ADVERTISEMENT

ಅಡಕತ್ತರಿಯಲ್ಲಿ ಅಲೆಮಾರಿಗಳ ಬದುಕು!

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 5:40 IST
Last Updated 22 ಆಗಸ್ಟ್ 2012, 5:40 IST

ಹೊಳಲ್ಕೆರೆ: ಬರದಿಂದ ತತ್ತರಿಸಿರುವ ಕುರಿಗಾಹಿಗಳು ತಮ್ಮ ಕುರಿ, ಮೇಕೆಗಳನ್ನು ಬದುಕಿಸಿಕೊಳ್ಳಲು ಊರೂರು ಅಲೆಯುವ ಪರಿಸ್ಥಿತಿ ತಲೆದೋರಿದೆ.

ಕುರಿ ಕಾಯುವ ವಂಶಪಾರಂಪರಿಕ ವೃತ್ತಿಯನ್ನು ಉಳಿಸಕೊಳ್ಳಲು ಮೇವು ಸಿಗುವ ದೂರದ ಊರುಗಳಿಗೆ ಹೋಗುವ ಈ ಅಲೆಮಾರಿಗಳ ಬದುಕು ನಿಜಕ್ಕೂ ದುಸ್ತರ. ಸ್ಥಳೀಯರ ವಿರೋಧ, ಮೂಲಸೌಕರ್ಯ ಕೊರತೆ, ಅಭದ್ರತೆ, ಪ್ರಾಣಭಯಗಳ ನಡುವೆ ಬದುಕುವ ಅವರ ಜೀವನ ಒಂದು ಸವಾಲೇ ಸರಿ ಎಂಬಂತಾಗಿದೆ.

ಹಿರಿಯೂರು ತಾಲ್ಲೂಕು ಮಾರಿಕಣಿವೆ ಸಮೀಪದ ದೊಡ್ಡಘಟ್ಟ ಗ್ರಾಮದಲ್ಲಿ ಕುರಿಕಾಯುವ ಸುಮಾರು 40 ಕುಟುಂಬಗಳಿವೆ. ಗೊಲ್ಲ ಜನಾಂಗಕ್ಕೆ ಸೇರಿದ ಇವರೆಲ್ಲ ತಾತ-ಮುತ್ತಾತರ ಕಾಲದಿಂದಲೂ ಕುರಿ, ಮೇಕೆಗಳನ್ನು ಸಾಕಿ ಜೀವನ ನಡೆಸುತ್ತಿದ್ದಾರೆ. ಅವರು ಮೊದಲೆಲ್ಲಾ ಗ್ರಾಮದ ಸುತ್ತವೇ ಕುರಿ ಕಾಯುತ್ತಿದ್ದರು. ಎರಡು, ಮೂರು ವರ್ಷಗಳಿಂದ ಬರ ಆವರಿಸಿ, ಕುರಿಗಳನ್ನು ಉಳಿಸಿಕೊಳ್ಳಲು ಹೊಳಲ್ಕೆರೆ, ಚನ್ನಗಿರಿ, ಶಿವಮೊಗ್ಗ, ಸಾಗರ, ಭದ್ರಾವತಿ ಮತ್ತಿತರ ಕಡೆ ವಲಸೆ ಹೋಗುವ ಪರಿಸ್ಥಿತಿ ಬಂದಿದೆ.

ಒಂದೇ ಕಡೆ ಹೋದರೆ ಮೇವು, ನೀರಿಗೆ ಅಭಾವ ಬರಬಹುದು ಎಂದು ಎರಡು, ಮೂರು ಕುಟುಂಬಗಳು ಒಂದೊಂದು ಕಡೆ ಹೋಗುತ್ತವೆ.

`ನಮಗೆ ಸುಮಾರು 200 ಕುರಿಗಳಿವೆ. ನಮ್ಮಕಡೆ ಎರಡು ವರ್ಷಗಳಿಂದ ಮಳೆ ಬರದೆ ಹುಲ್ಲು ಕಡ್ಡಿಯೂ ಚಿಗುರಿಲ್ಲ. ಅವುಗಳಿಗೆ ಕುಡಿಯಲು ನೀರಿಲ್ಲ. ಆದ್ದರಿಂದ, ಎರಡು ವರ್ಷಗಳಿಂದಲೂ ಇದೇ ಕಾಡಿನಲ್ಲಿ ಕುರಿ ಮೇಯಿಸುತ್ತಿದ್ದೇವೆ.
 
