ADVERTISEMENT

ಆಡು ಮಲ್ಲೇಶ್ವರ ದರ್ಶನಕ್ಕೆ ಪ್ರತ್ಯೇಕ ಮಾರ್ಗ

ಮೃಗಾಲಯದ ಪ್ರಾಣಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಕ್ರಮ

ಕೆ.ಎಸ್.ಪ್ರಣವಕುಮಾರ್
Published 25 ಮೇ 2018, 8:16 IST
Last Updated 25 ಮೇ 2018, 8:16 IST
ಚಿತ್ರದುರ್ಗದ ಆಡು ಮಲ್ಲೇಶ್ವರ ಕಿರು ಮೃಗಾಲಯದ ಒಳಗೆ ಹಾಗೂ ಹೊರಗೆ ಅಭಿವೃದ್ಧಿ ಕೆಲಸ ನಡೆಯುತ್ತಿರುವುದು
ಚಿತ್ರದುರ್ಗದ ಆಡು ಮಲ್ಲೇಶ್ವರ ಕಿರು ಮೃಗಾಲಯದ ಒಳಗೆ ಹಾಗೂ ಹೊರಗೆ ಅಭಿವೃದ್ಧಿ ಕೆಲಸ ನಡೆಯುತ್ತಿರುವುದು   

ಚಿತ್ರದುರ್ಗ: ‘ಏನ್ರಿ ನಾನೂ ಸ್ಥಳೀಯ, ನನ್ನನ್ನೇ ಒಳಗೆ ಬಿಡಲ್ಲ ಅಂತೀರಾ. ಈ ದೇಗುಲಕ್ಕೂ ನಮಗೂ ಅವಿನಾಭಾವ ನಂಟು ಇದೆ. ದರ್ಶನ ಮಾಡದಿದ್ದರೆ, ಆ ದಿನ ಮನಸ್ಸಿಗೆ ನೆಮ್ಮದಿಯೇ ಇರುವುದಿಲ್ಲ. ದಯವಿಟ್ಟು ನಮ್ಮ ಭಾವನೆ ಅರ್ಥ ಮಾಡಿಕೊಂಡು ಒಳಗೆ ಬಿಡಿ.’

ಐತಿಹಾಸಿಕ ಕೋಟೆನಾಡಿನ ಜೋಗಿಮಟ್ಟಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಆಡುಮಲ್ಲೇಶ್ವರ ಕಿರು ಮೃಗಾಲಯವಿದೆ. ಅದರ ಒಳಭಾಗದಲ್ಲಿ ಆಡುಮಲ್ಲೇಶ್ವರ ಸ್ವಾಮಿಯ ದೇಗುಲವೂ ಇದೆ. ಈ ದೇವರ ಕೆಲ ಭಕ್ತರು ಅರಣ್ಯ ಇಲಾಖೆಯ ಸಿಬ್ಬಂದಿಗೆ ನಿತ್ಯವೂ ಕೇಳುವ ಸಾಮಾನ್ಯ ಪ್ರಶ್ನೆ ಇದು. ಅದಕ್ಕಾಗಿ ದೇಗುಲಕ್ಕೆ ಪ್ರತ್ಯೇಕ ಮಾರ್ಗ ಕಲ್ಪಿಸಲಾಗುತ್ತಿದೆ.

‘ನಾವು ಖಂಡಿತ ಪ್ರಾಣಿ, ಪಕ್ಷಿಗಳನ್ನು ನೋಡಲಿಕ್ಕೆ ಮೃಗಾಲಯಕ್ಕೆ ಬಂದಿಲ್ಲ. ಇಲ್ಲಿನ ದೇಗುಲಕ್ಕೆ ಹೋಗಿ ದರ್ಶನ ಪಡೆದು, ಧ್ಯಾನ ಮಾಡಿದ ನಂತರ ಹೋಗುತ್ತೇವೆ. ಇದಕ್ಕೂ ತಕರಾರು ಮಾಡುವುದು ಸರಿಯೇ’ ಎಂಬುದು ಸ್ಥಳೀಯರ ವಾದ.

