಟೆ ಕೆರೆಯನ್ನು ಕೈಬಿಡಲಾಗಿದೆ.
ತರೀಕೆರೆ ತಾಲ್ಲೂಕಿನಲ್ಲಿ ಈ ಹಿಂದೆ ಕೆಮ್ಮಣ್ಣುಗುಂಡಿ, ಅಮೃತಾಪುರ, ಕಲ್ಲತ್ತಗಿರಿ ಜಲಪಾತ ಸೇರಿ ಮೂರು ತಾಣಗಳಿದ್ದವು. ಈ ಪಟ್ಟಿಗೆ ಈಗ ಹೆಬ್ಬೆ ಜಲಪಾತ, ಸೋಂಪುರ ಸೋಮನಾಥೇಶ್ವರ ದೇಗುಲ, ಸೊಲ್ಲಾಪುರದ ಸಿದ್ಧರಾಮೇಶ್ವರ ದೇಗುಲವನ್ನು ಸೇರಿಸಲಾಗಿದೆ.
ಕಡೂರು ತಾಲ್ಲೂಕಿನಲ್ಲಿ ಈ ಹಿಂದೆ ಹೇಮಗಿರಿ, ಅಯ್ಯನಕೆರೆ, ಸಖರಾಯಪಟ್ಟಣ ಸೇರಿ 3 ತಾಣಗಳಿದ್ದವು. ಈಗ ಯಗಟಿ ಮಲ್ಲಿಕಾರ್ಜುನ ಸ್ವಾಮಿ ದೇಗುಲ, ಅಂತರಘಟ್ಟೆ ದೇವಸ್ಥಾನ, ಹಿರೇನಲ್ಲೂರು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಮತ್ತು ಮದಗದ ಕೆರೆ ಸೇರ್ಪಡೆ ಮಾಡಲಾಗಿದೆ.
ಹಳೇ ಪಟ್ಟಿಯಲ್ಲಿ ಕಳಸ ಪ್ರತ್ಯೇಕ ತಾಲ್ಲೂಕು ಇರಲಿಲ್ಲ. ಮೂಡಿಗೆರೆ ತಾಲ್ಲೂಕಿನ ಪಟ್ಟಿಯಲ್ಲಿ ಕುದುರೆಮುಖ, ಕಳಸದ ಕಳಸೇಶ್ವರ ದೇಗುಲ, ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ ಸೇರಿದ್ದವು. ಹೊಸ ತಾಲ್ಲೂಕಿನ ಪಟ್ಟಿಯಲ್ಲಿ ಈ ಮೂರು ತಾಣಗಳ ಜತೆಗೆ ಕ್ಯಾತನಮಕ್ಕಿ ವೀಕ್ಷಣಾ ಸ್ಥಳ, ಸೂರಮನೆ ಜಲಪಾತ, ಬಾಳೆಹೊಳೆ ಭದ್ರಾ ವೈಟ್ ರಿವರ್ ರ್‍ಯಾಪ್ಟಿಂಗ್ ತಾಣಗಳು ಸ್ಥಾನ ಪಡೆದುಕೊಂಡಿವೆ.
ಮೂಡಿಗೆರೆ ತಾಲ್ಲೂಕಿನ ಪಟ್ಟಿಯಲ್ಲಿ ಈ ಹಿಂದೆ ಅಂಗಡಿ ಮತ್ತು ಬಲ್ಲಾಳರಾಯನ ದುರ್ಗ ಮಾತ್ರ ಇದ್ದವು. ಕೂಡಿಗೆ ಜಲಪಾತ, ಎತ್ತಿನಭುಜ, ದೇವರಮನೆ, ಕೊಟ್ಟಿಗೆಹಾರದಲ್ಲಿನ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಗಳನ್ನು ಈಗ ಸೇರ್ಪಡೆ ಮಾಡಲಾಗಿದೆ.
