ADVERTISEMENT

ಆತಂಕ ಸೃಷ್ಟಿಸುತ್ತಿರುವ ಕಪಿಗಳು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 6:12 IST
Last Updated 23 ಅಕ್ಟೋಬರ್ 2017, 6:12 IST
ಚಿತ್ರದುರ್ಗ ನಗರದ ಮನೆಯೊಂದರ ಒಂದನೇ ಮಹಡಿ ಮೇಲೆ ಮಂಗಗಳು ಕಾಣಿಸಿದ್ದು ಹೀಗೆ.
ಚಿತ್ರದುರ್ಗ ನಗರದ ಮನೆಯೊಂದರ ಒಂದನೇ ಮಹಡಿ ಮೇಲೆ ಮಂಗಗಳು ಕಾಣಿಸಿದ್ದು ಹೀಗೆ.   

ಚಿತ್ರದುರ್ಗ: ಮುಂಬಾಗಿಲಿನಿಂದ ಮನೆಯೊಳಗೆ ನುಗ್ಗಿದ  'ವಾನರ ಸೇನೆ' ಮನೆಯಾಕೆಗೆ 'ಗೊರ್' ಎಂದು ಬೆದರಿಕೆ ಹಾಕಿದ್ದಲ್ಲದೇ, ಫ್ರಿಜ್ ಮೇಲಿಟ್ಟಿದ್ದ ಬಾಳೆ ಹಣ್ಣು, ಸೇಬು ಬಾಚಿಕೊಂಡು ಹೊರ ಜಿಗಿದವು. ಇದು ನಗರದಲ್ಲಿ ಮಂಗಗಳು ಮನೆ ಮೇಲೆ ನಡೆಸುತ್ತಿರುವ ದಾಳಿಯ ನಡೆಸುವ ಪರಿ. ಮಂಗಗಳ ಉಪಟಳ ನಿಯಂತ್ರಣಕ್ಕೆ ನಾಗರಿಕರು ಹಲವು ಕಸರತ್ತು ನಡೆಸಿದ್ದಾರೆ.

ಮಕ್ಕಳು ಬೆಳಿಗ್ಗೆ ಶಾಲೆಗೆ ಹೊರಡುವಾಗ ಮಂಗಗಳ ದಾಳಿ ಶುರುವಾಗುತ್ತದೆ. ಜೆಸಿಆರ್ ಬಡಾವಣೆ, ವಿ.ಪಿ.ಬಡಾವಣೆ, ಜೋಗಿಮಟ್ಟಿ ರಸ್ತೆ, ಸ್ಟೇಡಿಯಂ ರಸ್ತೆ, ಬಿ.ಎಲ್.ಗೌಡ ಲೇಔಟ್, ತ್ಯಾಗರಾಜ ಮಾರುಕಟ್ಟೆ, ದೊಡ್ಡಪೇಟೆ, ಕೋಟೆ ಆಸು ಪಾಸಿನ ಬಡಾವಣೆ ಹೀಗೆ ಬಹುತೇಕ ಬಡಾವಣೆಗಳಲ್ಲಿ ಮಂಗಗಳ ಹಾವಳಿ ತೀವ್ರವಾಗಿದೆ.  ಒಂದೇ ಬಾರಿ 10 ರಿಂದ 15 ಮಂಗಗಳು ಒಟ್ಟಾಗಿ ದಾಳಿ ಮಾಡುತ್ತವೆ. ಮನೆಗಳ ಸುತ್ತಾ ಮರಗಳಿದ್ದರೆ, ಮಹಡಿ ಮನೆಗಳಲ್ಲಿರುವವರ ಪರಿಸ್ಥಿತಿಯಂತು ಹೇಳತೀರದು ಎನ್ನುತ್ತಾರೆ ಜೋಗಿಮಟ್ಟಿ ರಸ್ತೆ ನಿವಾಸಿ ಉಮೇಶ್.

