ADVERTISEMENT

ಅಧಿಕಾರಿಗಳ ಕಾರ್ಯ ವೈಖರಿಗೆ ಸಚಿವರ ಬೇಸರ

ಕೃಷಿ ಸಚಿವ ಕೃಷ್ಣ ಭೈರೇಗೌಡ ಜಿಲ್ಲಾ ಪ್ರವಾಸ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 6:06 IST
Last Updated 13 ಸೆಪ್ಟೆಂಬರ್ 2013, 6:06 IST

ಚಿತ್ರದುರ್ಗ: ಸರ್ಕಾರದ ಯೋಜನೆಗಳು ರೈತರಿಗೆ ಸಮರ್ಪಕವಾಗಿ ತಲುಪಿಸದಿದ್ದಕ್ಕೆ ಅಸಮಾಧಾನ, ಅನುವುಗಾರರಿಗೆ ಸಂಬಳ ಬಾಕಿ ಕುರಿತು ಆಕ್ರೋಶ, ಅಧಿಕಾರಿಗಳಿಗೆ ಸ್ಥಳದಲ್ಲೇ ತರಾಟೆ, ತಕ್ಷಣ ಕ್ರಮಕ್ಕೆ ಸೂಚನೆ...

ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಗುರುವಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ ತಾಲ್ಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿದಾಗ  ಬೆಳೆ ವೀಕ್ಷಣೆ, ರೈತರ ಭೇಟಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದಾಗ ಕಂಡು ಬಂದ ದೃಶ್ಯಗಳಿವು.

ಹೊಸದುರ್ಗ ತಾಲ್ಲೂಕಿನ ದೇವಿಗೆರೆ ಸಮೀಪದ ರಸ್ತೆ ಬದಿಯಿದ್ದ ಚಂದ್ರಣ್ಣ ಎಂಬುವರ ಜಮೀನಿಗೆ ಸಚಿವರು ಮತ್ತು ಅಧಿಕಾರಿಗಳು ಭೇಟಿ ನೀಡಿದರು. ಕೀಟ /ರೋಗ ಬಾಧಿತ ಮುಸುಕಿನ ಜೋಳಗಳು ಹಾಗೂ ಬೆಳೆ ಕಟಾವಿನ ಬಗ್ಗೆ ಚರ್ಚಿಸುತ್ತಾ ರೈತರು, ಅಧಿಕಾರಿಗಳೊಂದಿಗೆ ಮಾತಿಗಿಳಿದರು. ‘ಬೆಳೆಗೆ ರೋಗ ಬಾಧೆ ತಗುಲಿದೆ. ಪಕ್ಕದ ಜಮೀನಿನಲ್ಲಿ ಸಮರ್ಪಕವಾಗಿ ಬೆಳೆ ಬಂದಿಲ್ಲ.

ಅಧಿಕಾರಿಗಳು ಈ ಹಳ್ಳಿಗೆ ಭೇಟಿ ನೀಡಿಲ್ಲ ಎನ್ನುತ್ತಿದ್ದಾರೆ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿಗಳು ಸಿಬ್ಬಂದಿ ಕೊರತೆಯಿಂದ ನಿರಂತರ ಭೇಟಿ ತಪ್ಪುತ್ತಿದೆ ಎಂದು ಸಬೂಬು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಮ್ಮ ಜಿಲ್ಲೆಯಲ್ಲಿ ಸಾಕಷ್ಟು ಅನುವುಗಾರರಿದ್ದಾರೆ. ಅವರನ್ನು ಬಳಸಿಕೊಳ್ಳುವುದರಲ್ಲಿ ನೀವು ಸೋತಿದ್ದೀರಿ’ ಎಂದರು.