ಕೊಪ್ಪ ತಾಲ್ಲೂಕಿನಲ್ಲಿ ಈ ಹಿಂದಿನ ಪಟ್ಟಿಯಲ್ಲಿ ಹಿರೇಕೊಡಿಗೆ ಮಾತ್ರ ಇತ್ತು. ಈಗ ಹರಿಹರಪುರ ದೇವಸ್ಥಾನ, ಪಂಚಮಿಕಲ್ಲು, ಕಮಂಡಲ ಗಣಪತಿ ದೇವಸ್ಥಾನ, ಹಾಲ್ಮತ್ತೂರು ಸಂತಾನಗೋಪಾಲಸ್ವಾಮಿ ದೇಗುಲ ಸೇರಿಕೊಂಡಿದೆ.
ಶೃಂಗೇರಿ ತಾಲ್ಲೂಕಿನಲ್ಲಿ ಯಾವುದೇ ಹೊಸ ಪ್ರವಾಸಿ ತಾಣ ಸೇರ್ಪಡೆಯಾಗಿಲ್ಲ. ಶೃಂಗೇರಿ ಶಾರದಾ ಪೀಠ, ಕಿಗ್ಗ ಋಷ್ಯಶೃಂಗ ದೇವಸ್ಥಾನ, ಸಿರಿಮನೆ ಜಲಪಾತಗಳಷ್ಟೇ ಇವೆ. ನರಸಿಂಹರಾಜಪುರ ತಾಲ್ಲೂಕಿನಲ್ಲಿ ಸಿಂಹನಗದ್ದೆ ಜತೆಗೆ ಬಾಳೆಹೊನ್ನೂರು ರಂಭಾಪುರಿ ಪೀಠವನ್ನು ಸೇರಿಸಿಕೊಳ್ಳಲಾಗಿದೆ.
***
ಪ್ರವಾಸಿ ತಾಣಕ್ಕೆ ಯೋಗ್ಯವಾಗಿದ್ದರೂ ಸುರಕ್ಷತೆ ಇಲ್ಲದ ಸ್ಥಳಗಳನ್ನು ಸೇರ್ಪಡೆ ಮಾಡಿಲ್ಲ. ಸುರಕ್ಷತೆ ಇರುವ ಜಂಬದಹಳ್ಳ ಜಲಾಶಯ ಕರಡಿ ಗವಿಮಠ ರೀತಿಯ ತಾಣಗಳನ್ನು ಮುಂದಿನ ದಿನಗಳಲ್ಲಿ ಸೇರ್ಪಡೆ ಮಾಡಲಾಗುವುದು
-- ಎಂ.ಆರ್.ಲೋಹಿತ್ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ
**
ಅಪರಿಚಿತವಾಗಿಯೇ ಉಳಿದ ತಾಣಗಳು
ಪ್ರವಾಸೋದ್ಯಮ ಇಲಾಖೆ ಹೊಸ ಪಟ್ಟಿ ಬಿಡುಗಡೆ ಮಾಡಿದ್ದು ಅಲ್ಲಿಯೂ ಸ್ಥಾನ ಪಡೆಯದ ಹಲವು ತಾಣಗಳು ಮತ್ತೆ ಅಪರಿಚಿತವಾಗಿಯೇ ಉಳಿಯುವಂತಾಗಿದೆ. ಜಿಲ್ಲಾ ಕೇಂದ್ರದಿಂದ 24 ಕಿಲೋ ಮೀಟರ್ ದೂರದಲ್ಲಿ ಕಾಮೇನಹಳ್ಳಿ ಜಲಪಾತ ಇದೆ. ವಜ್ರಾಕಾರದ ಬಂಡೆಗಳ ಮೇಲೆ ಜಲಧಾರೆ ಹರಿಯುವುದರಿಂದ ಡೈಮಂಡ್ ಫಾಲ್ಸ್ ಎಂದೂ ಕರೆಯಲಾಗುತ್ತದೆ. ಇದು ಹೊಸ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಮೂಡಿಗೆರೆ ತಾಲ್ಲೂಕಿನ ಸಂತೋಷ ಫಾಲ್ಸ್ ಎನ್.ಆರ್.