
ಚಿಕ್ಕಮಗಳೂರು: ವಿಶ್ವಕರ್ಮ ಯೋಜನೆಯ ಫಲಾನುಭವಿಗಳಿಗೆ ಕಿಟ್ ವಿತರಣೆಯಲ್ಲಿ ಇದ್ದ ದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ಬೆಂಗಳೂರಿನ ಎಂಎಸ್‌ಎಂಇ ಅಭಿವೃದ್ಧಿ ಸೌಲಭ್ಯ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಧಾನ ಮಂತ್ರಿ ವಿಶ್ವಕರ್ಮ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಬ್ಯಾಂಕ್ ಸಾಲದ ಬದಲು ಕಿಟ್ ನೀಡುವಂತೆ ಮನವಿ ಮಾಡಿದ್ದರು. ಕಿಟ್ ವಿತರಣೆಯಲ್ಲಿ ಕೆಲ ಲೋಪಗಳು ಕಂಡು ಬಂದವು. ಆದ್ದರಿಂದ ಅಂಚೆ ಇಲಾಖೆ ವ್ಯವಸ್ಥಿತವಾಗಿ ಪಾರದರ್ಶಕತೆಯಿಂದ ಕೆಲಸ ಮಾಡುತ್ತಿದೆ. ಕಿಟ್ ವಿತರಣೆ ಸಂದರ್ಭದಲ್ಲಿ ವಸ್ತುಗಳ ಗುಣಮಟ್ಟವನ್ನು ಫಲಾನುಭವಿಗಳ ಮುಂದೆಯೇ ಪರಿಶೀಲಿಸಿ ನಂತರ ಅದನ್ನು ಅವರಿಗೆ ನೀಡಲಾಗುತ್ತದೆ. ಕಿಟ್‌ನಲ್ಲಿ ಗುಣಮಟ್ಟದ ಕೊರತೆ ಕಂಡು ಬಂದರೆ ಅದನ್ನು ತಕ್ಷಣವೇ ವಾಪಸ್ ನೀಡಲಾಗುತ್ತಿದೆ’ ಎಂದು ಹೇಳಿದರು.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು ಕಾರ್ಮಿಕರ ಕೌಶಲ ಹೆಚ್ಚಿಸುವ ಮೂಲಕ ಅವರ ಉತ್ಪನ್ನಗಳ ಗುಣಮಟ್ಟ ಸುಧಾರಿಸಿ ಕುಶಲಕರ್ಮಿಗಳನ್ನು ಸಬಲಗೊಳಿಸಲು ಪ್ರಯತ್ನಿಸುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಮಾತನಾಡಿ, ‘ಕೌಶಲ ಅಭಿವೃದ್ಧಿ ಮಾಡಿಕೊಳ್ಳದಿದ್ದರೆ ನಮ್ಮ ಜೀವನ ಕಷ್ಟವಾಗಲಿದೆ. ಸರ್ಕಾರ ಅದನ್ನು ಗಮನದಲ್ಲಿ ಇಟ್ಟುಕೊಂಡು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಚ್.ಎನ್.ಮಹೇಶ್ ಮಾತನಾಡಿ, ‘ವಿಶ್ವಕರ್ಮ ಯೋಜನೆ ಪಾರಂಪರಿಕ ಕಸಬುಗಳನ್ನು ಅಭಿವೃದ್ಧಿಪಡಿಸುವ ಜತೆಗೆ ಅದನ್ನು ಪೀಳಿಗೆ ಮುಂದುವರಿಸಬೇಕು ಎಂಬ ಆಶಯ ಹೊಂದಿದೆ. ಇನ್ನೂ ಹೆಚ್ಚಿನ ಜನ ಸ್ವಂತ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂಬ ದೃಷ್ಟಿಕೋನ ಈ ಯೋಜನೆ ಹೊಂದಿದೆ. ಜಿಲ್ಲೆಯ 2,600 ಫಲಾನುಭವಿಗಳು ಬ್ಯಾಂಕ್‌ಗಳಿಂದ ಸುಮಾರು ₹20 ಕೋಟಿ ಸಾಲ ಪಡೆದುಕೊಂಡು ಕುಲಕಸಬು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದು ತಿಳಿಸಿದರು.
ವಿಶ್ವಕರ್ಮ ಯೋಜನೆಯಡಿ ನಾಲ್ವರಿಗೆ ಟೂಲ್ ಕಿಟ್, ಐವರಿಗೆ ತರಬೇತಿ ಪ್ರಮಾಣ ಪತ್ರ ವಿತರಿಸಲಾಯಿತು. ಒಬ್ಬರಿಗೆ ಕುಂಬಾರಿಕೆ ವೃತ್ತಿಗೆ ಸಂಬಂಧಿಸಿದ ಸಾಲ ಒದಗಿಸಲಾಯಿತು.
ಕಾರ್ಯಕ್ರಮದಲ್ಲಿ ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿಯ ಜಂಟಿ ನಿರ್ದೇಶಕ ಕೆ.ದೇವರಾಜ್, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ನಾಮ ನಿರ್ದೇಶನ ಸದಸ್ಯ ಬೆಳವಾಡಿ ರವೀಂದ್ರ, ಎನ್.ಭಾಸ್ಕರ್, ದಿಶಾ ಸಮಿತಿಯ ಸದಸ್ಯ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರಶಾಂತ್, ಅಂಚೆ ಅಧೀಕ್ಷಕ ಬಿ.ಶ್ರೀನಾಥ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಚಂದ್ರಶೇಖರ್ ಇದ್ದರು.
‘ಅಲಂಕಾರಿಕ ಮಡಿಕೆ: ವಿದೇಶದಲ್ಲಿ ಬೇಡಿಕೆ’ ‘ಕುಂಬಾರರು ತಮ್ಮದೆಯಾದ ಸಂಘಗಳನ್ನು ರಚಿಸಿಕೊಂಡು ದಿನ ಬಳಕೆ ಮಡಿಕೆ ತಯಾರಿಕೆ ಬಿಟ್ಟು ಆಲಂಕಾರಿಕ ಮಡಿಕೆ ತಯಾರು ಮಾಡುತ್ತಿದ್ದಾರೆ. ನಮ್ಮ ಊರಿನಲ್ಲಿ ಮಾಡಿರುವ ಅಲಂಕಾರಿಕ ಮಡಿಕೆಗಳಿಗೆ ಭಾರತ ಮಾತ್ರವಲ್ಲ ವಿದೇಶದಲ್ಲಿ ಬೇಡಿಕೆ ಬಂದಿದೆ’ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕುಂಬಾರರು ಚಮ್ಮಾರರಿಗೆ ತರಬೇತಿ ನೀಡಿ ಅವರಿಗೆ ಆರ್ಥಿಕ ಶಕ್ತಿ ನೀಡಬೇಕಿದೆ. ಈ ಯೋಜನೆಯು ಸಾಂಪ್ರದಾಯಿಕ ಕರಕುಶಲ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಆರ್ಥಿಕ ಬೆಂಬಲ ನೀಡುತ್ತಿದೆ. ನಶಿಸಿ ಹೋಗುತ್ತಿರುವ ಕೈಗಾರಿಕೆಗಳಿಗೆ ಪುನಶ್ಚೇತನ ನೀಡುತ್ತಿದೆ. ಬಡಗಿ ಕಮ್ಮಾರ ಶಿಲ್ಪಿಗಳು ಕುಶಲಕರ್ಮಿಗಳು ಸೇರಿ 18 ಬಗೆಯ ಕುಲಕಸುಬುಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.