ADVERTISEMENT

ಮೂಡಿಗೆರೆ: ತೀವ್ರಜ್ವರದಿಂದ ಬಳಲುತ್ತಿದ್ದ ಇಬ್ಬರು ಮಕ್ಕಳು ಸಾವು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 4:29 IST
Last Updated 4 ಆಗಸ್ಟ್ 2025, 4:29 IST
<div class="paragraphs"><p>ಪ್ರೇರಣಾ, ಸಾರಾ</p></div>

ಪ್ರೇರಣಾ, ಸಾರಾ

   

ಮೂಡಿಗೆರೆ: ಇಲ್ಲಿನ ಹೆಸ್ಗಲ್‌ ಗ್ರಾಮದಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ಇಬ್ಬರು ಮಕ್ಕಳು ಎರಡು ದಿನದ ಅಂತರದಲ್ಲಿ ಮೃತಪಟ್ಟಿದ್ದಾರೆ.

ಗ್ರಾಮದ ನಿವಾಸಿ, ಕೃಷಿ ಇಲಾಖೆ ವಾಹನ ಚಾಲಕ ರವಿ– ಪಲ್ಲವಿ ದಂಪತಿ ಪುತ್ರಿ ಪ್ರೇರಣಾ (11), ಕೂಲಿ ಕಾರ್ಮಿಕ ಬಸವರಾಜ್– ಮಂಜುಳಾ ದಂಪತಿ ಪುತ್ರಿ ಸಾರ (4) ಮೃತಪಟ್ಟವರು.

ADVERTISEMENT

ಪ್ರೇರಣಾ, ಪಟ್ಟಣದ ನಳಂದ ಆಂಗ್ಲಮಾದ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ. ಬುಧವಾರ ಈಕೆ ಜ್ವರದಿಂದ ಬಳಲುತ್ತಿದ್ದುದನ್ನು ಗಮನಿಸಿದ ಶಿಕ್ಷಕರು ಪಾಲಕರಿಗೆ ಕರೆ ಮಾಡಿ ತಿಳಿಸಿದ್ದರು. ಬಾಲಕಿಯನ್ನು ತಾಲ್ಲೂಕು ಆಸ್ಪತ್ರೆಗೆ ಸೇರಿಸಿದ್ದು, ವೈದ್ಯರ ಸಲಹೆಯಂತೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆ ಶುಕ್ರವಾರ ಮೃತಪಟ್ಟಿದ್ದಾಳೆ.

ಅಂಗನವಾಡಿಗೆ ಹೋಗುತ್ತಿದ್ದ ಸಾರಗೆ ಶುಕ್ರವಾರ ಬೆಳಿಗ್ಗೆ ಜ್ವರ ಕಾಣಿಸಿಕೊಂಡಿದೆ. ಪಾಲಕರು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರು ಸಿಗದೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಶನಿವಾರ ಬೆಳಿಗ್ಗೆ ಆಕೆ ಮೃತಪಟ್ಟಿದ್ದಾಳೆ.  ಬಸವರಾಜ್‌– ಮಂಜುಳಾ ದಂಪತಿಗೆ ಸಾರ ಒಬ್ಬಳೇ ಮಗಳು. ಶನಿವಾರ ಅಂತ್ಯಕ್ರಿಯೆ ನಡೆಯಿತು.

‘ಗ್ರಾಮಕ್ಕೆ ವೈದ್ಯರು, ಸಿಬ್ಬಂದಿ ತಂಡ ಕಳುಹಿಸಲಾಗಿದೆ. ತಾಲ್ಲೂಕಿನಲ್ಲಿ ಸಾಂಕ್ರಾಮಿಕ ರೋಗ ಕಂಡುಬಂದಿಲ್ಲ. ಜ್ವರ ಕಾಣಿಸಿಕೊಂಡರೆ ಪೋಷಕರು ಭಯಪಡುವ ಅಗತ್ಯವಿಲ್ಲ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಹರೀಶ್ ಬಾಬು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರಿದ್ದಾರೆ, ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.