ADVERTISEMENT

ಆಧಾರ್ ನೋಂದಣಿಗೆ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 5:25 IST
Last Updated 17 ಸೆಪ್ಟೆಂಬರ್ 2011, 5:25 IST

ಹಿರಿಯೂರು: ಕೇಂದ್ರದ ಆಧಾರ್   ಯೋಜನೆಗೆ ನೋಂದಣಿ ಮಾಡಿಸಲು ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ನಾಗರಿಕರು ಸಾಲುಗಟ್ಟಿ ನಿಲ್ಲುವುದು ದಿನನಿತ್ಯ ಕಾಣುವ ದೃಶ್ಯವಾಗಿದೆ.

ದಿನಕ್ಕೆ 50ರಿಂದ 70 ಮಂದಿಯನ್ನು ಮಾತ್ರ ನೋಂದಣಿ ಮಾಡುತ್ತಿದ್ದು, ನಗರದ ಜನಸಂಖ್ಯೆ 70 ಸಾವಿರ ದಾಟಿರುವ ಕಾರಣ, ಇದೇ ಪ್ರಮಾಣದಲ್ಲಿ ನೋಂದಣಿ ಕಾರ್ಯ ಮುಂದುವರಿದರೆ ಕನಿಷ್ಠ ಎರಡು ವರ್ಷ ಬೇಕಾಗುತ್ತದೆ. ನೋಂದಣಿ ಅವಧಿ ಒಂದು ವರ್ಷದಲ್ಲಿ ಪೂರ್ಣಗೊಳ್ಳುವ ಕಾರಣ, ಜತೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗುತ್ತದೆ ಎಂಬ ಕಾರಣದಿಂದ ನೂಕುನುಗ್ಗಲು ಹೆಚ್ಚಿದೆ ಎಂಬ ಮಾತು ಕೇಳಿ ಬರುತ್ತಿದೆ.

ನೋಂದಣಿ ಕಾರ್ಯವನ್ನು `ಟೀಮ್ ಲೈಫ್ ಕೇರ್ ಕಂಪೆನಿ ಇಂಡಿಯಾ ವಹಿಸಿಕೊಂಡಿದ್ದು, ಪ್ರತಿದಿನ 60-70 ಅರ್ಜಿ  ಮಾತ್ರ ವಿತರಿಸುತ್ತಾರೆ. ಕೆಲವೊಮ್ಮೆ ನೋಂದಣಿ ಮಾಡಿಸುವವರ ಒತ್ತಡ ಹೆಚ್ಚಿದ್ದರೆ, ಒಂದೇ ದಿನ ಐದಾರು ದಿನಗಳ ಅವಧಿಗೆ ನೋಂದಣಿ ಮಾಡಿಸುವಷ್ಟು ಅರ್ಜಿಗಳನ್ನು ವಿತರಣೆ ಮಾಡಿ, ವಿತರಣಾ ಕೇಂದ್ರದ ಬಾಗಿಲು ಬಂದ್ ಮಾಡಲಾಗುತ್ತದೆ. ಹೀಗಾಗಿ, ಅರ್ಜಿ ಪಡೆಯುವಾಗ ಮತ್ತು ನೋಂದಣಿ ಮಾಡಿಸುವಾಗ ಎರಡೂ ಸಂದರ್ಭದಲ್ಲಿ ಜನ ಸಾಲುಗಟ್ಟಿ ನಿಲ್ಲಬೇಕಾಗಿದೆ.

ಮತದಾರರ ಭಾವಚಿತ್ರ ತಯಾರಿಸಿ ಕೊಡುವಾಗ ಪ್ರತಿ ವಾರ್ಡ್‌ನಲ್ಲಿಯೂ ನಿಯೋಜಿಸಿದ ಏಜೆನ್ಸಿಯವರು ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಮಾಡಿದರೆ ನೂಕುನುಗ್ಗಲು ತಪ್ಪಿಸಬಹುದು.  ಆಧಾರ್ ನೋಂದಣಿ ಕಡ್ಡಾಯವೇ; ಅಲ್ಲವೇ ಎನ್ನುವುದನ್ನು ಸಂಬಂಧಿಸಿದವರು ಸ್ಪಷ್ಟಪಡಿಸಬೇಕು ಎಂಬುದು ನಾಗರಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.