ಸಾವು
(ಪ್ರಾತಿನಿಧಿಕ ಚಿತ್ರ)
ಕೆ.ಕಣಬೂರು (ನರಸಿಂಹರಾಜಪುರ): ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಕಣಬೂರು ಗ್ರಾಮದಲ್ಲಿ ಒಂದೇ ದಿನದ ಅಂತರದಲ್ಲಿ ಮೃತಪಟ್ಟಿದ್ದ ಸ್ಫೂರ್ತಿ ಹಾಗೂ ಸ್ವಾತಿ ಅವರ ಸಾವಿಗೆ ವೈರಲ್ ಜ್ವರ ಕಾರಣ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದು ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವಿನಯ್ ತಿಳಿಸಿದ್ದಾರೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಪ್ರಾಥಮಿಕ ವರದಿ ಬಂದಿದ್ದು, ವರದಿ ಪ್ರಕಾರ ವೈರಲ್ ಜ್ವರದಿಂದ ರಕ್ತದಲ್ಲಿ ಸೋಂಕು ಹೆಚ್ಚಾಗಿ ಇದು ಬಹುಅಂಗಾಂಗಳ ಮೇಲೆ ಪರಿಣಾಮ ಬೀರಿದೆ. ಇದರಿಂದ ಉಸಿರಾಟದ ಸಮಸ್ಯೆಯಿಂದ ರಕ್ತದೊತ್ತಡ ಕಡಿಮೆಯಾಗಿ ಹೃದಯ ಸ್ತಂಭನವಾಗಿ ಇಬ್ಬರು ಸಹೋದರಿಯರು ಮೃತಪಟ್ಟಿದ್ದಾರೆ. ಕಿಡ್ನಿ ವೈಫಲ್ಯದಿಂದ ಮೃತ ಪಟ್ಟಿರುವ ಬಗ್ಗೆ ಪ್ರಾಥಮಿಕ ವರದಿಯಲ್ಲಿ ಮಾಹಿತಿ ಇಲ್ಲ ಎಂದು ಡಾ.ವಿನಯ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ವೈರಲ್ ಜ್ವರ, ರಕ್ತದಲ್ಲಿ ಸೋಂಕು, ಎಚ್1ಎನ್1 ಇವುಗಳ ಬಗ್ಗೆ ಮಾಹಿತಿ ಲಭ್ಯವಾಗಲು ಪ್ರಯೋಗಾಲಯದ ವರದಿ ಬರಬೇಕಾಗಿದೆ. ಇದು ಬರಲು ಸಮಯ ತಗಲುತ್ತದೆ. ಈ ವರದಿ ಬಂದಲ್ಲಿ ಸಾವಿಗೆ ಖಚಿತ ಕಾರಣ ತಿಳಿಯಬಹುದು ಎಂದರು.
ಆರೋಗ್ಯ ಇಲಾಖೆಯಿಂದ ಕುಟುಂಬದ ಆರೋಗ್ಯದ ಸ್ಥಿತಿಗತಿಗಳನ್ನು ತಿಳಿಯುವ ನಿಟ್ಟಿನಲ್ಲಿ ಹಲವು ವಿಷಯಗಳ ಬಗ್ಗೆ ಪ್ರಶ್ನಾವಳಿಯನ್ನು ರಚಿಸಿ ಈಗಾಗಲೇ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೆ.ಕಣಬೂರು ಗ್ರಾಮದ ನಿವಾಸಿ ಮಂಜಯ್ಯ ಅವರ ಪುತ್ರಿಯರಾದ ಸ್ಫೂರ್ತಿ ಜುಲೈ22ರಂದು, ಸ್ವಾತಿ ಜುಲೈ 24ರಂದು ಮೃತಪಟ್ಟಿದ್ದರು. ಮಂಜಯ್ಯ ಅವರ ತೃತೀಯ ಪುತ್ರಿ ಕೃತಿಕಾ ಅವರಿಗೆ ಗುರುವಾರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ತಜ್ಞ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.