ADVERTISEMENT

ಅಸಮರ್ಪಕ ವಿದ್ಯುತ್ ಪೂರೈಕೆ: ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 5:15 IST
Last Updated 19 ಜುಲೈ 2012, 5:15 IST

ಚಿತ್ರದುರ್ಗ: ಗ್ರಾಮೀಣ ಪ್ರದೇಶಗಳಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ನಗರದ ಬೆಸ್ಕಾಂ ವಿಭಾಗೀಯ ಕಚೇರಿ ಆವರಣದಲ್ಲಿ ಬುಧವಾರ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ಸಂಬಂಧಿಸಿದ ಕುಂದು ಕೊರತೆಗಳ ಸಂವಾದ ಕಾರ್ಯಕ್ರಮದಲ್ಲಿ ರೈತರು ವಿದ್ಯುತ್ ತೊಂದರೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಅಹವಾಲುಗಳನ್ನು ಸಲ್ಲಿಸಿದರು.

ಸಭೆಯಲ್ಲಿ ರೈತ ಸಂಘದ ಜಿಲ್ಲಾ ಕೋಶಾಧ್ಯಕ್ಷ ಸಿ.ಆರ್. ತಿಮ್ಮಣ್ಣ, ಸಮರ್ಪಕ ವಿದ್ಯುತ್ ವಿತರಣೆಯಲ್ಲಿ ಸರ್ಕಾರ ಹಾಗೂ ಇಲಾಖೆ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಬರವಿದ್ದರೂ ಸಹ ರೈತರ ನೆರವಿಗೆ ಧಾವಿಸುತ್ತಿಲ್ಲ. ತಿಂಗಳ ಮೊದಲರ್ಧ 15ದಿನ ಬೆಳಿಗ್ಗೆ ಸಮಯದಲ್ಲಿ 9ಗಂಟೆ ಪೂರೈಕೆ ಮತ್ತು ನಂತರದ 15ದಿನ ಕೇವಲ 5ಗಂಟೆ ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿದ್ದು, ಪಂಪ್‌ಸೆಟ್ ನಂಬಿ ಬೇಸಾಯ ಮಾಡುವವರಿಗೆ ತೊಂದರೆಯಾಗಿದೆ ಎಂದು ದೂರಿದರು.    

ಈಗ ಬೆಳಿಗ್ಗೆ 4ಗಂಟೆಗೆ ನೀಡುತ್ತಿರುವ ವಿದ್ಯುತ್‌ನ್ನು ಬರಗಾಲದ ಪ್ರಯುಕ್ತ ಬೆಳಿಗ್ಗೆ 6ರಿಂದಲೇ ನೀಡಬೇಕು. ದಿನದ 12ಗಂಟೆ ವಿದ್ಯುತ್ ಪೂರೈಸಬೇಕು ಎಂದು ಸಂವಾದದಲ್ಲಿ ರೈತರು ಕೇಳಿಕೊಂಡಾಗ ಸರ್ಕಾರದ ಆದೇಶದಂತೆ ವಿದ್ಯುತ್ ನೀಡುವ ಪದ್ಧತಿಯನ್ನು ಇಲಾಖೆ ಪಾಲಿಸುತ್ತಾ ಬಂದಿದೆ ಎಂದು ಅಧಿಕಾರಿ ಉತ್ತರಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಸುಟ್ಟ ವಿದ್ಯುತ್ ಪರಿವರ್ತಕಗಳನ್ನು 64 ಗಂಟೆಯೊಳಗೆ ಬದಲು ಮಾಡಿಕೊಡಲು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಣಿವಣ್ಣನ್ ಕ್ರೀಡಾಭವನದಲ್ಲಿ ನಡೆದ ಹಿಂದಿನ ಸಂವಾದ ಕಾರ್ಯಕ್ರಮದಲ್ಲಿ ಆದೇಶ ನೀಡಿದ್ದರು. ಆದರೆ, ಹಲವಾರು ಸ್ಥಳಗಳಲ್ಲಿ 10-15 ದಿನಗಳು ಕಳೆದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಸುಟ್ಟಿರುವ ಎಲ್ಲ ವಿದ್ಯುತ್ ಪರಿವರ್ತಕಗಳನ್ನು ಈಗಾಗಲೇ ಬದಲಾಯಿಸಲಾಗಿದೆ. ಯಾವುದೇ ಬಾಕಿ ಉಳಿದಿಲ್ಲ ಎಂದು ಬೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರಮೂರ್ತಿ ತಿಳಿಸಿದರು. 

ಗ್ರಾಮೀಣ ಪ್ರದೇಶಗಳಲ್ಲಿ ಹಳೆಯ ವಿದ್ಯುತ್ ಪರಿವರ್ತಕಗಳಿದ್ದು, ಓವರ್ ಲೋಡಿಂಗ್‌ನಿಂದ ಸುಟ್ಟು ಹೋಗುವ ಸಾಧ್ಯತೆ ಇದೆ. ಆದ್ದರಿಂದ ಅವುಗಳನ್ನು ತಕ್ಷಣ ಬದಲು ಮಾಡಲು ವಿದ್ಯುತ್ ಪರಿವರ್ತಕಗಳ ಕ್ರೋಢೀಕರಣ ಮೊಬೈಲ್ ಬ್ಯಾಂಕ್ ಸ್ಥಾಪಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತರು ಕೋರಿದರು.

ಸರ್ಕಾರ ನೀಡುವ ಅನುದಾನದ ಆಧಾರದ ಮೇಲೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಂಕರಮೂರ್ತಿ ಭರವಸೆ ನೀಡಿದರು.ರೈತರ ಸಮಸ್ಯೆಗಳನ್ನು ಈಡೇರಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸರ್ಕಾರ ಆದೇಶ ನೀಡಬೇಕು. ಒಂದು ವೇಳೆ ನಮ್ಮ ಬೇಡಿಕೆಗಳನ್ನು ಪೂರೈಸದೆ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ರೈತಸಂಘದ ಜಿಲ್ಲಾ ಸಂಚಾಲಕ ಬೆನಕನಹಳ್ಳಿ ಸತೀಶ್, ವಿವಿಧ ಗ್ರಾಮಗಳ ರೈತರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.