ಪುರ ತಾಲ್ಲೂಕಿನ ನಾಗರಮಕ್ಕಿ ಗ್ರಾಮದ ಸಮೀಪದ ಅಬ್ಬಿಗುಂಡಿ ಜಲಪಾತ ಕಳಸ ತಾಲ್ಲೂಕಿನ ಅಜ್ಜಿಗುಡ್ಡೆ ಎಂಬ ರಮಣೀಯ ಗುಡ್ಡ ಕಡೂರು ತಾಲ್ಲೂಕಿನ ಹೊಗರೇ ಕಾನುಗಿರಿ ಜೀವವೈವಿಧ್ಯ ತಾಣ ಕರಡಿ ಗವಿಮಠ ತರೀಕೆರೆ ತಾಲ್ಲೂಕಿನ ಜಂಬದಹಳ್ಳ ಜಲಾಶಯಗಳು ಪ್ರವಾಸೋದ್ಯಮ ಇಲಾಖೆಯ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ‘ಹೊಸ ಪಟ್ಟಿಯನ್ನು ಪಡೆದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪ್ರವಾಸೋದ್ಯಮ ಇಲಾಖೆಯ ಪಟ್ಟಿಗೆ ಸೇರ್ಪಡೆ ಆಗಿರುವುದರಿಂದ ಅಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಅನುಕೂಲ ಆಗಲಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್.ಲೋಹಿತ್ ತಿಳಿಸಿದರು.
ಸ್ಥಾನ ಪಡೆದ ತಾಣಗಳು
* ಮರ್ಲೆ ಚನ್ನಕೇಶವ ದೇವಸ್ಥಾನ * ಝರಿ ಜಲಪಾತ * ಹಿರೇಕೊಳಲೆ ಕೆರೆ * ಬಂಡೇಕಲ್ಲು ಬೆಟ್ಟ–ತೋಟಪ್ಪನಬೆಟ್ಟ * ಕಾಫಿ ಮೂಸಿಯಂ(ಕಾಫಿ ಮಂಡಳಿ) * ಹೆಬ್ಬೆ ಜಲಪಾತ * ಸೋಂಪುರ ಸೋಮನಾಥೇಶ್ವರ ದೇಗುಲ * ಸೊಲ್ಲಾಪುರದ ಸಿದ್ಧರಾಮೇಶ್ವರ ದೇಗುಲ * ಯಗಟಿ ಮಲ್ಲಿಕಾರ್ಜುನ ಸ್ವಾಮಿ ದೇಗುಲ * ಅಂತರಘಟ್ಟೆ ದೇವಸ್ಥಾನ * ಹಿರೇನಲ್ಲೂರು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ * ಮದಗದ ಕೆರೆ * ಕ್ಯಾತನಮಕ್ಕಿ ವೀಕ್ಷಣಾ ಸ್ಥಳ * ಸೂರಮನೆ ಜಲಪಾತ * ಬಾಳೆಹೊಳೆ ಭದ್ರಾ ವೈಟ್ ರಿವರ್ ರ್‍ಯಾಪ್ಟಿಂಗ್ ತಾಣ * ಕೂಡಿಗೆ ಜಲಪಾತ * ಎತ್ತಿನಭುಜ * ದೇವರಮನೆ * ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ * ಹರಿಹರಪುರ ದೇವಸ್ಥಾನ * ಪಂಚಮಿಕಲ್ಲು * ಕಮಂಡಲ ಗಣಪತಿ ದೇವಸ್ಥಾನ * ಹಾಲ್ಮತ್ತೂರು ಸಂತಾನಗೋಪಾಲಸ್ವಾಮಿ ದೇಗುಲ * ಬಾಳೆಹೊನ್ನೂರು ರಂಭಾಪುರಿ ಪೀಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.