ADVERTISEMENT

ಅಧಿಕಾರ ವಿಕೇಂದ್ರೀಕರಣದಿಂದ ಸಾಮಾಜಿಕ ನ್ಯಾಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 4:35 IST
Last Updated 18 ಅಕ್ಟೋಬರ್ 2012, 4:35 IST

ಚಿತ್ರದುರ್ಗ: ಅಧಿಕಾರ ವಿಕೇಂದ್ರೀಕರಣದಿಂದ ಗ್ರಾಮ ಪಂಚಾಯ್ತಿಗಳು ಸ್ವಾಯತ್ತ ಸಂಸ್ಥೆಗಳಾಗಿ ಬೆಳೆದು ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆನ್ನುವುದು ಮಹಾತ್ಮಾ ಗಾಂಧೀಜಿ ಅವರ ಪರಿಕಲ್ಪನೆಯಾಗಿತ್ತು ಎಂದು ದಾವಣಗೆರೆ ಆರ್.ಎಲ್. ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಸ್.ಎಚ್. ಪಟೇಲ್ ತಿಳಿಸಿದರು.

ಅವರು ಬುಧವಾರ ನಗರದ ಸ್ನಾತಕೋತ್ತರ ಕೇಂದ್ರದಲ್ಲಿ ವಾರ್ತಾ ಇಲಾಖೆ ಹಾಗೂ ಸರ್ಕಾರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ  ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಪರಿಕಲ್ಪನೆ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾತ್ಮಾ ಗಾಂಧೀಜಿ ಅವರ ಕಂಡಂತಹ ಗ್ರಾಮ ಸ್ವರಾಜ್ ಆಶೋತ್ತರಗಳನ್ನು ಈಡೇರಿಸಲು ಕೇಂದ್ರೀಕೃತವಾಗಿದ್ದ ಅಧಿಕಾರವನ್ನು ಸಂವಿಧಾನದ 73ನೇ ತಿದ್ದುಪಡಿ ಮೂಲಕ ವಿಕೇಂದ್ರೀಕರಣ ಮಾಡಲಾಗಿದೆ. ಇದರಿಂದ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳನ್ನಾಗಿ ವಿಂಗಡಿಸಿ ಅಧಿಕಾರ ವಿಕೇಂದ್ರೀಕರಿಸಲಾಗಿದೆ ಎಂದು ವಿವರಿಸಿದರು.

ಗಾಂಧೀಜಿ ಅವರು ಸಂಕುಚಿತ ಮನೋಭಾವ ಹೊಂದಿರಲಿಲ್ಲ ಮತ್ತು ಅವರ ಹೋರಾಟ  ಬ್ರಿಟಿಷರ ವಿರುದ್ಧವಾಗಿರಲಿಲ್ಲ. ಆದರೆ, ಬ್ರಿಟಿಷ್ ಪ್ರಭುತ್ವ ಮತ್ತು ಆಡಳಿತದ ವಿರುದ್ಧವಾಗಿತ್ತು. ಅವರ ಹೋರಾಟದ ಮಾರ್ಗಗಳಾದ ಸತ್ಯ, ಅಹಿಂಸೆ ಹಾಗೂ ಶಾಂತಿಯು ವಿಶ್ವಕ್ಕೆ ಮಾದರಿಯಾಗಿದೆ. ಗಾಂಧೀಜಿ ಅವರಲ್ಲಿ ಹಠವಾದಿತನವಿತ್ತು. ಅವರ ಹೋರಾಟ ಎಂದರೆ ಉಪವಾಸ ಸತ್ಯಾಗ್ರಹವಾಗಿತ್ತು. ಪ್ರಪಂಚದಲ್ಲಿ ಹೋರಾಟದ ಪ್ರಮುಖ ಎರಡು ಮಾರ್ಗಗಳಿದ್ದು, ಅದರಲ್ಲಿ ಹಿಂಸೆ ಮತ್ತು ಅಹಿಂಸೆ ಮಾರ್ಗವಾಗಿದೆ. ಯುದ್ಧ ಮಾರ್ಗದಿಂದ ಅನೇಕ ಜನರ ಸಾವು ನೋವು, ನಷ್ಟಗಳಾಗುತ್ತವೆ. ಆದರೆ, ಅಹಿಂಸಾ ಮಾರ್ಗದಿಂದ ಬದುಕಬಹುದು ಮತ್ತು ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಶಿಕ್ಷಣವಂತರಾಗಿ ಜಾಗೃತರಾದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳು ವೈಚಾರಿಕತೆ ಮತ್ತು ಸಾಮಾಜಿಕ ನಡತೆಯ ಶಿಕ್ಷಣ ನೀಡಬೇಕಾಗಿದೆ ಎಂದರು.

ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಟಿ.ವಿ. ಸುರೇಶ್‌ಗುಪ್ತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಜಿ. ಶ್ರೀನಿವಾಸ್, ಸಹ ಪ್ರಾಧ್ಯಾಪಕ ಡಾ.ಆರ್. ರಂಗಪ್ಪ, ಸಹಾಯಕ ಪ್ರಾಧ್ಯಾಪಕ ಪ್ರೊ.ಎಲ್. ನಾಗರಾಜ್ ಉಪಸ್ಥಿತರಿದ್ದರು.

ವಾರ್ತಾಧಿಕಾರಿ ಎಸ್. ಮಹೇಶ್ವರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನಾತಕೋತ್ತರ ವಿದ್ಯಾರ್ಥಿನಿ ಎಂ. ಚೇತನ ಸ್ವಾಗತಿಸಿದರು. ಹನುಮಂತಪ್ಪ ನಿರೂಪಿಸಿದರು.

ವಾರ್ತಾ ಇಲಾಖೆಯಿಂದ ಗಾಂಧೀಜಿ ಕುರಿತಂತೆ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.

ಸದಸ್ಯತ್ವ ನೋಂದಣಿ

ಹೊಳಲ್ಕೆರೆ ತಾಲ್ಲೂಕಿನ ಒಂಟಿಕಲ್ಲು ಮಠದಲ್ಲಿ ಬಿಎಸ್‌ಆರ್ ಪಕ್ಷದ ವತಿಯಿಂದ ಈಚೆಗೆ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪಕ್ಷದ ಕಾರ್ಯಕರ್ತರು ಸದಸ್ಯತ್ವ ನೊಂದಾಯಿಸಿಕೊಂಡರು. ಈ ಸಂದರ್ಭದಲ್ಲಿ ಹೊಳಲ್ಕೆರೆ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಾಧರಪ್ಪ, ಉಪಾಧ್ಯಕ್ಷ ಚಂದ್ರಪ್ಪ, ಪಕ್ಷದ ಮುಖಂಡ ಎಚ್. ಶ್ರಿನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.