ADVERTISEMENT

ಅಣು ವಿಜ್ಞಾನ ಸಂಸ್ಥೆಗೆ ನೀಡಿರುವ ಜಮೀನು ವಾಪಸ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2011, 6:20 IST
Last Updated 11 ಏಪ್ರಿಲ್ 2011, 6:20 IST

ಚಳ್ಳಕೆರೆ: ತಾಲ್ಲೂಕಿನ ಕುದಾಪುರ ಕುರಿ ಸಂವರ್ಧನಾ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಿ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ಅಣು ಸಂಶೋಧನಾ ಕೇಂದ್ರ ಸ್ಥಾಪಿಸಲು ಸರ್ಕಾರ ನಿರ್ಧರಿಸಿರುವುದು ಈ ಭಾಗದ ರೈತ, ಕೂಲಿ ಕಾರ್ಮಿಕರಿಗೆ ಬಗೆದ ದ್ರೋಹವಾಗಿದ್ದು, ಇದನ್ನು ಖಂಡಿಸಿ ಹೋರಾಟಕ್ಕೆ ನಡೆಸಲು ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಿದರು.

 ರೈತ ಮುಖಂಡ ಕೆ.ಪಿ.ಭೂತಯ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮೈಸೂರು ಸಂಸ್ಥಾನದ ಅರಸರ ಕಾಲದಲ್ಲಿ ರೈತರ ಹಾಗೂ ಜಾನುವಾರುಗಳ ಉಪಯೋಗಕ್ಕಾಗಿ 10 ಸಾವಿರ ಎಕರೆ ಜಮೀನನ್ನು ಮೀಸಲಿಡಲಾಗಿದ್ದು, ಇಂತಹ ಜನವಸತಿ ಪ್ರದೇಶಕ್ಕೆ ಹತ್ತಿರ ಇರುವ ಸರ್ಕಾರಿ ಭೂಮಿಯಲ್ಲಿ ಅಣು ಸಂಶೋಧನಾ ಕೇಂದ್ರ ಸ್ಥಾಪಿಸಲು ಹೊರಟಿರುವ ಸರ್ಕಾರದ ನಿರ್ಧಾರಗಳು ರೈತ ವಿರೋಧಿಯಾಗಿವೆ ಎಂದರು.

ಪ್ರತಿಷ್ಠಿತ ಸಂಸ್ಥೆಗಳು ಕುದಾಪುರ ಫಾರಂನಲ್ಲಿ ಪ್ರಾರಂಭವಾಗುವುದರಿಂದ ಈ ಭಾಗದ ಜನರಿಗೆ ನಯಾಪೈಸೆಯ ಉಪಯೋಗ ಇಲ್ಲವಾಗಿದೆ. ಬದಲಾಗಿ ಮುಂದಿನ ದಿನಗಳಲ್ಲಿ ಜನರು ಆತಂಕದ ಬದುಕು ನಡೆಸಬೇಕಾಗಿರುವುದರಿಂದ ಸರ್ಕಾರ ಏಕಾಏಕಿ ತೆಗೆದುಕೊಂಡಿರುವ ರೈತ ವಿರೋಧಿ ನಿರ್ಧಾರವನ್ನು ಖಂಡಿಸುತ್ತಾ ಈ ಸಂಸ್ಥೆಗಳಿಗೆ ಜಿಲ್ಲಾಡಳಿತ ಮಂಜೂರು ಮಾಡಿರುವ ಭೂಮಿಯನ್ನು ಈ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಸಾವಿರಾರು ರೈತರು ಪ್ರತಿಭಟನೆ ಮಾಡಲಿದ್ದೇವೆ ಎಂದು ತಿಳಿಸಿದರು.
ರೈತರ ಬದುಕನ್ನು ಕಿತ್ತುಕೊಳ್ಳುವ ಇಂತಹ ಸಂಸ್ಥೆಗಳು ನಮಗೆ ಬೇಕಾಗಿಲ್ಲ. ಪರಿಶಿಷ್ಟ ಜಾತಿ ಹಾಗೂ ಪಂಗಡದವರೇ ಹೆಚ್ಚಾಗಿ ವಾಸಿಸುವ ಈ ಭಾಗದಲ್ಲಿ ಇಂತಹ ಸಂಸ್ಥೆಗಳಿಂದ ಇವರ ಬದುಕೇ ಬೀದಿ ಪಾಲಾಗುತ್ತದೆ ಎಂದರು.

‘ಕುದಾಪುರ ಉಳಿಸಿ’ ಹೋರಾಟಕ್ಕೆ ಜಿಲ್ಲೆಯ ಸಂಸ್ಥೆಗಳು, ವಿದ್ಯಾರ್ಥಿಗಳು, ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಸಾಹಿತಿಗಳು ಕೈಜೋಡಿಸುವ ಮೂಲಕ ಬಡಜನರ ಬದುಕನ್ನು ಕಿತ್ತುಕೊಳ್ಳುವ ಸಂಸ್ಥೆಗಳನ್ನು ಈ ನೆಲದಿಂದ ಹಿಂದಕ್ಕೆ ಕಳುಹಿಸಬೇಕಾಗಿದೆ ಎಂದು ಮನವಿ ಮಾಡಿದರು.ಕುದಾಪುರ ಉಳಿಸುವವರೆಗೂ ಚಳವಳಿ ನಡೆಯುತ್ತದೆ. ರಸ್ತೆತಡೆ, ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ರಾಷ್ಟ್ರೀಯ ಹೋರಾಟಗಾರರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.ರೆಡ್ಡಿಹಳ್ಳಿ ವೀರಣ್ಣ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ವೀರಭದ್ರಪ್ಪ ಇದ್ದರು.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.