ADVERTISEMENT

ಗಿರಿಜನರ ಕಾಫಿ– ಮೆಣಸು ಅಭಿವೃದ್ಧಿ ಯೋಜನೆ ಸ್ಥಗಿತ

ಅನುದಾನ ಬಿಡುಗಡೆಗೆ ಎದುರಾದ ತಾಂತ್ರಿಕ ತೊಡಕು

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 5:43 IST
Last Updated 27 ಜೂನ್ 2025, 5:43 IST
ಕಳಸ ತಾಲ್ಲೂಕಿನ ಪರಿಶಿಷ್ಟ ವರ್ಗಗಳ ಕಾಫಿ ಕೃಷಿಕರು ಓಣಿಗಂಡಿಯಲ್ಲಿ ಸ್ಥಾಪಿಸಿರುವ ಸಂಸ್ಕರಣಾ ಘಟಕ ಮತ್ತು ಬಾಡಿಗೆಗೆ ಕೊಡುವ ಕೃಷಿ ಸಲಕರಣೆಗಳು
ಕಳಸ ತಾಲ್ಲೂಕಿನ ಪರಿಶಿಷ್ಟ ವರ್ಗಗಳ ಕಾಫಿ ಕೃಷಿಕರು ಓಣಿಗಂಡಿಯಲ್ಲಿ ಸ್ಥಾಪಿಸಿರುವ ಸಂಸ್ಕರಣಾ ಘಟಕ ಮತ್ತು ಬಾಡಿಗೆಗೆ ಕೊಡುವ ಕೃಷಿ ಸಲಕರಣೆಗಳು   

ಕಳಸ: ಕಳಸ ಮತ್ತು ಮೂಡಿಗೆರೆ ತಾಲ್ಲೂಕಿನ ಗಿರಿಜನರು ಬೆಳೆಯುವ ಕಾಫಿ ಮತ್ತು ಕಾಳುಮೆಣಸಿನ ಬೆಳೆಗಳ ಸಮಗ್ರ ಅಭಿವೃದ್ಧಿ ಯೋಜನೆಯು ಅಪೂರ್ಣವಾಗಿದ್ದು, ಸ್ಥಗಿತವಾಗಿದೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅನುದಾನದಲ್ಲಿ ಕಾಫಿ ಮಂಡಳಿ ಮೂಲಕ ಈ ಯೋಜನೆ ಅನುಷ್ಠಾನಗೊಂಡಿತ್ತು. 2019ರಲ್ಲಿ ಆರಂಭವಾದ ಈ ಯೋಜನೆ 2023ರಲ್ಲಿ ಅಂತ್ಯಗೊಂಡಿತು. ಡಿಸಿಡಿಪಿ ಎರಡನೇ ಹಂತದ ಈ ಯೋಜನೆಯಲ್ಲಿ ಮೂಡಿಗೆರೆ ಮತ್ತು ಕಳಸ ತಾಲ್ಲೂಕಿನ 900 ಗಿರಿಜನ ಫಲಾನುಭವಿ ಕುಟುಂಬಗಳು ಇವೆ. ಒಟ್ಟು ₹ 4.5 ಕೋಟಿ ಮೊತ್ತದ ಈ ಯೋಜನೆಯಲ್ಲಿ 2 ವರ್ಷ ಕೋವಿಡ್ ಕಾರಣಕ್ಕೆ ಯೋಜನೆ ನಿರೀಕ್ಷಿತ ಯಶಸ್ಸು ಕಾಣಲಿಲ್ಲ.

2019ರಿಂದ 2023ರವರೆಗೆ ಧನಲಕ್ಷ್ಮಿ ಗಿರಿಜನ ಕಾಫಿ ಬೆಳೆಗಾರರ ಸಂಘದ 305 ಕುಟುಂಬಗಳು, ಕಳಸ ಬುಡಕಟ್ಟು ರೈತ ಉತ್ಪಾದಕ ಸಂಘದ 305 ಕುಟುಂಬಗಳು ಗುಣಮಟ್ಟದ ಕಾಫಿ ಮತ್ತು ಕಾಳುಮೆಣಸಿನ ಗಿಡಗಳನ್ನು ಪಡೆದುಕೊಂಡರು. ಕಳಸ ತಾಲ್ಲೂಕಿನ ಮಲೆಕುಡಿಯ, ಹಸಲರು, ಗೌಡಲು, ನಾಯಕ ಜನಾಂಗದ ಬೆಳೆಗಾರರಿಗೆ ಕಾಫಿ ಮತ್ತು ಮೆಣಸು ಬೆಳೆಯುವ ಬಗ್ಗೆ ವೈಜ್ಞಾನಿಕ ತರಬೇತಿ ಮತ್ತು ಪ್ರಾತ್ಯಕ್ಷಿಕೆ ನೀಡಲಾಯಿತು.

