ADVERTISEMENT

ಬೆರಟಿಕೆರೆ ಯೋಜನೆಗೆ ಅಡ್ಡಿ: ಗ್ರಾಮಸ್ಥರ ಆತಂಕ

ಸಣ್ಣ ನೀರಾವರಿ ಇಲಾಖೆಯಿಂದ ₹9.90 ಕೋಟಿ ಮೊತ್ತದ ಯೋಜನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 4:15 IST
Last Updated 23 ಜುಲೈ 2025, 4:15 IST
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಹುಲಿಕೆರೆ ಸಮೀಪದ ಬೆರಟಿಕೆರೆ ಕೆರೆ
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಹುಲಿಕೆರೆ ಸಮೀಪದ ಬೆರಟಿಕೆರೆ ಕೆರೆ   

ಚಿಕ್ಕಮಗಳೂರು: ಐತಿಹಾಸಿಕ ಅಯ್ಯನಕೆರೆಯ ಕೋಡಿಯಿಂದ ಹರಿಯುವ ನೀರನ್ನು ನಾಗನಹಳ್ಳಿ ಮತ್ತು ಹುಲಿಕೆರೆ ಸಮೀಪದ ಬೆರಟಿಕೆರೆಗೆ ಹರಿಸುವ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಈ ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ನಂಬಿದ್ದ ಹತ್ತಾರು ಹಳ್ಳಿಗಳಲ್ಲಿ ಆತಂಕ ಮನೆ ಮಾಡಿದೆ.

ಕಡೂರು ತಾಲ್ಲೂಕಿನ ಜೀವನಾಡಿ ಕೆರೆಗಳಲ್ಲಿ ಅಯ್ಯನಕೆರೆಯೂ ಒಂದು. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಹುಟ್ಟುವ ವೇದಾವತಿ ನದಿಗೆ ಅಡ್ಡಲಾಗಿ ಅಯ್ಯನಕೆರೆ ನಿರ್ಮಿಸಲಾಗಿದೆ. ಈ ಕೆರೆ ತುಂಬಿದ ಬಳಿಕ ಕೋಡಿ ಮೂಲಕ ನೀರು ಹರಿಯಲಿದೆ. ಕಡೂರು ತಾಲ್ಲೂಕಿನ ಹಲವು ಹಳ್ಳಿಗಳನ್ನು ಹಾದು ವಾಣಿವಿಲಾಸ ಜಲಾಶಯ ಸೇರಲಿದೆ.

ಇದರ ನಡುವೆ ಅಗ್ರಹಾರದ ಬಳಿಯ ಚೆಕ್‌ಡ್ಯಾಂ ಬಳಿ ನೀರು ಸಂಗ್ರಹಿಸಿ ಬರಪೀಡಿತ ಹಳ್ಳಿಗಳ ಕೆರೆಗಳಿಗೆ ಹರಿಸಲು ಸಣ್ಣ ನೀರಾವರಿ ಇಲಾಖೆ ₹9.90 ಕೋಟಿ ಮೊತ್ತದ ಯೋಜನೆ ರೂಪಿಸಿದೆ. 6.5 ಕಿ.ಮೀ ದೂರಕ್ಕೆ ಪೈಪ್‌ಲೈನ್ ಮೂಲಕ ನೀರು ಸಾಗಿಸಲಾಗುತ್ತದೆ.

