ADVERTISEMENT

ಅಲ್ಪಸಂಖ್ಯಾತರ ಕೊಡುಗೆ ಅಪಾರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 6:20 IST
Last Updated 14 ಆಗಸ್ಟ್ 2012, 6:20 IST

ಚಿತ್ರದುರ್ಗ: ಬ್ರಿಟಿಷರು ಭಾರತಕ್ಕೆ ಬರುವುದಕ್ಕಿಂತ ಮುಂಚೆ ಎಲ್ಲ ಧರ್ಮಗಳ ನಡುವೆ ಸಾಮರಸ್ಯವಿತ್ತು. ಜಾತಿ, ಸಂಸ್ಕೃತಿ ಹಾಗೂ ಭಾಷೆ ಮತ್ತಿತರ ವಿಷಯಗಳಲ್ಲಿ ಬ್ರಿಟಿಷರು ಜನರನ್ನು ಬೇರ್ಪಡಿಸಿ ಒಡೆದು ಆಳುವ ನೀತಿ ಅನುಸರಿಸಿದರು. ಇದರಿಂದಾಗಿ ಇಂದಿಗೂ ಈ ಸಮಸ್ಯೆ ಹಾಗೆಯೇ ಉಳಿದು, ಕಗ್ಗಂಟಾಗಿದೆ ಎಂದು ಮಾನವ ಹಕ್ಕು ಮಂಡಳಿ ರಾಜ್ಯ ಘಟಕದ ಅಧ್ಯಕ್ಷ ಹಾಸೀಂಪೀರ್ ವಾಲೀಕಾರ್ ವಿಷಾದ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ನಡೆದ ಅಖಿಲ ಕರ್ನಾಟಕ ಟಿಪ್ಪು ಯುವಸೇನೆ ವತಿಯಿಂದ ಹಮ್ಮಿಕೊಂಡಿದ್ದ `ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಲ್ಪಸಂಖ್ಯಾತರ ಪಾತ್ರ~ ಕುರಿತ ವಿಚಾರ ಸಂಕಿರಣ  ಉದ್ಘಾಟಿಸಿ ಅವರು ಮಾತನಾಡಿದರು.
ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿರುವವರು ಹೊರ ದೇಶದವರೇ ಹೊರತು ಭಾರತದಲ್ಲಿರುವ ಮುಸ್ಲಿಮರಲ್ಲ. ಇಂತಹ ದುಷ್ಕೃತ್ಯಕ್ಕೆ ಯಾರೂ ಸಹ ಕೈ ಹಾಕುವುದಿಲ್ಲ. ಏಕೆಂದರೆ, ನಾವು ಸಹ ಈ ದೇಶದ ಪ್ರಜೆಗಳು ಎಂದು ನುಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಅಲ್ಪಸಂಖ್ಯಾತರ ಪಾತ್ರ ಮಹತ್ವದಾಗಿದ್ದು, ದೇಶ ಕಟ್ಟುವ ಕಾಯಕದಲ್ಲಿ ಮುಸ್ಲಿಮರು ಸಹ ಅನೇಕ ಕೊಡುಗೆ ನೀಡಿದ್ದಾರೆ. 1857ರಲ್ಲಿ ಮೊಟ್ಟಮೊದಲು ಟಿಪ್ಪು ಸುಲ್ತಾನ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮೊದಲಿಗ ಎಂದು ಸ್ಮರಿಸಿದರು.

ADVERTISEMENT

125 ವರ್ಷಗಳ ಹಿಂದೆ ಈ ದೇಶದಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ 17 ಮುಸ್ಲಿಮರಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಸ್ವಾತಂತ್ರ್ಯ ನಂತರ ಒಬ್ಬರಿಗೂ ಅವಕಾಶ ದೊರೆತಿಲ್ಲ. ಕಾರಣ ಅಲ್ಪಸಂಖ್ಯಾತರಲ್ಲಿರುವ ಸಂಘಟನಾ ಕೊರತೆ ಹಾಗೂ ಸರಿಯಾದ ವಿದ್ಯಾಭ್ಯಾಸ ಕೊಡಿಸಲು ಆರ್ಥಿಕ ಪರಿಸ್ಥಿತಿಯ ಕೊರತೆಯಿಂದ ಯಥಾಸ್ಥಿತಿ ಮುಂದುವರಿದು ಶೈಕ್ಷಣಿಕವಾಗಿ ಬದಲಾವಣೆಯಾಗಲು ಸಾಧ್ಯವಾಗದೆ ಸಂಪೂರ್ಣ ಹಿಂದುಳಿದಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರೇನಹಳ್ಳಿ ಅರುಣಕುಮಾರ್ ಪ್ರಾಸ್ತವಿಕ ಮಾತನಾಡಿದರು.
ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಜೆ. ಯಾದವರೆಡ್ಡಿ, ಜಾಫರ್ ಸಾಬ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಕೆ. ರಹಮತ್ ಉಲ್ಲಾ, ಸಾಹಿತಿ ಬಿ. ಷರೀಫಾ ಹಾಜರಿದ್ದರು.
ಅಖಿಲ ಕರ್ನಾಟಕ ಟಿಪ್ಪು ಯುವಸೇನೆ ಅಧ್ಯಕ್ಷ ಎಂ. ಹನೀಫ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.