ADVERTISEMENT

ಕೆಲವರಿಗೆ ಕಣ ನಿರ್ಮಾಣಕ್ಕೆ ಅನುದಾನ ಕೊಡಲಾಗಿತ್ತು. ಸುಣ್ಣ , ಟಾರ್ಪಲ್, ಬೆರ್ರಿ ಬೋರರ್ ಟ್ರ್ಯಾಪ್, ಏಲಕ್ಕಿ ಗಿಡಗಳ ಖರೀದಿ ಮಾಡಿ ಹಂಚಲಾಗಿತ್ತು. ಈ ಯೋಜನೆಯಲ್ಲಿ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಕೇಂದ್ರ ಸರ್ಕಾರದ ಅನುದಾನದಲ್ಲಿ ಕಳಸದಲ್ಲೇ ಕಾಫಿ ಮತ್ತು ಮೆಣಸಿನ ಸಂಸ್ಕರಣಾ ಘಟಕ ಆರಂಭಿಸಿದರು.

2023ರಲ್ಲಿ ಯೋಜನೆ ಸ್ಥಗಿತ ಆದ ನಂತರ ಸದಸ್ಯರ ಕೋರಿಕೆ ಮೇರೆಗೆ 2024ರಲ್ಲಿ ಸದೆ ಹೊಡೆಯುವ ಯಂತ್ರಗಳು, ಸ್ಪ್ರೇ ಮಾಡುವ ಯಂತ್ರ ಖರೀದಿಸಿ ಗಿರಿಜನರಿಗೆ ನೆರವಾಗುವಂತೆ ಬಳಸಲಾಯಿತು.2024ರಿಂದ ಈಚೆಗೆ ಯಾವುದೇ ಚಟುವಟಿಕೆಗೆ ನಡೆಸಲು ಅನುದಾನ ಬಿಡುಗಡೆಗೆ ತಾಂತ್ರಿಕ ತೊಡಕು ಉಂಟಾಯಿತು. ಇದರಿಂದ ಗಿರಿಜನರು ಬೆಳೆಯುವ ಕಾಫಿ, ಮೆಣಸು ಮಾರುಕಟ್ಟೆಯ ಯತ್ನಕ್ಕೆ ಕೊಡಲಿಪೆಟ್ಟು ಬಿತ್ತು. ಗಿರಿಜನ ಉತ್ಪನ್ನಗಳ ಅಂಗಡಿ ಸ್ಥಗಿತವಾಯಿತು.

ಈಗಲೂ ಕಾಫಿ ಬೋರ್ಡ್ ಬಳಿ ಇದೇ ಉದ್ದೇಶಕ್ಕೆಂದು ನೀಡಲಾದ ₹ 1.27 ಕೋಟಿ ಮೊತ್ತ ಉಳಿದಿದೆ. ಕಾಫಿ ಮಂಡಳಿಯು ಈ ಮೊತ್ತವನ್ನು ಮತ್ತೆ ಗಿರಿಜನರ ಕಾಫಿ ಬೆಳೆ ಅಭಿವೃದ್ಧಿಗೆ ಬಳಕೆ ಮಾಡಲು ಅನುಮೋದನೆ ಕೊಡುವಂತೆ ವಾಲ್ಮೀಕಿ ನಿಗಮಕ್ಕೆ ಪತ್ರ ಬರೆದಿದೆ. ವಾಲ್ಮೀಕಿ ನಿಗಮ ಕೂಡ 6 ತಿಂಗಳ ಹಿಂದೆಯೇ ಕಳಸ ತಾಲ್ಲೂಕಿಗೆ ಭೇಟಿ ನೀಡಿ ಗಿರಿಜನರಿಗೆ ಈ ಯೋಜನೆಯಿಂದ ಆಗುವ ಲಾಭದ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದೆ. ಯೋಜನೆಯಿಂದ ಗಿರಿಜನರ ಬೆಳೆಗಳ ಉತ್ಪಾದಕತೆ ಹೆಚ್ಚಿದೆ. ಆದರೆ ಮಾರುಕಟ್ಟೆ ವಿಸ್ತರಣೆಗೆ ಪ್ರಯತ್ನ ನಡೆಯಬೇಕಿದೆ ಎಂದು ತಿಳಿಸಿದೆ.

'ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಈ ವರದಿಗೆ ಸ್ಪಂದಿಸಿ ಉಳಿಕೆ ಹಣವನ್ನು ಗಿರಿಜನ ಕೃಷಿಕರ ಅಭಿವೃದ್ಧಿಗೆ ಬಳಸುವಂತೆ ಅನುಮೋದನೆ ಮಾಡಬೇಕಿತ್ತು. ಆದರೆ ಈವರೆಗೂ ಆ ಇಲಾಖೆ ಈ ಕೆಲಸ ಮಾಡಿಲ್ಲ. ಇದರಿಂದ ನಮಗೆ ಬಹಳ ನಿರಾಸೆ ಆಗಿದೆ' ಎಂದು ಕಳಸ ತಾಲ್ಲೂಕು ಗಿರಿಜನ ಸಂಘದ ಅಧ್ಯಕ್ಷರಾದ ಅನಿಲ್ ಮುಜೇಕಾನು ಹೇಳುತ್ತಾರೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಾಲ್ಮೀಕಿ ನಿಗಮಕ್ಕೆ ಸೂಚನೆ ಕೊಟ್ಟರೆ ಮಾತ್ರ ವಾಲ್ಮೀಕಿ ನಿಗಮ ಕಾಫಿ ಮಂಡಳಿಗೆ ಪತ್ರ ಬರೆಯುತ್ತದೆ. ಆಗ ಮಾತ್ರ ಉಳಿದಿರುವ ₹1.27 ಕೋಟಿ ಅನುದಾನ ಬಳಸಿಕೊಂಡು ಒಂದು ವರ್ಷದಲ್ಲಿ ಗಿರಿಜನರ ಕಾಫಿ ಬ್ಯ್ರಾಂಡ್ ರೂಪಿಸುವ ಕೆಲಸ ಮಾಡಬಹುದಾಗಿದೆ. ಕಳಸದಲ್ಲಿ ಸ್ಥಾಪಿಸಿದ್ದ ಗಿರಿಜನ ಉತ್ಪನ್ನಗಳ ಮಾರಾಟ ಮಳಿಗೆ ಕೂಡ ಮುಂದುವರೆಸಬಹುದಾಗಿದೆ. ಈ ಬಗ್ಗೆ ಶಾಸಕರ ಗಮನ ಸೆಳೆದಿದ್ದೇವೆ ಎಂದು ಅನಿಲ್ ಹೇಳುತ್ತಾರೆ.

ಗಿರಿಜನರು ಸ್ಥಾಪಿಸಿರುವ ಕಾಫಿ, ಮೆಣಸಿನ ಸಂಸ್ಕರಣಾ ಘಟಕದ ಎರಡನೇ ಕಂತು ₹15 ಲಕ್ಷ  ಕೂಡ ಬಂದಿಲ್ಲ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಈ ಮೊತ್ತ ಕೂಡ ಸಿಗುವಂತೆ ಕೆಲಸ ಮಾಡಬೇಕಿದೆ ಎಂದೂ ಕಳಸದ ಗಿರಿಜನ ಕೃಷಿಕರು ಒತ್ತಾಯಿಸುತ್ತಾರೆ.

ಕಳಸ ಸುತ್ತಮುತ್ತರ್ಧ ಎಕರೆ ಜಾಗ ಮಂಜೂರು ಮಾಡಿದರೆ ಗಿರಿಜನರ ಸಂಸ್ಕರಣಾ ಘಟಕವನ್ನು ಶಾಶ್ವತವಾಗಿ ಅನುಷ್ಠಾನ ಮಾಡಬಹುದು. ಈ ಬಗ್ಗೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರಿಗೆ ಹಲವಾರು ಬಾರಿ ಮನವಿ ಕೊಟ್ಟಿದ್ದೇವೆ ಎಂದು ಧನಲಕ್ಷಿ ಗಿರಿಜನ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಹೇಳುತ್ತಾರೆ.

ಹಲವಾರು ಯೋಜನೆಗಳು ಅನುದಾನ ಇಲ್ಲದೇ ಸೊರಗುವುದು ಸಾಮಾನ್ಯ. ಆದರೆ ಅನುದಾನ ಇದ್ದರೂ ಇಲಾಖೆಗಳ ನಡುವೆ ಸಮನ್ವಯತೆ ಕೊರತೆಯಿಂದ ಗಿರಿಜನ ಕೃಷಿಕರು ಕೊರಗುತ್ತಿದ್ದಾರೆ ಎಂಬ ಬೇಸರ ಇದೆ.

ಹೆಚ್ಚಿನ ಅನುದಾನ: ವರದಿ ಸಲ್ಲಿಕೆ

ಕಳಸದ ಗಿರಿಜನ ಕಾಫಿ ಕೃಷಿಕರ ಸಂಘ ಬಹಳ ಶ್ರದ್ಧೆಯಿಂದ ಎಲ್ಲ ಚಟುವಟಿಕೆ ಮಾಡಿದೆ. ಅವರ ಸಂಸ್ಕರಣಾ ಘಟಕ ಕೂಡ ಮಾದರಿ ಆಗಿದೆ. ಈ ಯೋಜನೆಯಿಂದ ಗಿರಿಜನರ ತೋಟಗಳಲ್ಲಿ ಉತ್ಪಾದನೆ ಹೆಚ್ಚಿದೆ. ಕಾಫಿ ಮಂಡಳಿ ಮೂಲಕ ಹೆಚ್ಚಿನ ಅನುದಾನ ಬಿಡುಗಡೆ ಮಾಡಬಹುದು ಎಂದು ವರದಿ ಸಲ್ಲಿಸಿದ್ದೇನೆ ಎಂದು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕಳಸ ಕ್ಷೇತ್ರ ಅಧಿಕಾರಿ ಶಾಂತಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.