ADVERTISEMENT

ಅಶ್ಲೀಲ ಸಂದೇಶ: ಪ್ರಾಚಾರ್ಯ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 5:09 IST
Last Updated 6 ಜುಲೈ 2013, 5:09 IST

ಚಿತ್ರದುರ್ಗ: ವಿದ್ಯಾರ್ಥಿನಿಯೊಬ್ಬರಿಗೆ ಅಶ್ಲೀಲ ಎಸ್‌ಎಂಎಸ್ ಕಳುಹಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದರೆನ್ನಲಾದ ಪ್ರಾಚಾರ್ಯರೊಬ್ಬರಿಗೆ ವಿದ್ಯಾರ್ಥಿ ನಿಯ ಪೋಷಕರು ಹಿಗ್ಗಾಮುಗ್ಗ ಥಳಿಸಿದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.

ನಗರದ ಐಡಿಯಲ್ - ಡಿಇಡಿ ಕಾಲೇಜಿನ ಪ್ರಾಚಾರ್ಯ ವೆಂಕಟೇಶ್ ಹಲ್ಲೆಗೊಳಗಾದವರು. ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ: ಪ್ರಾಚಾರ್ಯ ವೆಂಕಟೇಶ್, ಡಿ.ಇಡಿ ವಿದ್ಯಾರ್ಥಿನಿ ಸ್ವಾತಿ ಅವರಿಗೆ ಅಶ್ಲೀಲ ಎಸ್‌ಎಂಎಸ್ ಕಳುಹಿಸಿದ್ದರು. ಇದರಿಂದ ರೋಸಿ ಹೋದ ವಿದ್ಯಾರ್ಥಿನಿ  ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಸಿಟ್ಟಿಗೆದ್ದ ಸಹೋದರ ಸಂತೋಷ್, ತಂದೆ ಪಾಂಡು, ಬಳೆ ಮಂಜ ಸೇರಿದಂತೆ ಏಳು ಜನರ ಗುಂಪು ಕಾಲೇಜಿಗೆ ನುಗ್ಗಿ ಪ್ರಾಚಾರ್ಯರ ಮೇಲೆ ಹಲ್ಲೆ ನಡೆಸಿದೆ.

ಘಟನೆ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ  ಪ್ರಾಚಾರ್ಯ ವೆಂಕಟೇಶ್, `ನಾನು ಆಕೆಗೆ ಅಶ್ಲೀಲ ಎಸ್‌ಎಂಎಸ್‌ಗಳನ್ನು ಕಳುಹಿಸಿಲ್ಲ. ಶುಕ್ರವಾರ ಕಾಲೇಜಿನಲ್ಲಿ ಡಿಇಡಿ ಪರೀಕ್ಷೆ ನಡೆಯುತ್ತಿತ್ತು. ನಾನು ಪರೀಕ್ಷಾ ಕಾರ್ಯದಲ್ಲಿ ನಿರತರಾಗಿದ್ದೆ. ಏಳು ಜನರ ಗುಂಪೊಂದು ಕೊಠಡಿಗೆ ನುಗ್ಗಿ ನನ್ನ ಮೇಲೆ ಹಲ್ಲೆ ನಡೆಸಿತು' ಎಂದು ತಿಳಿಸಿದ್ದಾರೆ.

`ವಿದ್ಯಾರ್ಥಿನಿ ಒಂದು ವರ್ಷದ ಹಿಂದೆ ಕಾಲೇಜಿಗೆ ಬಂದು ಶುಲ್ಕ ಪಾವತಿಸಿ ಅಂಕಪಟ್ಟಿ ಸೇರಿದಂತೆ ವಿವಿಧ ದಾಖಲೆಗಳನ್ನು ಕೊಂಡೊಯ್ದ ನಂತರ, ಆಕೆಯನ್ನು ನೋಡಿಲ್ಲ' ಎಂದು ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರ ವಿರುದ್ಧ ಅವರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರತಿ ದೂರು ದಾಖಲು: ಘಟನೆ ನಂತರ ವಿದ್ಯಾರ್ಥಿನಿ ಸ್ವಾತಿ, ಪೋಷಕರೊಂದಿಗೆ ನಗರಠಾಣೆ ಬಂದು ದೂರು ದಾಖಲಿಸಿದ್ದಾರೆ.
`ಪ್ರಾಚಾರ್ಯ ವೆಂಕಟೇಶ್ ನನಗೆ ಅಶ್ಲೀಲ ಎಸ್‌ಎಂಎಸ್‌ಗಳನ್ನು ಕಳುಹಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು' ದೂರಿನಲ್ಲಿ ಒತ್ತಾಯಿಸಿದ್ದಾರೆ.

ನಡತೆ ಸರಿಯಿಲ್ಲ: ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾತಿ, `ಪ್ರಾಚಾರ್ಯರ ನಡತೆ ಸರಿಯಲ್ಲ. ಬೇರೆ ಹೆಣ್ಣುಮಕ್ಕಳೊಂದಿಗೆ ಇದೇ ರೀತಿ ನಡೆದುಕೊಂಡಿದ್ದಾರೆ. ನನ್ನ ಮೊಬೈಲ್‌ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಪತ್ನಿ ಹಾಗೂ ಬೇರೆಯವರ ಮೊಬೈಲ್‌ಗಳನ್ನು ಬಳಸಿದ್ದಾರೆ. ಆ ಮೊಬೈಲ್ ಸಂಖ್ಯೆಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದೇನೆ. ನನ್ನಂತೆ ಬೇರೆಯವರಿಗೆ ತೊಂದರೆ ಯಾಗಬಾರದು ಎಂಬ ಉದ್ದೇಶದಿಂದ ಹೀಗೆ ಮಾಡಿದ್ದೇನೆ ' ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.