ರಾಗಿ ಬೆಳೆಯಿರಿ, ಖರೀದಿಸುತ್ತೇವೆ: ಕುಂಬಾರಗಟ್ಟೆ ರಸ್ತೆಯ ರಾಗಿ ಬೆಳೆ ಜಮೀನಿಗೆ ಭೇಟಿ ನೀಡಿದ ಸಚಿವರು, ’ನಮ್ಮ ಸರ್ಕಾರ ರಾಗಿ, ಜೋಳವನ್ನು ಪಡಿತರದಲ್ಲಿ ಸೇರಿಸಿದೆ. ಮುಂದೆ ರಾಗಿಗೆ ಉತ್ತಮ ಬೆಲೆ ಲಭ್ಯವಾಗುತ್ತದೆ. ಹಿಂದೆ ಕ್ವಿಂಟಲ್‌ ರಾಗಿಗೆ ಸರ್ಕಾರ ರೂ. 1500 ಬೆಲೆ ನಿಗದಿಪಡಿಸಿತ್ತು. ಈ ವರ್ಷ ರೂ 1800 ನಿಗದಿಪಡಿಸಿದೆ. ಎಲ್ಲರೂ ಹೆಚ್ಚು ರಾಗಿ ಬೆಳೆಯಬೇಕೆಂದು’ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈತರು, ’ಸರ್ಕಾರ ನಿಗದಿಪಡಿಸುವ ಬೆಲೆಗೆ ಕೂಲಿ ಹುಟ್ಟುವುದಿಲ್ಲ. ಕ್ವಿಂಟಲ್‌ ಕನಿಷ್ಠ ರೂ 2000ಕ್ಕಿಂತ ಹೆಚ್ಚು ಬೆಲೆ ಸಿಕ್ಕರೆ ಏನಾದರೂ ಬೆಳೆಯಬಹುದು. ಸರ್ಕಾರ ನಿಗದಿಪಡಿಸುವ ಬೆಲೆಯನ್ನು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು. ರೈತರ ಒತ್ತಾಯವನ್ನು ಪರಿಶೀಲಿಸುವುದಾಗಿ ಸಚಿವರು ತಿಳಿಸಿದರು.

ಸಿರಿಧಾನ್ಯ ಮಾರುಕಟ್ಟೆಗೆ ಭರವಸೆ: ಕಂಗುವಳ್ಳಿಯ ರಸ್ತೆಯಲ್ಲಿ ಸಿರಿಧಾನ್ಯ ಸೌವೆ ಹುಲ್ಲನ್ನು ರಸ್ತೆಯ ಮೇಲೆ ಹರಡಿದ್ದನ್ನು ಕಂಡ ಸಚಿವರು, ಸಾವೆಯ ಕಾಳುಗಳನ್ನು ಕೈಯಲ್ಲಿ ಹಿಡಿದು, ‘ಇದು ಯಾವ ಮಿಲೆಟ್‌’ ಎಂದರು. ಪಕ್ಕದಲ್ಲಿದ್ದ ಕೃಷಿ ಇಲಾಖೆ ನಿರ್ದೇಶಕ ಸರ್ವೇಶ್ ಅವರು ‘ಇದು ಸಾವೆ’ ಎಂದರು. ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ’ ಡಯಾಬಿಟಿಸ್, ಬ್ಲಡ್ ಶುಗರ್ ನಂತಹ ಕಾಯಿಲೆಗೆ ಉತ್ತಮ ಆಹಾರ ಇದು. ಈ ಭಾಗದಲ್ಲಿ ನವಣೆ, ಸಾವೆ ಹೆಚ್ಚು ಬೆಳೆಯುತ್ತಾರೆ. ಮಾರುಕಟ್ಟೆ ಸಮಸ್ಯೆ ಇದೆ’ ಎಂದು ಮಾತು ಜೋಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಇತ್ತೀಚೆಗೆ ಆರೋಗ್ಯದ ಸಮಸ್ಯೆ ಹೆಚ್ಚಾದಂತೆ ನಗರದ ನಾಗರಿಕರಲ್ಲಿ ಸಿರಿಧಾನ್ಯಗಳ (ಮಿಲೆಟ್ಸ್‌) ಬಳಕೆ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಹಾಗಾಗಿ ಸರ್ಕಾರ ಇವುಗಳ ಮಾರುಕಟ್ಟೆ ಉತ್ತೇಜನಕ್ಕೆ ಪ್ರಯತ್ನಿಸಬಹುದು.

ರೈತರು ಸ್ವ ಸಹಾಯ ಸಂಘಗಳು ಹಾಗೂ ಒಕ್ಕೂಟಗಳನ್ನು ರಚಿಸಿಕೊಂಡರೆ, ಅವುಗಳ ಮೂಲಕ ಮಾರಾಟಕ್ಕೆ ವ್ಯವಸ್ಥೆ ಮಾಡಬಹುದು’ ಎಂದು ಭರವಸೆ ನೀಡಿದರು. ‘ನಗರದಲ್ಲಿ ಈ ಮಿಲೆಟ್ಸ್‌ಗಳಿಗೆ ಒಂದಕ್ಕೆ ನಾಲ್ಕರಷ್ಟು ಬೆಲೆ ಇಟ್ಟು ಮಾರಾಟ ಮಾಡುತ್ತಿದ್ದಾರೆ. ರೈತರೇ ಮಾರಾಟ ಮಾಡುವಂತಾದರೆ ಉತ್ತಮ. ಈ ಮಿಲೆಟ್‌ಗಳನ್ನು ‘ಸಾವಯವ ಗ್ರಾಮ ಸ್ಥಳ ಯೋಜನೆ’ಗೂ ಒಳಪಡಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಕರಣಾ ಘಟಕಗಳಿಗೂ ಆದ್ಯತೆ ನೀಡಬಹುದು’ ಎಂದು ಸಚಿವರು ಅಭಿಪ್ರಾಯಪಟ್ಟರು. ಈ ವಿಚಾರಕ್ಕೆ ಪೂರಕ ಮಾಹಿತಿ ನೀಡಿದ ಕೃಷಿ ನಿರ್ದೇಶಕ ಸರ್ವೇಶ್ ಅವರು, ‘ಸಾವಯವ ಉತ್ಪನ್ನ ಮಾರಾಟ ಮಳಿಗೆಗಳಲ್ಲಿ ಸಿರಿಧಾನ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳಿಗೆ ಇನ್ನೂ ಹೆಚ್ಚಿನ ಉತ್ತೇಜನ ನೀಡಬಹುದು’ ಎಂದರು.

