ADVERTISEMENT

ರಾಷ್ಟ್ರೀಯ ಉದ್ಯಾನದ ಜಲಕನ್ಯೆಯರು...!!!

ನಮ್ಮ ಊರು, ನಮ್ಮ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 15:28 IST
Last Updated 22 ಜೂನ್ 2018, 15:28 IST
ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕಡಾಂಬಿ ಜಲಪಾತ
ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕಡಾಂಬಿ ಜಲಪಾತ    

ವರ್ಷಕ್ಕೆ 250-350 ಇಂಚು ಮಳೆ ಸುರಿಯುವ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲೀ ಈಗ ಎಲ್ಲೆಲ್ಲೂ ಜಲಸಮೃದ್ಧಿಯ ದೃಶ್ಯಾವಳಿ. ರಸ್ತೆ ಬದಿಯ ಸಣ್ಣ ತೊರೆಗಳೂ, ಹಳ್ಳಗಳೂ ಈಗ ಕುದುರೆಮುಖದಲ್ಲಿ ತುಂಬಿ ಹರಿಯುತ್ತಿವೆ. ಸಣ್ಣ ಜಲಪಾತಗಳೂ ದೊಡ್ಡ ರೂಪ ಪಡೆದು ಧುಮ್ಮಿಕ್ಕುತ್ತಿವೆ. ಕುದುರೆಮುಖ ಉದ್ಯಾನವನ್ನು ಪ್ರಕೃತಿಪ್ರಿಯ ಪ್ರವಾಸಿಗರ ಪಾಲಿಗೆ ಸ್ವರ್ಗವನ್ನಾಗಿಸುತ್ತಿರುವುದು ಇದೇ ಜಲಪಾತಗಳು ಮತ್ತು ಅದಕ್ಕೆ ಹೊಂದಿಕೊಂಡಿರುವ ಮಳೆಕಾಡುಗಳು.

ಕುದುರೆಮುಖದಲ್ಲಿ ಕಳೆದ ಮೇ ತಿಂಗಳಿನಿಂದ ಸತತವಾಗಿ ಮಳೆ ಸುರಿಯುತ್ತಲೇ ಇದೆ. ಕಳಸದಲ್ಲಿ ಬಿಸಿಲು ಇದ್ದಾಗಲೂ ಕುದುರೆಮುಖ ಉದ್ಯಾನದಲ್ಲಿ ಸುರಿಮಳೆ ಸಾಮಾನ್ಯ. ಆದ್ದರಿಂದಲೇ ಘಾಟಿ ದಾಟಿ ಬರುವ ವಾಹನ ಚಾಲಕರು ಕಳಸ ತಲುಪಿದೊಡನೆ ಗೆಳೆಯರೊಂದಿಗೆ ಹರಟುತ್ತಾ 'ಘಾಟಿಯಲ್ಲಿ ಎಂಥಾ ಮಳೆ ಗೊತ್ತಾ' ಎಂದು ಉದ್ಘರಿಸುತ್ತಾರೆ.
ಮಳೆ ಪ್ರಮಾಣ ಏರುತ್ತಲೇ ಇಲ್ಲಿನ ಹಳ್ಳ, ಕೊಳ್ಳ, ತೊರೆ, ಉಪನದಿ ಮತ್ತು ಭದ್ರಾ ನದಿಯಲ್ಲಿ ನೀರಿನ ಮಟ್ಟ ಸತತವಾಗಿ ಏರುತ್ತಲೇ ಇರುತ್ತದೆ. ಮತ್ತೆ ಅಕ್ಟೋಬರ್‍ವರೆಗೂ ಈ ಪ್ರಮಾಣ ತಕ್ಕಮಟ್ಟಿಗೆ ಇರುತ್ತದೆ. ಅದರಲ್ಲೂ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಇಲ್ಲಿನ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತವೆ.ಆದ್ದರಿಂದ ಈ ತಿಂಗಳುಗಳಲ್ಲೇ ಇಲ್ಲಿಗೆ ಭೇಟಿ ನೀಡಲು ನಗರಗಳ ಯಾಂತ್ರಿಕ ಜೀವನದಿಂದ ಬೇಸತ್ತ ಪ್ರವಾಸಿಗರು ಹಾತೊರೆಯುತ್ತಾರೆ.


ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಒಳಪಡುವಂತೆ ಅನೇಕ ಜಲಪಾತಗಳು ಇದ್ದು ಹನುಮನಗುಂಡಿಯ ಸೂತನಬ್ಬಿ ಜಲಧಾರೆ ಎಲ್ಲಕ್ಕಿಂತ ಸುಂದರ ಮತ್ತು ರೋಮಾಂಚನ ಮೂಡಿಸುವಂಥಹ ಅನುಭವ ನೀಡುತ್ತದೆ. 200 ಮೆಟ್ಟಿಲು ಇಳಿದು ಮಳೆಕಾಡಿನ ನಡುವಿನ ಕಣಿವೆ ಪ್ರವೇಶಿಸಿದೊಡನೆ ಕಾಣಸಿಗುತ್ತಿದ್ದ ಮನೋಹರ ಜಲರಾಶಿಯ ದೃಶ್ಯಕ್ಕೆ ಅರಣ್ಯ ಇಲಾಖೆ ಪರದೆ ಎಳೆದಿದೆ. ಕಳೆದ 4 ವರ್ಷಗಳಿಂದ ಈ ಜಲಪಾತದ ಪ್ರವೇಶ ದ್ವಾರವನ್ನು ಅರಣ್ಯ ಇಲಾಖೆ ಮುಚ್ಚಿದೆ. ಇದು ಪ್ರವಾಸಿಗರಿಗೆ ನಿರಾಸೆ ತಂದಿದೆ. ಆದರೆ ಇಲ್ಲಿ ಪ್ರವಾಸಿಗರು ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯಗಳಿಂದ ಮಾಡುತ್ತಿದ್ದ ಮಾಲಿನ್ಯ ನಿಗ್ರಹಿಸಲು ಅರಣ್ಯ ಇಲಾಖೆ ತೆಗೆದುಕೊಂಡ ಕಠಿಣ ತೀರ್ಮಾನ ಕೆಲವೊಮ್ಮೆ ಸರಿ ಎನಿಸುತ್ತದೆ.

