ADVERTISEMENT

ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 9:22 IST
Last Updated 26 ಏಪ್ರಿಲ್ 2013, 9:22 IST

ಚಳ್ಳಕೆರೆ: ತಾಲ್ಲೂಕಿನ ಕಸಬಾ ಹೋಬಳಿ ಹೊಟ್ಟೆಪ್ಪನಹಳ್ಳಿ ಗ್ರಾಮದಲ್ಲಿ ಕೆಲ ಅಂಗಡಿಗಳಲ್ಲಿ ಎಗ್ಗಿಲ್ಲದೆ ಅನಧಿಕೃತ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಕುಡುಕರ ಹಾವಳಿ ಹೆಚ್ಚಾಗಿರುವುದರಿಂದ ಇಂತಹ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವ ಮೂಲಕ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು ಎಂದು ಗ್ರಾಮದ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹಾಗೂ ಮಾದಿಗ ದಂಡೋರ ಸಮಿತಿ ಕಾರ್ಯಕರ್ತರು ಗುರುವಾರ ಅಬಕಾರಿ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.

ದುಡಿದ ಹಣವನ್ನೆಲ್ಲಾ ಕುಡಿತಕ್ಕೆ ಬಳಸುವ ಗಂಡಸರು ರಾತ್ರಿ ಸಮಯದಲ್ಲಿ ಕುಟುಂಬಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ದೈಹಿಕ ಹಲ್ಲೆ ಮಾಡುತ್ತಿದ್ದಾರೆ. ಇದರಿಂದ ಕುಟುಂಬಗಳಲ್ಲಿ ಕಲಹಗಳು ಹೆಚ್ಚುತ್ತಿರುವುದರಿಂದ ಮದ್ಯ ಮಾರಾಟವನ್ನು ನಿಲ್ಲಿಸಬೇಕು. ಮಹಿಳೆಯರು ಕೂಲಿ ಕೆಲಸದಲ್ಲಿ ದುಡಿದ ಹಣವನ್ನು ದೌರ್ಜನ್ಯ ಮಾಡಿ ಗಂಡಸರು ಕುಡಿತಕ್ಕೆ ಬಳಸುತ್ತಿರುವುದೂ ಗ್ರಾಮದಲ್ಲಿ ಕಂಡುಬಂದಿದೆ.

ತಾಲ್ಲೂಕು ಕೇಂದ್ರಕ್ಕೆ ಸಮೀಪದಲ್ಲಿ ಇರುವ ಗ್ರಾಮದಲ್ಲಿ ದಿನದ 24 ಗಂಟೆಯೂ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಈ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಾರೋಷವಾಗಿ ಮದ್ಯ ಸಾಗಾಟ ಮಾಡಲಾಗುತ್ತಿದೆ. ಅಧಿಕಾರಿಗಳು ಮಾತ್ರ ಅಕ್ರಮ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟದೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದಲ್ಲದೇ ರಾತ್ರಿ ಸಮಯದಲ್ಲಿ ಜೂಜಾಟವೂ ನಿರಾಂತಕವಾಗಿ ನಡೆಯುತ್ತಿದೆ. ಗ್ರಾಮದಲ್ಲಿ ಜೂಜುಕೋರರು, ಕುಡುಕರ ಹಾವಳಿ ಹೆಚ್ಚಾಗಿದೆ. ಆದ್ದರಿಂದ, ಈ ಕೂಡಲೇ ಗ್ರಾಮದಲ್ಲಿ ನಡೆಯುವ ಜೂಜಾಟ ಮತ್ತು ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಹಿಳಾ ಸಂಘಗಳ ಕಾರ್ಯಕರ್ತೆಯರು, ಮಾದಿಗ ದಂಡೋರ ಸಮಿತಿಯ ಸದಸ್ಯರು ಹಾಜರಿದ್ದರು.ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಜಯಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.