ADVERTISEMENT

ಆತ್ಮಹತ್ಯೆ: ದೂರು ದಾಖಲು, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 8:40 IST
Last Updated 19 ಮಾರ್ಚ್ 2012, 8:40 IST

ಹೊಸದುರ್ಗ: ಇಲ್ಲಿನ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಚ್. ಈರಣ್ಣ ಅವರ ಆತ್ಮಹತ್ಯೆ ಪ್ರಕರಣ ಬೇರೊಂದು ತಿರುವು ಪಡೆದುಕೊಂಡಿದ್ದು, ಪುರಸಭೆ ಹಾಲಿ ಅಧ್ಯಕ್ಷ ಹಾಗೂ ಇತರರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪುರಸಭೆ ಹಾಲಿ ಅಧ್ಯಕ್ಷ ಎಚ್.ಬಿ. ಮಂಜುನಾಥ್, ಮಾಜಿ ಉಪಾಧ್ಯಕ್ಷ ಎಸ್.ವಿ. ರಂಗನಾಥ್ ಹಾಗೂ ಗಂಗಾಧರ ಎಂಬುವರು ಮಾನಸಿಕವಾಗಿ  ನೀಡುತ್ತಿದ್ದ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಈರಣ್ಣನ ಪತ್ನಿ , ಶಿವಮ್ಮ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಮರಣೋತ್ತರ ಪರೀಕ್ಷೆ  ನಡೆಸಿದ ನಂತರ ಈರಣ್ಣನವರ ಶವಯಾತ್ರೆ ಪ್ರಮುಖ ಬೀದಿಯಲ್ಲಿ ಸಾಗಿ ಪೊಲೀಸ್ ಠಾಣೆ ಸಮೀಪ ಬಂದಾಗ ಶಾಸಕ ಗೂಳಿಹಟ್ಟಿ ಡಿ. ಶೇಖರ್ ನೇತೃತ್ವದಲ್ಲಿ ಶವವನ್ನು ರಸ್ತೆಯಲ್ಲಿಟ್ಟು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಲಾಯಿತು.
ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಪ್ರತಿಭಟನೆಗೆ ಮುಂದಾದವರಿಗೆ ತಪ್ಪಿತಸ್ಥರ ವಿರುದ್ಧ ಕಾನೂನು  ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದಾಗ ಶಾಸಕ ಶೇಖರ್ ಸ್ಥಳೀಯ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಾರೆ ಎನ್ನುವ ನಂಬಿಕೆ ಇಲ್ಲ. ಆದ್ದರಿಂದ ಬೇರೆ ಅಧಿಕಾರಿಗಳಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ADVERTISEMENT

ಕರ್ತವ್ಯದಲ್ಲಿದ್ದ ಹಿರಿಯೂರು ಸಿಪಿಐ ರೋಷನ್ ಜಮೀರ್ ಹಾಗೂ ಐಮಂಗಲ ಠಾಣೆ ಪಿಎಸ್‌ಐ ತಿಮ್ಮಣ್ಣ ಪ್ರತಿಭಟನಾಕಾರರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿ ಶವಯಾತ್ರೆಯನ್ನು ಮುಂದಕ್ಕೆ ಸಾಗಿಸಿದರು.
ಪಟ್ಟಣದ ಹಿರಿಯೂರು ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಕುಟುಂಬದವರು, ಚುನಾಯಿತ ಪ್ರತಿನಿಧಿಗಳ ಸಮಕ್ಷಮದಲ್ಲಿ ಮೃತರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.