ಕೃಷಿ ಅಧಿಕಾರಿ ತರಾಟೆಗೆ: ಹೊಸದುರ್ಗ ತಾಲ್ಲೂಕು ಮಾಡದಕೆರೆ ಗ್ರಾಮದ ರೈತಸಂಪರ್ಕ ಕೇಂದ್ರದ ಅನುವುಗಾರರೊಬ್ಬರಿಗೆ ನಾಲ್ಕು ತಿಂಗಳಿಂದ ಸಂಬಳ ನೀಡದ ವಿಚಾರ ಸಚಿವರ ಗಮನಕ್ಕೆ ಬಂತು. ಇದರಿಂದ ಕೆಂಡಾಮಂಡಲವಾದ ಸಚಿವರು, ‘ನಿಮ್ಮ ಜಿಲ್ಲೆಯಲ್ಲಿ 430 ಅನುವುಗಾರರಿದ್ದಾರೆ. ಸರಿಯಾಗಿ ಸಂಬಳ ಕೊಡದಿದ್ದರೆ ಹೇಗೆ ಕೆಲಸ ಮಾಡ್ತಾರೆ ಹೇಳಿ’ ಎಂದು ಜಂಟಿ ಕೃಷಿ ನಿರ್ದೇಶಕರು ಹಾಗೂ ಕೃಷಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ನೀವು ಸಂಬಳ ಕೊಡದಿದ್ದರೆ ಅವರು ಕೆಲಸ ಮಾಡುವುದಿಲ್ಲ. ಇಲ್ಲವೇ, ಬೇರೆಯದಕ್ಕೆ ಕೈ ಹಾಕುತ್ತಾರೆ’ ಎಂದು ಸಚಿವರು ಮಾರ್ಮಿಕವಾಗಿ ನುಡಿದರು.

ಕೃಷಿ ದಾಸ್ತಾನು ಕೊಠಡಿಗೆ ಭೇಟಿ ನೀಡಿದ ಸಚಿವರು, ಬೀಜ, ಗೊಬ್ಬರ, ಕೃಷಿ ಪರಿಕರಗಳ ಬಗ್ಗೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಭಾಗದಲ್ಲಿ ಯಾವ ಕೃಷಿ ಪರಿಕರಗಳಿಗೆ ಹೆಚ್ಚು ಬೇಡಿಕೆ ಇದೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ‘ದಾಳಿಂಬೆ ಹೆಚ್ಚಾಗಿ ಬೆಳೆಯುವುದರಿಂದ ಪವರ್ ಸ್ಪ್ರೇಯರ್ ಹೆಚ್ಚು ಬೇಡಿಕೆ ಇದೆ. ಆದರೆ, ಇಲಾಖೆಯಿಂದ ಪೂರೈಕೆಯಾಗುತ್ತಿಲ್ಲ’ ಎಂದು ಅಧಿಕಾರಿಗಳು ವಿವರಿಸಿದರು. ಈ ಮಾತನ್ನು ಒಪ್ಪದ ಸಚಿವರು, ‘ಸರ್ಕಾರದಿಂದ ಎಷ್ಟೆಲ್ಲ
ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಅವುಗಳನ್ನು ಸರಿಯಾಗಿ ರೈತರಿಗೆ ತಲುಪಿಸುವಲ್ಲಿ ನೀವು ಎಡವುತ್ತಿದ್ದೀರಿ.
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು’ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.

ಕೃಷಿ ಸಚಿವರ ಪ್ರವಾಸದಲ್ಲಿ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಕೃಷಿ ಇಲಾಖೆ ನಿರ್ದೇಶಕ ಸರ್ವೇಶ್‌, ಜಂಟಿ ಕೃಷಿ ನಿರ್ದೇಶಕ ಕೃಷ್ಣಮೂರ್ತಿ, ಕಾಂಗ್ರೆಸ್‌ ಮುಖಂಡರಾದ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಯುವ ಕಾಂಗ್ರೆಸ್‌ನ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.