ADVERTISEMENT


ಆದರೆ ಸಮಾಧಾನಕರ ಅಂಶ ಎಂದರೆ ಕುದುರೆಮುಖದಿಂದ ಕಾರ್ಕಳ ಹೆದ್ದಾರಿಯಲ್ಲಿ ರಸ್ತೆ ಬದಿಯೇ ಧುಮ್ಮಿಕ್ಕುವ ಕಡಾಂಬಿ ಜಲಪಾತದ ಸೊಬಗು. ಪ್ರವಾಸಿಗರನ್ನು ಸೆಳೆಯುವ ಈ ಜಲಪಾತ ವಾಹನದಲ್ಲಿ ಕುಳಿತೇ ಕಣ್ತುಂಬಿಕೊಳ್ಳಲು ಅವಕಾಶ ನೀಡುತ್ತದೆ. ವಾಹನದಿಂದ ಇಳಿದು ಜಲಪಾತದ ಬುಡಕ್ಕೆ ಇಳಿಯುವ ಸಾಹಸ ಮಾಡಿದರೆ ಕೆಲವೇ ನಿಮಿಷದಲ್ಲಿ ಅರಣ್ಯ ಸಿಬ್ಬಂದಿ ಹಾಜರಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ, ಅತಿಕ್ರಮ ಪ್ರವೇಶದ ಪ್ರಕರಣದ ಬೆದರಿಕೆಯನ್ನೂ ಒಡ್ಡುತ್ತಾರೆ. ಜೊತೆಗೆ ನಿಮ್ಮ ಕೈಚೀಲ, ಕೈಯಲ್ಲಿ ಇರುವ ಫೋನ್ ಅಥವಾ ತಿಂಡಿಯ ಪೊಟ್ಟಣ ಕಿತ್ತುಕೊಳ್ಳುವ ವಾನರ ಸೇನೆಯೂ ಇಲ್ಲಿ ಸದಾ ಚುರುಕಾಗಿರುತ್ತದೆ.
ಇನ್ನು ಉದ್ಯಾನ ವ್ಯಾಪ್ತಿಯ ಎಳನೀರು ಗ್ರಾಮದಲ್ಲಿ ಅನೇಕ ಜಲಧಾರೆಗಳು ಮತ್ತು ಜಲಪಾತಗಳು ಇವೆ. ಅಲ್ಲಿನ ಎಳನೀರು ಜಲಪಾತ ಮತ್ತು ಬಂಗರಬಲಿಗೆ ಜಲಪಾತಗಳು ತಮ್ಮ ಎತ್ತರದ ನಿಲುವು ಮತ್ತು ವೇಗೋತ್ಕರ್ಷದಿಂದ ಮೈನವಿರೇಳಿಸುತ್ತವೆ. ಇವುಗಳ ಬುಡಕ್ಕೆ ತಲುಪಲು ಕಡಿದಾದ ಮತ್ತು ಜಾರುವಿಕೆಯ ಮಾರ್ಗ ಕ್ರಮಿಸಿಬೇಕಾದ ಸಾಹಸ ಅನಿವಾರ್ಯ.


ಜೊತೆಗೆ ಎಳನೀರಿನ ಇವೆರೆಡೂ ಜಲಪಾತಗಳು ರಾಷ್ಟ್ರೀಯ ಉದ್ಯಾನಕ್ಕೆ ಸೇರುವುದರಿಂದ ಅರಣ್ಯ ಇಲಾಖೆಯ ತಕರಾರು ಇದ್ದೇ ಇದೆ. ಈ ಕಿರಿಕಿರಿಗಳ ಹೊರತಾಗಿಯೂ ಕೆಲ ಪ್ರವಾಸಿಗರು ಈ ಜಲಪಾತಗಳ ಬಳಿಗೆ ಸಾಗಿ ಅನನ್ಯ ಅನುಭವ ಪಡೆಯುತ್ತಾರೆ. ಪ್ರವಾಸಿಗರ ಪಾಲಿಗೆ ಈ ಜಲಪಾತಗಳು ನಗರ ಜೀವನದ ಏಕತಾನತೆ ಮರೆಸಿ ಹಚ್ಚಹಸುರಿನ ಪರಿಸರದ ಮಧ್ಯೆ ನವ ಉತ್ಸಾಹ ತುಂಬುತ್ತವೆ.


ರವಿ ಕೆಳಂಗಡಿ, ಕಳಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.