ADVERTISEMENT

ಅಗ್ರಹಾರದ ಬಳಿ ಹೊಳೆಗೆ ಹೊಂದಿಕೊಂಡಂತೆ ಬಾವಿಯೊಂದನ್ನು ತೆಗೆಯಲಾಗುತ್ತಿದೆ. ಅಲ್ಲಿಂದ 100 ಎಚ್‌.ಪಿ ಸಾಮರ್ಥ್ಯದ ಮೋಟಾರ್ ಅಳವಡಿಸಿ ಮಳೆಗಾಲದ 45 ದಿನ ಮಾತ್ರ ನೀರೆತ್ತುವ ಯೋಜನೆ ಇದಾಗಿದೆ. ಪ್ರತಿ ಸೆಕೆಂಡಿಗೆ 3,500 ಲೀಟರ್ ನೀರು ಹರಿಯುತ್ತಿದ್ದು, ಇದರಲ್ಲಿ ಎರಡೂವರೆ ಲೀಟರ್ ನೀರನ್ನು ಮಾತ್ರ ಬಳಸಿ ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸೆನ್ಸಾರ್‌ ಆಧಾರಿತ ಮೋಟಾರ್‌ ಅಳವಡಿಸಲಾಗುತ್ತದೆ. ಚೆಕ್‌ಡ್ಯಾಂ ಕೋಡಿ ಮೇಲೆ ಆರು ಇಂಚ್ ಮತ್ತು ಅದಕ್ಕಿಂತ ಹೆಚ್ಚಿನ ನೀರು ಹರಿಯುವ ಸಂದರ್ಭದಲ್ಲಿ ಮಾತ್ರ ಈ ಬಾವಿಗೆ ನೀರು ಬರಲಿದೆ. ಅಲ್ಲಿಂದ ಪೈಪ್‌ಲೈನ್‌ ಮೂಲಕ ಮೊದಲಿಗೆ ನಾಗೇನಹಳ್ಳಿ ಗ್ರಾಮದಲ್ಲಿರುವ ಸಣ್ಣ ಕೆರೆಗೆ ಬರಲಿದೆ.

‘ನಮಗೆ ಕೃಷಿಗೆ ನೀರಾವರಿ ಸೌಕರ್ಯ ಬೇಕಿಲ್ಲ. ಕುಡಿಯುವ ನೀರು ದೊರೆತರೆ ಸಾಕು ಜನ–ಜಾನುವಾರುಗಳ ಜೀವ ಉಳಿಯಲಿದೆ’ ಎನ್ನುತ್ತಾರೆ ಗ್ರಾಮಸ್ಥರು.

ಊರಿನಲ್ಲಿ 150ಕ್ಕೂ ಹೆಚ್ಚು ಎಮ್ಮೆಗಳು, 250 ದನಗಳು, 10 ಸಾವಿರಕ್ಕೂ ಹೆಚ್ಚು ಕುರಿಗಳಿದ್ದವು. ಈಗ ಕುರಿಗಳ ಸಂಖ್ಯೆ 2 ಸಾವಿರಕ್ಕೆ ಇಳಿದಿದೆ. ಎಮ್ಮೆ ಮತ್ತು ನಾಟಿ ಹಸುಗಳೇ ಇಲ್ಲವಾಗಿವೆ. ಜಾನುವಾರುಗಳಿಗೆ ಮೇವಿಲ್ಲದೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಿಂದ ಖರೀದಿಸಿ ತರುವ ಪರಿಸ್ಥಿತಿ ಇದೆ ಎಂದು ಹೇಳಿದರು.

‘ನಾವು ಕೂಡ ಮನುಷ್ಯರು, ಕುಡಿಯಲು ನೀರು ಕೇಳುತ್ತಿದ್ದೇವೆ. ಯೋಜನೆ ವಿರೋಧಿಸುವ ಬದಲಿ ಬರಗಾಲದಲ್ಲಿ ಬೆಂಡಾಗಿರುವ ನಮ್ಮ ಬಗ್ಗೆಯೂ ಕರುಣೆ ತೋರಿಸಬೇಕು’ ಎಂದು ಮನವಿ ಮಾಡುತ್ತಾರೆ.

ಮಳೆಗಾಲದ 45 ದಿನ ಮಾತ್ರ ನೀರೆತ್ತುವ ಯೋಜನೆ | ಪ್ರತಿ ಸೆಕೆಂಡಿಗೆ 3,500 ಲೀಟರ್ ಹರಿಯುವ ನೀರು |ನಮ್ಮ ಬಗ್ಗೆಯೂ ಕರುಣೆ ತೋರಿಸಿ

