ಅಮಾನತು
ಚಿಕ್ಕಮಗಳೂರು: ನಗರದ ತಾಲ್ಲೂಕು ಕಚೇರಿ ಎದುರಿನ ಬಡಾ ಮಕಾನ್ ಸಮೀಪದ ವಿವಾದಿತ ಸ್ಥಳದಲ್ಲಿದ್ದ ಕಟ್ಟಡವನ್ನು ಏಕಾಏಕಿ ತೆರವುಗೊಳಿಸಿದ ಆರೋಪದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಸತ್ತಾರ್ ಷಾ ಹುಸೇನಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
‘ಕಮಲಮ್ಮ ಮತ್ತು ವಕ್ಫ್ ಮಂಡಳಿ, ಜಾಮಿಯಾ ಮಸೀದಿ ನಡುವಿನ ವಿವಾದ ನ್ಯಾಯಾಲಯದಲ್ಲಿದೆ. ಕಮಲಮ್ಮ ಮತ್ತು ಇತರರ ಕಟ್ಟಡವನ್ನು ತೆರವುಗೊಳಿಸದಂತೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 2017ರಲ್ಲಿ ತಡೆಯಾಜ್ಞೆ ನೀಡಿದೆ. ಜಾಮಿಯಾ ಮಸೀದಿ ಆಡಳಿತ ಮಂಡಳಿಯು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದೆ.’
‘ಮಾ.4ರಂದು ಬೆಳಗಿನ ಜಾವ ಕಟ್ಟಡವನ್ನು ತೆರವುಗೊಳಿಸಲಾಗಿದೆ. ತೆರವಿಗೆ ಮುನ್ನ ಕೈಗೊಳ್ಳಬೇಕಾದ ಕ್ರಮಗಳನ್ನು ವಕ್ಫ್ ಅಧಿಕಾರಿ ಕೈಗೊಂಡಿಲ್ಲ. ಸ್ಥಳೀಯ ನಗರಸಭೆಗೆ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿಲ್ಲ. ತೆರವು ಕಾರ್ಯಾಚರಣೆ ಸಂಬಂಧ ಅವರ ಅಧಿಕಾರ ವ್ಯಾಪ್ತಿಯ ಬಗ್ಗೆಯೇ ಅವರಿಗೆ ಮಾಹಿತಿ ಇಲ್ಲ. ವಿವಾದಿತ ಜಾಗದ ಕುರಿತ ದಾಖಲೆಗಳನ್ನು ಪರಿಶೀಲಿಸದೆ ತೆರವುಗೊಳಿಸಲಾಗಿದೆ. ಇದರಿಂದ ಪ್ರಕ್ಷುಬ್ಧ ವಾತಾವರಣ ಉಂಟಾಗಲು ಅಧಿಕಾರಿ ಕಾರಣರಾಗಿದ್ದಾರೆ. ಅಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ‘ಡೇರ್ ಸ್ಟೆಪ್’ ತೆಗೆದುಕೊಂಡಿರುವುದಾಗಿ ಉಡಾಫೆ ಉತ್ತರ ನೀಡಿದ್ದಾರೆ’ ಎಂದು ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರು.
‘ವರದಿ ಅಧರಿಸಿ ಕಾರಣ ಕೇಳಿ ನೀಡಿದ ನೋಟಿಸ್‌ಗೂ ಅಧಿಕಾರಿ ಸಮಜಾಯಿಷಿ ಸಲ್ಲಿಸಿಲ್ಲ. ಆದ್ದರಿಂದ ಅಮಾನತು ಮಾಡಲಾಗಿದೆ’ ಎಂದು ಕರ್ನಾಟಕ ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಕಟ್ಟಡ ಕಳೆದುಕೊಂಡವರು ನೀಡಿದ ದೂರು ಆಧರಿಸಿ ಸತ್ತಾರ್ ಸೇರಿ 14 ಜನರ ವಿರುದ್ಧ ಪೊಲೀಸರು ಎರಡು ಎಫ್‌ಐಆರ್ ದಾಖಲಿಸಿದ್ದರು. ಇಡೀ ಜಾಗದಲ್ಲಿ 14 ದಿನಗಳ ಕಾಲ ನಿರ್ಬಂಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.