ADVERTISEMENT

ಅವಳಿ ಜಿಲ್ಲೆಯಲ್ಲಿ 44 ಸಾವಿರ ಮನೆ ಪೂರ್ಣ

ವಸತಿ ಸಚಿವ ಅಂಬರೀಷ್ ವಿವರಣೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 6:32 IST
Last Updated 8 ಜನವರಿ 2014, 6:32 IST

ಬೆಳಗಾವಿ: ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ೧,೧೦,೯೦೭ ಮನೆಗಳು ಮಂಜೂರಾಗಿದ್ದು, ಇದರಲ್ಲಿ ೪೪,೯೮೬ ಮನೆಗಳು ಪೂರ್ಣಗೊಂಡಿವೆ. ೩೯,೬೧೯ ಮನೆಗಳ ಕಾಮಗಾರಿ ಪ್ರಗತಿಯಲ್ಲಿವೆ ಎಂದು ವಸತಿ ಸಚಿವ ಅಂಬರೀಷ್ ತಿಳಿಸಿದ್ದಾರೆ.

ಬೆಳಗಾವಿಯ ಅಧಿವೇಶನದ ಮೇಲ್ಮನೆಯ ಕಲಾಪದಲ್ಲಿ ಸದಸ್ಯ ರಘು ಆಚಾರ್ ಅವರು, ‘ಕಳೆದ ಮೂರು ವರ್ಷದಲ್ಲಿ ವಿವಿಧ ಆಶ್ರಯ ಯೋಜನೆಗಳಡಿ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಮಂಜೂರಾಗಿರುವ ಮನೆಗಳ ಸಂಖ್ಯೆ ಹಾಗೂ ಮಂಜೂರಾಗಿ ಕಾಮಗಾರಿ ಆರಂಭವಾಗದ ಮನೆಗಳ ಸಂಖ್ಯೆ ವಿವರ ನೀಡಿ’ ಎಂದು ಕೇಳಿದ ಪ್ರಶ್ನೆಗೆ ಅಂಬರೀಷ್‌ ಉತ್ತರಿಸಿದರು.

ಚಿತ್ರದುರ್ಗ ಜಿಲ್ಲೆಗೆ 3೮,೮೦೫ ಮನೆಗಳು ಮಂಜೂರಾಗಿದ್ದು, ೧೭,೨೧೫ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಉಳಿದ ೧೪,೮೫೩ ಮನೆಗಳು ನಿರ್ಮಾಣದ ಹಂತದಲ್ಲಿವೆ. ದಾವಣಗೆರೆಯಲ್ಲಿ ೭೨,೧೦೨ ಮನೆಗಳಲ್ಲಿ ೨೭,೭೭೧ ಮನೆಗಳು ನಿರ್ಮಾಣವಾಗಿದ್ದು, ಉಳಿದ ೩೯,೬೧೩ ಮನೆಗಳು ನಿರ್ಮಾಣದ ಹಂತದಲ್ಲಿವೆ ಎಂದು ಅಂಬರೀಷ್ ತಿಳಿಸಿದರು.

ರಾಜ್ಯ ಸರ್ಕಾರದಿಂದ ಅನುಷ್ಠಾನಗೊಂಡಿರುವ ವಿವಿಧ ರೀತಿಯ ವಸತಿ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೇ ಮನೆ ನಿರ್ಮಾಣಕ್ಕೆ ಆದ್ಯತೆ  ನೀಡಲಾಗಿದೆ. ನಿಗಮದಿಂದ ಅನುಮೋದನೆ ಪಡೆದ ನಂತರ ಫಲಾನುಭವಿಯು ೯೦ ದಿವಸದೊಳಗಾಗಿ ಮನೆಯ ತಳಪಾಯ ಹಂತದವರೆಗೆ ನಿರ್ಮಿಸಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ವರದಿ ನೀಡಬೇಕು. ಅನುಮೋದನೆಗೊಂಡ ೯೦ ದಿನದೊಳಗಾಗಿ ಪ್ರಾರಂಭಿಸದಿದ್ದಲ್ಲಿ ಅಂತಹ ಮನೆಗಳನ್ನು ಬ್ಲಾಕ್ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ವಿವಿಧ ವಸತಿ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ ೧,೦೧೬ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ೨,೦೩೮ ಮನೆಗಳ ನಿರ್ಮಾಣ ಕಾರ್ಯವನ್ನು ಫಲಾನುಭವಿಗಳು ಪ್ರಾರಂಭಿಸಬೇಕಾಗಿರುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ೫,೭೨೧ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ೧೭,೫೨೭ ಮನೆಗಳು ಬ್ಲಾಕ್ ಆಗಿರುತ್ತದೆ. ಈ ಫಲಾನುಭವಿಗಳು ವೈಯಕ್ತಿಕ ಕಾರಣಗಳಿಂದ ಮನೆ ನಿರ್ಮಾಣಕ್ಕೆ ಸಾಕಷ್ಟು ಕಾಲಾವಕಾಶ ನೀಡಿದ ನಂತರವೂ ಪ್ರಾರಂಭಿಸಿರುವುದಿಲ್ಲ ಎಂದು ಸಚಿವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.