ನಾಯಕನಹಟ್ಟಿ: ತಾಲ್ಲೂಕಿನಲ್ಲಿ ವಿಜ್ಞಾನ ಸಂಸ್ಥೆಗಳಿಗೆ ಪರಭಾರೆ ಮಾಡಿರುವ ಅಮೃತ್‌ಮಹಲ್ ಕಾವಲ್ ಜಮೀನನ್ನು ಉಳಿಸುವ ಸಲುವಾಗಿ ಜುಲೈ 25 ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಸುವ ಪ್ರತಿಭಟನೆಯಲ್ಲಿ ಎಲ್ಲ ರೈತರು ಪಾಲ್ಗೊಳ್ಳಬೇಕು ಎಂದು ಮುರುಘಾ ರಾಜೇಂದ್ರ ಒಡೆಯರ್ ಕರೆ ನೀಡಿದರು.
ಸಮೀಪದ ನೇರಲಗುಂಟೆಯಲ್ಲಿ ಶುಕ್ರವಾರ ಅಮೃತ್‌ಮಹಲ್ ಕಾವಲ್ ಉಳಿವಿಗಾಗಿ ಜುಲೈ 25 ರಂದು ನಡೆಸುವ ಪ್ರತಿಭಟನೆಯ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಚಳ್ಳಕೆರೆ ತ್ಲ್ಲಾಲೂಕಿನ ದೊಡ್ಡ ಉಳ್ಳಾರ್ತಿ, ಕುದಾಪುರ, ಅಮೃತ್‌ಮಹಲ್ ಕಾವಲು ರೈತರ ಜೀವನಾಡಿಯಾಗಿದೆ. ಈ ಪ್ರದೇಶದಲ್ಲಿ ರೈತರು ಕುರಿ, ದನ ಮೇಯಿಸಲು ಅನುಕೂಲವಾಗುತ್ತಿತ್ತು. ರೈತರ ಅಭಿಪ್ರಾಯ ಪಡೆಯದೇ, ಈ ಜಮೀನನ್ನು ಡಿಆರ್‌ಡಿಒ, ಐಐಎಸ್‌ಸಿ ಸಂಸ್ಥೆಗಳಿಗೆ ಪರಭಾರೆ ಮಾಡಲಾಗಿದೆ. ಆದ್ದರಿಂದ ಈ ಕಾವಲನ್ನು ರೈತರಿಗೆ ಬಿಟ್ಟು ಕೊಡಬೇಕು.
ಈಗಾಗಲೇ ಕಾಂಪೌಡ್ ಅನ್ನು ನಿರ್ಮಿಸಿರುವುದನ್ನು ತೆರವುಗೊಳಿಸಿ ರೈತರಿಗೆ ಬಿಟ್ಟು ಕೊಡಬೇಕು. ಈ ವಿಚಾರವಾಗಿ ಜುಲೈ 25 ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.
ಮುಖಂಡ ಕರಿಯಣ್ಣ ಮಾತನಾಡಿ, ವರವು, ದೊಡ್ಡ ಉಳ್ಳಾರ್ತಿ ಪ್ರದೇಶದ ವ್ಯಾಪ್ತಿಯ ಸುಮಾರು 80 ಹಳ್ಳಿಗಳಿಗೆ ಭೇಟಿ ನೀಡಿ ರೈತರನ್ನು ಜಾಗೃತಿ ಗೊಳಿಸಲಾಗುವುದು. ಪ್ರತಿಭಟನೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಯಣ್ಣ, ಮುಖಂಡರುಗಳಾದ ಶಾಂತಮೂರ್ತಿ, ಮಹಾಲಿಂಗಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.