ADVERTISEMENT

ಮೂಡಿಗೆರೆ | ಚದುರಿದ ಕಾಡಾನೆ ಗುಂಪು: ಜನ್ನಾಪುರಕ್ಕೆ ಬಂದ 11 ಕಾಡಾನೆಗಳು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 6:37 IST
Last Updated 11 ಆಗಸ್ಟ್ 2025, 6:37 IST
ಮೂಡಿಗೆರೆ ತಾಲ್ಲೂಕಿನ ಜನ್ನಾಪುರ ಬಳಿ ಕಾಫಿ ತೋಟದಲ್ಲಿ ಭಾನುವಾರ ಕಾಣಿಸಿಕೊಂಡ ಕಾಡಾನೆಗಳು
ಮೂಡಿಗೆರೆ ತಾಲ್ಲೂಕಿನ ಜನ್ನಾಪುರ ಬಳಿ ಕಾಫಿ ತೋಟದಲ್ಲಿ ಭಾನುವಾರ ಕಾಣಿಸಿಕೊಂಡ ಕಾಡಾನೆಗಳು   

ಮೂಡಿಗೆರೆ: ತಾಲ್ಲೂಕಿನಲ್ಲಿ ದಾಳಿ‌ ನಡೆಸುತ್ತಿರುವ 40 ಕಾಡಾನೆಗಳ ಗುಂಪು ಶನಿವಾರ ರಾತ್ರಿ ಬೇರ್ಪಟ್ಟಿದ್ದು, ಹನ್ನೊಂದು ಕಾಡಾನೆಗಳ ಗುಂಪು ಚಂದ್ರಾಪುರ ಭಾಗದಿಂದ ಜನ್ನಾಪುರ ಗ್ರಾಮಕ್ಕೆ‌ ಬಂದಿವೆ.

ಜನ್ನಾಪುರ‌ ಪಟ್ಟಣದ ಸಮೀಪದಲ್ಲಿರುವ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳು ಬೆಳಕಾಗುವವರೆಗೂ ಅಲ್ಲೇ ತಿರುಗಾಡಿ, ಅಪಾರ ಪ್ರಮಾಣದ ಬೆಳೆ ಹಾನಿಗೊಳಿಸಿವೆ.

ಒಂಟಿ ಸಲಗವೊಂದು ದಾರದಹಳ್ಳಿ ಮೂಲಕ‌ ಸಾಗಿ ಕಡಿದಾಳ್‌ನಲ್ಲಿ ಹೇಮಾವತಿ ನದಿಯನ್ನು ದಾಟಿ ಕಣಚೂರು ಭಾಗಕ್ಕೆ ತೆರಳಿದ್ದು, ಜನ್ನಾಪುರ, ಬೆಟ್ಟದಮನೆ, ಉಗ್ಗೆಹಳ್ಳಿ, ಕಣಚೂರು, ಹಂತೂರು ಭಾಗಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ADVERTISEMENT

ಎರಡು ಕಾಡಾನೆಗಳ ಗುಂಪು ಕಸ್ಕೇಬೈಲ್ ಹಾಗೂ ನಂದಿಬೆಟ್ಟ ಭಾಗದಲ್ಲಿ ಕಾಣಿಸಿಕೊಂಡಿವೆ. ಉಳಿದ ಕಾಡಾನೆಗಳು ನಂದೀಪುರ, ಪುರ ಭಾಗಗಳಲ್ಲಿ ಕಂಡು ಬಂದಿವೆ.

ಈಗಾಗಲೇ ರೈತರು ಭತ್ತದ‌ ಗದ್ದೆಗಳನ್ನು ನಾಟಿ ಮಾಡಿದ್ದು, ಕಾಡಾನೆಗಳು ದಾಳಿ ಮಾಡಿದರೆ ಭತ್ತದ ಗದ್ದೆಗಳು ನಾಶವಾಗುವ ಆತಂಕ ಕಾಡುತ್ತಿದೆ. ಗುಂಪಿನಲ್ಲಿದ್ದ 40 ಕಾಡಾನೆಗಳು ಬೇರ್ಪಟ್ಟಿರುವುದು ಅರಣ್ಯ ಇಲಾಖೆಗೂ ತಲೆನೋವಾಗಿದ್ದು, ಆನೆ ಕಾರ್ಯಪಡೆಯು ಕಾಡಾನೆಗಳು ಗ್ರಾಮದತ್ತ ಬರದಂತೆ ತಡೆಯಲು ಹರಸಾಹಸ ಪಡುತ್ತಿದ್ದಾರೆ.

‘ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳ ವಿಪರೀತವಾಗಿದ್ದು, ಇವುಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಗುಂಪಾಗಿ ದಾಳಿ ನಡೆಸುತ್ತಿರುವ ಕಾಡಾನೆಗಳು ಕಾಫಿ ತೋಟಗಳನ್ನು ಕ್ಷಣಾರ್ಧದಲ್ಲಿ ನಿರ್ನಾಮಗೊಳಿಸುತ್ತಿವೆ.‌ ಇದರಿಂದ ಬೆಳೆಗಾರರು ಬೀದಿಗೆ ಬೀಳುವಂತಾಗಿದೆ.‌ ಸರ್ಕಾರವು ಕೂಡಲೇ ಕಾಡಾನೆ ದಾಳಿ ತಡೆಯಲು ಮುಂದಾಗಬೇಕು’ ಎಂದು ಬಿಜೆಪಿ ಮುಖಂಡ ಜೆ.ಎಸ್. ರಘುಜನ್ನಾಪುರ ಒತ್ತಾಯಿಸಿದ್ದಾರೆ.

ಮೂಡಿಗೆರೆ ತಾಲ್ಲೂಕಿನ ಜನ್ನಾಪುರಕ್ಕೆ ಬಂದಿರುವ ಕಾಡಾನೆಗಳ ಗುಂಪಿನಲ್ಲಿರುವ ಬೃಹತ್ ಗಾತ್ರದ ಕಾಡಾನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.