ಯೋಜನೆಗೆ ವಿರೋಧ ಏಕೆ

ಅಗ್ರಹಾರ ಚೆಕ್‌ಡ್ಯಾಂ ನೀರು ನೂರಾರು ಹಳ್ಳಿಗಳ ಜಲಮೂಲವಾಗಿದ್ದು ಆ ನೀರನ್ನು ಮತ್ತೊಂದು ಯೋಜನೆಗೆ ಬಳಸಿದರೆ ವೇದಾವತಿ ನದಿಯ ಹರಿವು ಕಡಿಮೆಯಾಗಲಿದೆ ಎಂಬುದು ಆ ಭಾಗದ ಹಳ್ಳಿಗಳ ರೈತರ ಆತಂಕ. ಬಾಣೂರು ಶಿವಪುರ ಗುಬ್ಬಿಹಳ್ಳಿ ಜಿಗಣೆಹಳ್ಳಿ ಎನ್.ಜಿ.ಕೊಪ್ಪಲು ಬಂಡಿಕೊಪ್ಪಲು ಪಟ್ಟಣಗೆರೆ ಕುಂತಿಹೊಳೆ ಯಳ್ಳಂಬಳಸೆ ಸೇರಿ ಹಲವು ಹಳ್ಳಿಗಳಿಗೆ ಈ ನದಿಯ ನೀರಿನಿಂದ ಅನುಕೂಲವಾಗಿದೆ.  ಹೊಸ ಯೋಜನೆಯ ಮೂಲಕ ಹುಲಿಕೆರೆ ಮತ್ತು ನಾಗೇನಹಳ್ಳಿ ಕೆರೆಗಳಿಗೆ ಈ ನೀರು ಹರಿಸಿದರೆ ನದಿಯ ನೀರಿನ ಹರಿವು ಕಡಿಮೆಯಾಗಲಿದೆ ಎಂಬುದು ಅವರ ಆತಂಕ. ಆದ್ದರಿಂದ ಯಗಟಿಪುರದಿಂದ ಅಗ್ರಹಾರದ ತನಕ ಪಾದಯಾತ್ರೆ ನಡೆಸಲು ರೈತ ಸಂಘಟನೆಗಳು ಯೋಚಿಸಿವೆ.  ಹೊಸ ಯೋಜನೆ ಕಾರ್ಯಸಾಧುವೇ ಈಗಾಗಲೇ ನೀರು ಪಡೆಯುತ್ತಿರುವ ಹಳ್ಳಿಗಳಿಗೆ ತೊಂದರೆ ಆಗುವುದಿಲ್ಲವೇ ಎಂಬುದನ್ನು ಅಧಿಕಾರಿಗಳು ಸ್ಪಷ್ಟವಾಗಿ ಹೇಳಬೇಕಿದೆ. ತೊಂದರೆ ಇಲ್ಲ ಎಂದಾದರೆ ರೈತರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನೂ ಅಧಿಕಾರಿಗಳು ಮಾಡಬೇಕಿದೆ ಎಂಬುದು ಹುಲಿಕೆರೆ ಸುತ್ತಮುತ್ತಲ ಗ್ರಾಮಸ್ಥರ ಆಗ್ರಹ.

ಕಾಮಗಾರಿ ಸ್ಥಗಿತ

ರೈತರ ವಿರೋಧದಿಂದಾಗಿ ಸದ್ಯ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಅಗ್ರಹಾರದ ಸರಪಳಿ ಕೆಂಚರಾಯಸ್ವಾಮಿ ದೇಗುಲದ ಎದುರು ಮತ್ತು ಚೆಕ್‌ಡ್ಯಾಂ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಶೀಘ್ರವೇ ರೈತರ ಸಭೆ 

ಎರಡೂ ಕಡೆಯ ರೈತ ಮುಖಂಡರ ಸಭೆ ನಡೆಸಿ ಯೋಜನೆ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು. ಚಿಕ್ಕಮಗಳೂರು ಮತ್ತು ಕಡೂರು ಶಾಸಕರ ಜತೆ ಚರ್ಚೆ ಮಾಡಲಾಗಿದೆ. ಶೀಘ್ರವೇ ರೈತರ ಸಭೆ ನಡೆಸಲಾಗುವುದು. ಅಲ್ಲಿ ಬರುವ ಅಭಿಪ್ರಾಯ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.