ಚಿಕ್ಕಮಗಳೂರು: 11ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಜಿಲ್ಲೆಯ ವಿವಿಧೆಡೆ ಆಚರಿಸಲಾಯಿತು. ಹಲವು ಕಡೆಗಳಲ್ಲಿ ಜನ ಸಾಮೂಹಿಕ ಯೋಗಾಸನ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ಯೋಗ ಸಂಗಮ’ ಕಾರ್ಯಕ್ರಮದಲ್ಲಿ ನೂರಾರು ಜನ ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಿದರು. ಯೋಗ ಶಿಕ್ಷಕ ಬಿ.ಎಂ. ಶಿವಪ್ಪ ಅವರು ಯೋಗದ ಭಂಗಿಗಳನ್ನು ಪರಿಚಯಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ‘ಯೋಗಭ್ಯಾಸವನ್ನು 40 ವರ್ಷಗಳಿಂದ ನಾನು ಮಾಡುತ್ತಿದ್ದೇನೆ. ಆದ್ದರಿಂದ ಆರೋಗ್ಯವನ್ನು ಸದೃಢವಾಗಿ ಇರಿಸಿಕೊಳ್ಳಲು ಸಾಧ್ಯವಾಗಿದೆ. ಯೋಗಾಸನ ಎಲ್ಲರ ಬದುಕಿನ ಭಾಗವಾಗಬೇಕು’ ಎಂದರು.
‘ಒಂದು ಕಾಲದಲ್ಲಿ ಬುಡುಬುಡಿಕೆಯವರ, ಹಾವಾಡಿಗರ ದೇಶ ಎಂಬಂತಾಗಿತ್ತು. ಆದರೆ, ಜಗತ್ತಿಗೆ ಗಣಿತ ಸೂತ್ರವನ್ನು ಕೊಟ್ಟಂತಹ ದೇಶ ನಮ್ಮದು. ಖಗೋಳ ಶಸ್ತ್ರ, ವೈದ್ಯಕೀಯ ಪಂಡಿತರನ್ನು ಕೊಟ್ಟ ದೇಶ ನಮ್ಮದು. ಸಾವಿರಾರು ವರ್ಷಗಳ ಚಿನ್ನದ ಹಕ್ಕಿಯಂತೆ ಜಗತ್ತನ್ನು ಬೆಳಗುತ್ತಿದ್ದ ರಾಷ್ಟ್ರ ನಮ್ಮದು’ ಎಂದು ಹೇಳಿದರು.
‘ಈಗ ಯೋಗದ ಮೂಲಕ ತನ್ನ ದರ್ಶನದ ಪ್ರಭೆಯನ್ನು ಜಗತ್ತಿಗೆ ಹೇಳಿಕೊಡುತ್ತಿದೆ. ಯೋಗ ದಿನದ ಆಚರಣೆಗೆ ಮೂಲ ಪ್ರೇರಕರಾಗಿ ಕೆಲಸ ಮಾಡಿದವರು ಪ್ರಧಾನಿ ನರೇಂದ್ರ ಮೋದಿ’ ಎಂದು ತಿಳಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ‘ಭಾರತದಲ್ಲಿ ಸಾವಿರಾರು ವರ್ಷಗಳಿಂದ ಯೋಗ ಇದೆ. ಈಗ ಇಡೀ ಜಗತ್ತು ಯೋಗದ ಕಡೆ ಮುಖ ಮಾಡಿದೆ. 195ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಯೋಗ ದಿನ ಆಚರಣೆಯಾಗುತ್ತಿದೆ. ಅದಕ್ಕೆ ಕಾರಣರಾದವರು ಪ್ರಧಾನಿ ನರೇಂದ್ರ ಮೋದಿ’ ಎಂದು ಬಣ್ಣಿಸಿದರು.
‘ವಿದೇಶದಲ್ಲಿ ಇರುವ ಅನ್ಯಧರ್ಮೀಯರೂ ಯೋಗಾಭ್ಯಾಸ ಮಾಡುತ್ತಿದ್ದಾರೆ. ನಾನೂ ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಿದ್ದೇನೆ. ಯೋಗದ ಮಹತ್ವವನ್ನು ಎಲ್ಲರೂ ಅರಿತು ಅಳವಡಿಸಿಕೊಂಡರೆ ಆರೋಗ್ಯವಂತರಾಗಿ ಬದುಕಲು ಸಾಧ್ಯ’ ಎಂದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಅಶ್ವತ್ಥಬಾಬು, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಗೀತಾ, ಡಿಡಿಪಿಐ ಜೆ.ಕೆ.ಪುಟ್ಟರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ, ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯ, ಪ್ರಬೋಧಿನಿ ಯೋಗ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಎಚ್.ಸಿ.ಸುರೇಂದ್ರ, ಎಸ್‌ಪಿವೈಎಸ್‌ಎಸ್ ಜಿಲ್ಲಾ ಸಂಚಾಲಕಿ ಶಾರದಾ ರವಿ, ಅನುವ್ರತ್ ಸಮಿತಿ ಅಧ್ಯಕ್ಷೆ ಮಂಜು ಬನ್ಸಾಲಿ, ಜೋಳದಾಳ್ ವೆಲ್ನೆಸ್ ಸೆಂಟರ್‌ನ ವೈದ್ಯರಾದ ಡಾ.ಗೌರಿ ವರುಣ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.