ಎಮ್ಮೆಹಟ್ಟಿ, ಲೋಕದೊಳಲು ಮತ್ತು ಗುಡ್ಡದ ಸಾಂತೇನಹಳ್ಳಿ ಗ್ರಾಮಗಳಲ್ಲಿ `ರೊಪ್ಪ~ (ಕುರಿ ಕೂಡುವ ಜಾಗ) ಹಾಕಿಕೊಂಡು ಇದ್ದೇವೆ~ ಎನ್ನುತ್ತಾರೆ ಗುಡ್ಡದ ಸಾಂತೇನ ಹಳ್ಳಿ ಅರಣ್ಯ ಪ್ರದೇಶದಲ್ಲಿ ಕುರಿ ಮೇಯಿಸಲು ಬಂದಿರುವ ರಮೇಶ ಮತ್ತು ಕಾಳ.

ಇಲ್ಲಿ ಒಂದಿಷ್ಟು ಮಳೆ ಬಂದಿರುವುದರಿಂದ ಹುಲ್ಲು ಚಿಗುರಿದೆ. ಅಲ್ಲದೇ, ಹೆಚ್ಚಾಗಿ ಬಾದೆ ಹುಲ್ಲು ಸಿಗುತ್ತದೆ. ಮೇಕೆಗಳು ಗಿಡದ ಸೊಪ್ಪು ತಿನ್ನುತ್ತವೆ. ಇಲ್ಲಿರುವ ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ಹೊಂಡದಲ್ಲಿ ನೀರು ಕುಡಿಸುತ್ತೇವೆ. ಈಗ ಕುರಿ ಸಾಕುವುದು ಬಹಳ ಕಷ್ಟದ ಕೆಲಸ.

ಹಿಂದಿನವರು ಮಾಡಿಕೊಂಡು ಬಂದ ವೃತ್ತಿಯನ್ನು ಬಿಡಬಾರದು ಎಂದು ನಾವೂ ಮುಂದುವರಿಸುತ್ತಿದ್ದೇವೆ. ಊರಲ್ಲಿ ಒಂದಿಷ್ಟು ಜಮೀನಿದ್ದು, ಮಳೆ ಇಲ್ಲದೆ ಬಿತ್ತನೆ ಮಾಡಿಲ್ಲ. ಎರಡು ವರ್ಷದಿಂದ ಕುರಿಗಳು ಊರಿಗೆ ಹೋಗಿಲ್ಲ. ಮನೆಯಲ್ಲಿ ಕಷ್ಟ, ಸುಖ ವಿಚಾರಿಸಲು ನಮ್ಮವರೇ ಒಬ್ಬರನ್ನು ಕರೆಸಿಕೊಂಡು, ನಾವು ಹೋಗಿ ಬರುತ್ತೇವೆ ಎಂದರು.

