ಚಳ್ಳಕೆರೆ: ಬರಪೀಡಿತ ಚಳ್ಳಕೆರೆ ತಾಲ್ಲೂಕಿನಿಂದ ಆರೋಗ್ಯ, ಶಿಕ್ಷಣ ಸೇರಿದಂತೆ ಉಳಿದ ಇಲಾಖೆಗಳಿಂದ ಚಿತ್ರದುರ್ಗ ಹಾಗೂ ಇನ್ನಿತರೆ ತಾಲ್ಲೂಕುಗಳಿಗೆ ತಾತ್ಕಾಲಿಕ ನಿಯೋಜನೆ ಮೇರೆಗೆ ಹೋಗಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಕೂಡಲೇ ವಾಪಸ್ ಕರೆಸಿಕೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಟಿ. ರವಿಕುಮಾರ್ ತಾಲ್ಲೂಕು ಪಂಚಾಯ್ತಿ ಇಒ ತಿಪ್ಪೇಸ್ವಾಮಿಗೆ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿಶೇಷ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಚಳ್ಳಕೆರೆ ತಾಲ್ಲೂಕು ಅತ್ಯಂತ ದೊಡ್ಡದಾದ ಮತ್ತು ಅಷ್ಟೇ ಹಿಂದುಳಿದ ತಾಲ್ಲೂಕಾಗಿದೆ. ಈ ಬಾರಿಯ ಬರಗಾಲ ಇಲ್ಲಿನ ಜನರನ್ನು ದಿಕ್ಕೇ ತೋಚದಂತೆ ಮಾಡಿರುವುದರಿಂದ ಇಲ್ಲಿ ಕಾರ್ಯ ನಿರ್ವಹಿಸಲು ಎಲ್ಲಾ ಇಲಾಖೆಗಳಲ್ಲಿಯೂ ಅಗತ್ಯ ಸಿಬ್ಬಂದಿಯ ಆವಶ್ಯಕತೆ ಇದೆ ಎಂದು ಅವರು ಹೇಳಿದರು.
ಸರ್ಕಾರ ರೈತರಿಗೆ ನೀಡುತ್ತಿರುವ ಸುವರ್ಣ ಭೂಮಿ ಯೋಜನೆ ಅಡಿಯಲ್ಲಿ ತಾಲ್ಲೂಕಿನಲ್ಲಿ ಎಷ್ಟು ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಗಿದೆ ಮತ್ತು ಇದಕ್ಕೆ ಬಿಡುಗಡೆಯಾದ ಅನುದಾನದ ವಿವರ ಎಷ್ಟು ಎಂಬ ಪ್ರಶ್ನೆಗೆ ಕೃಷಿ ಅಧಿಕಾರಿಯಿಂದ ಸಮರ್ಪಕ ಉತ್ತರ ಬಾರದ ಕಾರಣ ಅಧಿಕಾರಿಯ ವಿರುದ್ಧ ಹರಿಹಾಯ್ದರು.
ತಾಲ್ಲೂಕಿನ ನಾಯಕನಹಟ್ಟಿ, ಪರಶುರಾಂಪುರ, ಸಾಣೀಕೆರೆ, ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಪ್ರಾರಂಭಿಸಲಾಗಿರುವ ಗೋ ಶಾಲೆಗಳಲ್ಲಿ ಜಾನುವಾರುಗಳಿಗೆ ಔಷಧಿ ಪೂರೈಕೆ ಆಗುತ್ತಿಲ್ಲ ಎಂಬ ಅಂಶ ಪಶುವೈದ್ಯ ಇಲಾಖೆ ಅಧಿಕಾರಿಯಿಂದ ಬೆಳಕಿಗೆ ಬಂದಿತು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಜಿಲ್ಲಾಧಿಕಾರಿ ಅವರು ಗೋ ಶಾಲೆಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ಕುಡಿಯುವ ನೀರು, ಮೇವು, ಜಾನುವಾರುಗಳಿಗೆ ಕಾಯಿಲೆ ಬಿದ್ದರೆ ಔಷಧಿ ಎಲ್ಲವೂ ಪೂರೈಕೆ ಆಗುತ್ತಿದೆ ಎಂದು ಹೇಳಿದ್ದಾರೆ. ಇಲ್ಲಿ ನೋಡಿದರೆ ಔಷಧಿ ಕೊರತೆ ಇದೆ ಎನ್ನುತ್ತಿದ್ದಿರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಹಾಸ್ಟೆಲ್‌ಗಳಿಗೆ ಬಿಡುಗಡೆ ಆಗಿರುವ ಹಣ ಹಾಗೂ ಖರ್ಚಾದ ಹಣದ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು ಎಂದರು. ಇಂದಿನ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಕೂಡಲೇ ಷೋಕಾಸ್ ನೋಟಿಸ್ ನೀಡುವಂತೆ ತಾ.ಪಂ. ಇಒಗೆ ಸೂಚಿಸಿದರು.
ಜಾಜೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ವಾಹನಕ್ಕೆ ಚಾಲಕ ಇಲ್ಲದೇ ವಾಹನ ಉಪಯೋಗಕ್ಕೆ ಬಾರುತ್ತಿಲ್ಲ ಎಂದು ಜಿ.ಪಂ. ಸದಸ್ಯ ಜಯಪಾಲಯ್ಯ ಹಾಗೂ ಗೋಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ಕೊರತೆ ನೀಗಿಸಲು ವೈದ್ಯಾಧಿಕಾರಿ ಯಾವ ಕ್ರಮ ಕೈಗೊಂಡಿದ್ದೀರಾ ಎಂದು ದೊಡ್ಡೇರಿ ಜಿಲ್ಲಾ ಪಂಚಾಯ್ತಿ ಸದಸ್ಯ ಎ. ಅನಿಲ್‌ಕುಮಾರ್ ಸಭೆಯ ಗಮನ ಸೆಳೆದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕಾರಿಗಳ ಪ್ರಮಾಣಿಕತೆ ಅತ್ಯಗತ್ಯ. ಜೆಸಿಬಿ ಯಂತ್ರಗಳ ಮೂಲಕ ಕೆಲಸ ಮಾಡುವುದು ಕಂಡು ಬಂದರೆ ಪಿಡಿಒಗಳು ಮೇಲಾಧಿಕಾರಿ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ವ್ಯವಸ್ಥಾಪಕ ನಾಗಪ್ಪ ತರಾಟೆಗೆ: ಸೋಮವಾರ ಇಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಿಂದ ಹಿಡಿದು ಸದಸ್ಯರಾದ ಜೆ.ಪಿ. ಜಯಪಾಲಯ್ಯ, ಜಯಮ್ಮ, ಎ. ಅನಿಲ್‌ಕುಮಾರ್, ತಾ.ಪಂ. ಅಧ್ಯಕ್ಷೆ ಎಸ್. ಹೇಮಲತಾ, ಉಪಾಧ್ಯಕ್ಷ ಜೆ. ತಿಪ್ಪೇಶ್‌ಕುಮಾರ್ ಕಚೇರಿ ವ್ಯವಸ್ಥಾಪಕ ನಾಗಪ್ಪ ಅವರನ್ನು ತರಾಟೆಗೆ ತೆಗದುಕೊಂಡ ಪ್ರಸಂಗ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.