ADVERTISEMENT

‘ಪ್ರತಿನಿತ್ಯ ಮುಂಜಾನೆ ಕಿರು ಮೃಗಾಲಯದ ಒಳಭಾಗದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತದೆ. ಅಲ್ಲದೆ, ಪ್ರಾಣಿ ಹಾಗೂ ಪಕ್ಷಿಗಳಿಗೆ ಆಹಾರ ಹಾಕಲು ಸೂಕ್ತ ಸಮಯ. ಇದೇ ವೇಳೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ. ಈ ವಿಷಯವನ್ನು ಎಷ್ಟು ಬಾರಿ ಹೇಳಿದರೂ ಕೆಲವರು ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ದೇವರ ಹೆಸರು ಹೇಳಿಕೊಂಡು ಬೆಳಿಗ್ಗೆ ಹೊತ್ತಿನಲ್ಲೇ ಕೆಲವರು ಒಳಗೆ ಪ್ರವೇಶಿಸುತ್ತಾರೆ. ಇಪ್ಪತ್ತರಿಂದ ಮೂವತ್ತು ಹೆಜ್ಜೆ ಇಡುತ್ತಿದ್ದಂತೆ ಎಡಬದಿಯಲ್ಲೇ ಮೊಸಳೆ ಮನೆ ಇದೆ. ಈ ಮಾರ್ಗವಾಗಿ ಸಂಚರಿಸುತ್ತ ದೇಗುಲದ ಬಳಿಗೆ ಹೋಗುವವರೇ ಹೆಚ್ಚು. ಇದರಿಂದಾಗಿ ಪ್ರಾಣಿ, ಪಕ್ಷಿಗಳು ಗೊಂದಲಕ್ಕೆ ಒಳಗಾಗುತ್ತವೆ. ಸ್ವಚ್ಛತಾ ಕಾರ್ಯಕ್ಕೂ ಅಡೆತಡೆ ಉಂಟಾಗುತ್ತಿದೆ ಎಂಬುದು ಸಿಬ್ಬಂದಿ ದೂರು.

ದರ್ಶನಕ್ಕೆ ಪ್ರತ್ಯೇಕ ಮಾರ್ಗ: ಈ ಕಾರಣದಿಂದಾಗಿ ಮೃಗಾಲಯ ಪ್ರವೇಶಿಸದೇ ದೇಗುಲಕ್ಕೆ ನೇರವಾಗಿ ಹೋಗಲು ಪ್ರತ್ಯೇಕ ಮಾರ್ಗದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಅದಕ್ಕಾಗಿ ಅಡೆತಡೆಯಾಗಿದ್ದ ಕಲ್ಲುಗಳನ್ನು ತೆಗೆಸಲಾಗುತ್ತಿದ್ದು, ನೆಲವನ್ನು ಸಮ ಮಾಡುವ ಕಾರ್ಯ ನಡೆಯುತ್ತಿದೆ. ಈ ಮೂಲಕ ಮೃಗಾಲಯ ದ್ವಾರದ ಪಕ್ಕದಿಂದ ಹೋಗಲು ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.

ನಿಷೇಧ: ಕೆಲವರು ತಾವು ಬರುವುದರ ಜತೆಗೆ ತಮ್ಮ ನಾಯಿಯನ್ನು ಕರೆದುಕೊಂಡು ಮೃಗಾಲಯಕ್ಕೆ ಬರುತ್ತಾರೆ. ಒಂದು ವೇಳೆ ನಾಯಿಗೆ ರೇಬಿಸ್ ರೋಗವಿದ್ದರೆ, ಮೃಗಾಲಯದ ಪ್ರಾಣಿಗಳಿಗೆ ತೊಂದರೆ ಆಗಲಿದೆ. ಅದಕ್ಕಾಗಿ ನಾಯಿಯೊಂದಿಗೆ ಬರುವುದನ್ನು ನಿಷೇಧಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ದಿನಗಳಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿರುವ ಕಾರಣ ಹೊರಭಾಗದಲ್ಲಿ ನಿಲುಗಡೆ ವ್ಯವಸ್ಥೆಗೂ ಆದ್ಯತೆ ನೀಡಿ, ವಿಸ್ತರಿಸಲಾಗುತ್ತಿದೆ. ಕಿರು ಮೃಗಾಲಯದ ಒಳ ಭಾಗದಲ್ಲೂ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

‘ನಿಯಮದ ಪ್ರಕಾರ ಕ್ರಮ’

‘ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ನಿರ್ದೇಶನದ ಪ್ರಕಾರ ಮೃಗಾಲಯ ಹಾಗೂ ದೇಗುಲ ಪ್ರತ್ಯೇಕವಾಗಿರಬೇಕು. ಅದಕ್ಕಾಗಿ ದೇಗುಲಕ್ಕೆ ಪ್ರತ್ಯೇಕ ದ್ವಾರ ಅಥವಾ ಮಾರ್ಗದ ವ್ಯವಸ್ಥೆ ಇರಬೇಕು ಎಂಬ ಸೂಚನೆ ಇದೆ. ಈ ಕಾರಣದಿಂದಾಗಿ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ.ಮಂಜುನಾಥ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.