ಕುರಿ ಸಾಕುವುದರಿಂದ ಈಗ ಹೆಚ್ಚು ಲಾಭ ಇದೆ. ನಾವು ಹೆಣ್ಣು ಕುರಿಗಳನ್ನು ಮಾರಾಟ ಮಾಡುವುದಿಲ್ಲ. ನಮ್ಮ ಕುರಿ ಹಿಂಡಿನಲ್ಲಿ ವರ್ಷಕ್ಕೆ ಸುಮಾರು 150 ಮರಿಗಳು ಹುಟ್ಟುತ್ತವೆ. ಅವನ್ನು ಮಾತ್ರ ಮಾರುತ್ತೇವೆ. ಈಗ ಮರಿಗಳಿಗೂ ಉತ್ತಮ ಬೆಲೆ ಇದ್ದು, ರೂ 3ರಿಂದ 4 ಸಾವಿರದವರೆಗೆ ಹೋಗುತ್ತವೆ. ಬೇಸಿಗೆಯಲ್ಲಿ `ಮಂದೆ~ (ತೋಟ, ಹೊಲಗಳಲ್ಲಿ ರಾತ್ರಿ ವೇಳೆ ಕುರಿ ನಿಲ್ಲಿಸುವುದು) ಬಿಟ್ಟರೆ ದಿನಕ್ಕೆ ರೂ 500 ಸಿಗುತ್ತದೆ. ನಾವು ಕುರಿಯ ಹಾಲು, ಮಜ್ಜಿಗೆ, ಬೆಣ್ಣೆ, ತುಪ್ಪ ತಿನ್ನುತ್ತೇವೆ. ಇದರೊಂದಿಗೆ ಖರ್ಚೂ ಇರುತ್ತದೆ. ಕುರಿಗಳಿಗೆ ಜ್ವರ, ಹುಣ್ಣು ಮತ್ತಿತರ ಕಾಯಿಲೆಗಳು ಬಂದಾಗ ಔಷಧಿಗಾಗಿ ವರ್ಷಕ್ಕೆ ಸುಮಾರು ರೂ 40 ಸಾವಿರ ಬೇಕು.

ನಮಗೆ ರಕ್ಷಣೆ ನೀಡುವಂತೆ ಕೋರಿ ದೇವರಿಗೆ ಟಗರು ಬಿಡುತ್ತೇವೆ. ಅದನ್ನು ಮಾರಿದಾಗ ಬಂದ ಹಣದಲ್ಲಿ ಬೆಳ್ಳಿಯ ಛತ್ರಿ, ಕಿರೀಟ ಮತ್ತಿತರ ವಸ್ತುಗಳನ್ನು ಅರ್ಪಿಸುತ್ತೇವೆ. ವರ್ಷಕ್ಕೊಮ್ಮೆ ದೀಪಾವಳಿಗೆ ಊರಿಗೆ ಹೋಗಿ ಹಬ್ಬ ಮಾಡುತ್ತೇವೆ. ಆಗಲೂ ನಮ್ಮ ಹಿರಿಯರಲ್ಲಿ ಒಬ್ಬಿಬ್ಬರು ಇಲ್ಲಿಗೆ ಬಂದು ಕುರಿ ನೋಡಿಕೊಳ್ಳುತ್ತಿರಬೇಕು ಎನ್ನುತ್ತಾರೆ ಮತ್ತೊಬ್ಬ ಕುರಿಗಾಹಿ ಚಂದ್ರಪ್ಪ.

ನಾವು ಎಂದೂ ಕುರಿಗಳನ್ನು ಎಣಿಸುವುದಿಲ್ಲ. ವರ್ಷಕ್ಕೆ ಒಮ್ಮೆ ಉಣ್ಣೆ ಕತ್ತರಿಸುವಾಗ ಮಾತ್ರ ಲೆಕ್ಕ ಮಾಡುತ್ತೇವೆ. ಬಣ್ಣದಿಂದಲೇ ಕುರಿಗಳನ್ನು ಗುರುತಿಸುತ್ತೇನೆ. ಒಂದು ಕುರಿ ತಪ್ಪಿಸಿಕೊಂಡಿದ್ದರೂ, ನಮಗೆ ತಕ್ಷಣ ಗೊತ್ತಾಗುತ್ತದೆ.

ಕಾಡಿನಲ್ಲಿ ಕುರಿ ಕಾಯುವುದು ಕಷ್ಟ. ಚಿರತೆ, ತೋಳಗಳ ಭಯ ಇರುತ್ತದೆ. ಕಳೆದ ವರ್ಷ ಇದೇ ಕಾಡಿನಲ್ಲಿ ಚಿರತೆ 30 ಕುರಿಗಳನ್ನು ಕೊಂದು ಹಾಕಿತ್ತು. ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯಗಳಿಲ್ಲ. ಕುರಿಸಾಲ ಪಡೆಯಲು ನೂರೊಂದು ದಾಖಲೆಗಳನ್ನು ಕೇಳುತ್ತಾರೆ ಎಂಬ ಅಳಲು ಈ ಕುರಿಗಾಹಿಗಳದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.