ಮಂಗಗಳಿಂದ ದಿಗ್ಬಂಧನ: ಮಧ್ಯಾಹ್ನ 1 ಗಂಟೆ ಸುಮಾರಿಗೆ ನಾಲ್ಕು ಮಂಗಗಳು ಒಂದು ತಂಡ ಮೊದಲ ಅಂತಸ್ತಿನಲ್ಲಿದ್ದ ಮನೆಗೆ ನುಗ್ಗಿ, ಅಡುಗೆ ಮನೆಗೆ ದಾಳಿ ಮಾಡಿವೆ. ಮನೆಯಲ್ಲಿದ್ದವರು ಗಾಬರಿ­ಗೊಂಡು ತಾವಿದ್ದ ಕೋಣೆಯ ಬಾಗಿಲು ಹಾಕಿಕೊಂಡಿದ್ದಾರೆ. ಸುಮಾರು ಒಂದು ಗಂಟೆ ಅವರು ಮಂಗಗಳಿಂದ ದಿಗ್ಭಂಧನಕ್ಕೆ ಒಳಗಾಗಿದ್ದಾರೆ. ಈ ವೇಳೆ ಪಕ್ಕದ ಮನೆಯವರ ನೆರವಿನಿಂದ ಮಂಗಗಳನ್ನು ಓಡಿಸಿ, ಹೊರ ಬಂದಿದ್ದಾರೆ ಎನ್ನುತ್ತಾರೆ ಜೆಸಿಆರ್ ಬಡಾವಣೆಯ ನಿವಾಸಿ ಸುಮಂಗಲ.

ADVERTISEMENT

ಪಟಾಕಿಗೂ ಹೆದರಲ್ಲ: ಮೊದಲ ಅಂತಸ್ತಿನಲ್ಲಿರುವವರು ಮಂಗಗಳನ್ನು ಓಡಿಸಲು ಪಟಾಕಿ ಸಿಡಿಸುತ್ತಾರೆ. 'ಆ ಮಂಗಗಳು ಸಣ್ಣ ಪುಟ್ಟ ಪಟಾಕಿ ಶಬ್ಧಕ್ಕೆ ಹೆದರುವುದಿಲ್ಲ. ದೊಡ್ಡ ಪಟಾಕಿ ಹೊಡೆಯೋದಕ್ಕೆ ನಮಗೆ ಭಯ ಆಗುತ್ತದೆ' ಎನ್ನುತ್ತಾರೆ ಗೃಹಿಣಿ ರಮಾ.

'ಗುಂಪಿನಲ್ಲಿದ್ದರೆ ಮರಿ ಮಂಗಗಳೂ ಗುಟುರು ಹಾಕುತ್ತವೆ. ಅವುಗಳನ್ನು ಬೆದರಿಸಿ, ಓಡಿಸುವುದು ಕಷ್ಟ. ಮರಿಗಳು ಜತೆಯಲ್ಲಿದ್ದರೆ, ಅವು ಇನ್ನೂ ಗರಂ ಆಗಿರುತ್ತವೆ. ಆಗ ಹೆದರಿಸಲು ಪ್ರಯತ್ನಿಸಿದರೆ, ಅವು ದಾಳಿ ಮಾಡಿಬಹುದು' ಎನ್ನುತ್ತಾರೆ ಅವರು

'ಸುತ್ತಲೂ ಹಸಿರಿಲ್ಲದ್ದು..': ಎರಡು ವರ್ಷಗಳ ಸತತ ಬರದಿಂದ ಸುತ್ತಲಿನ ಅರಣ್ಯ ಪ್ರದೇಶ, ಗುಡ್ಡ ಬೆಟ್ಟಗಳು, ಕೋಟೆ, ಚಂದ್ರವಳ್ಳಿಯಲ್ಲಿ ಹಣ್ಣಿನ ಗಿಡಗಳ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಮಂಗಗಳು ನಗರ ಪ್ರವೇಶಿಸುತ್ತಿವೆ ಎಂದು ಪರಿಸರ ಕಾರ್ಯಕರ್ತ ಎಚ್.ಕೆ.ಎಸ್.ಸ್ವಾಮಿ ಅಭಿಪ್ರಾಯ­ಪಡುತ್ತಾರೆ. ಅರಣ್ಯ ಇಲಾಖೆಯವರು ಗುಡ್ಡ - ಬೆಟ್ಟಗಳಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಲು ಆದ್ಯತೆ ನೀಡಬೇಕಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.