ADVERTISEMENT

ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಕನ್ನಡಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 8:20 IST
Last Updated 1 ಮಾರ್ಚ್ 2012, 8:20 IST
ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಕನ್ನಡಿ
ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಕನ್ನಡಿ   

ಭರಮಸಾಗರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಚಿಕಿತ್ಸೆಗೆಂದು ಬಂದ ರೋಗಿಗಳು ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೆ ತೊಂದರೆ ಅನುಭವಿಸಿದ ಘಟನೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿತ್ತು.

ಆರೋಗ್ಯ ಇಲಾಖೆ ಇಲ್ಲಿನ ಆಸ್ಪತ್ರೆಗೆ ವ್ಯವಸ್ಥಿತ ಕಟ್ಟಡ ನಿರ್ಮಿಸಿ ಅಗತ್ಯ ಸೌಲಭ್ಯ ಕಲ್ಪಿಸಿದೆ. ಆದರೆ, ಸಾರ್ವಜನಿಕರಿಗೆ ತೃಪ್ತಿಕರ ಸೇವೆ ಒದಗಿಸುವಲ್ಲಿ ಮಾತ್ರ ವಿಫಲವಾಗಿದೆ.

ಇದಕ್ಕೆ ಇಲ್ಲಿನ ವೈದ್ಯರ ಕೊರತೆಯೇ ಮುಖ್ಯ ಕಾರಣ ಎನ್ನುತ್ತಾರೆ ಗ್ರಾಮಸ್ಥರು. ನಿತ್ಯ ಸುಮಾರು 150ರಿಂದ 200 ಜನ ಹೊರಗೋಗಿಗಳ ವಿಭಾಗದಲ್ಲಿ ಚಿಕಿತ್ಸೆಗೆಂದು ಬರುತ್ತಾರೆ. ಇಲ್ಲಿರುವುದು ಮಾತ್ರ ಇಬ್ಬರು ವೈದ್ಯರು. ಒಬ್ಬರು ಹಗಲಿನಲ್ಲಿ ಕರ್ತವ್ಯ ನಿರ್ವಹಿಸಿದರೆ, ಇನ್ನೊಬ್ಬರು ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಬೇಕು.

ಬುಧವಾರ ಮಧ್ಯಾಹ್ನ ಒಂದು ಗಂಟೆಯಾದರೂ ಆಸ್ಪತ್ರೆಯಲ್ಲಿ ಒಬ್ಬ ವೈದ್ಯರೂ ಇರಲಿಲ್ಲ. ಹೀಗಾಗಿ ಚಿಕಿತ್ಸೆಗೆಂದು ಬಂದ ರೋಗಿಗಳು ಪರಿತಪಿಸುವಂತಾಯಿತು. ಎಷ್ಟು ಹೊತ್ತು ಕಾದರೂ ವೈದ್ಯರು ಬರದ ಕಾರಣ ಅನೇಕ ಜನರು ಆರೋಗ್ಯ ಇಲಾಖೆಗೆ ಹಿಡಿ ಶಾಪ ಹಾಕುತ್ತಾ ಖಾಸಗಿ ವೈದ್ಯರ ಬಳಿ ಚಿಕಿತ್ಸೆಗೆಂದು ತೆರಳುತ್ತಿದ್ದದ್ದು ಕಂಡು ಬಂದಿತು. ಬೇರೆ ಕಡೆ ತೋರಿಸಲಾಗದ ಬಡ ರೋಗಿಗಳು ಮಾತ್ರ ಅನಿವಾರ್ಯವಾಗಿ ವೈದ್ಯರು ಬರುವುದನ್ನು ನಿರೀಕ್ಷಿಸುತ್ತಾ ಕುಳಿತಿದ್ದರು. ಈ ಬಗ್ಗೆ ಇಲ್ಲಿನ ಸಿಬ್ಬಂದಿಗಳನ್ನು ವಿಚಾರಿಸಿದರೆ ಇರುವ ಇಬ್ಬರು ವೈದ್ಯರೂ ರಜೆ ಪಡೆದಿದ್ದಾರೆ. ಬರಬೇಕಿದ್ದ ಬದಲಿ ವೈದ್ಯರು ಅನಿವಾರ್ಯ ಕಾರಣಗಳಿಂದ ಬಂದಿಲ್ಲ ಎಂದು ತಿಳಿಸುತ್ತಾರೆ.

ಸಾರ್ವಜನಿಕರಿಗೆ ತೊಂದರೆಯಾಗಬಾರದೆನ್ನುವ ಕಾರಣಕ್ಕೆ ಸಣ್ಣ ಪುಟ್ಟ ಕಾಯಿಲೆಗೆ ಶುಶ್ರೂಷಕರೇ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿತು.

ಫಾರ್ಮಸಿಯಲ್ಲಿ ಕೂಡ ಔಷಧಿ ವಿತರಿಸಲು ಸಿಬ್ಬಂದಿ ಇರಲಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ ಇಲ್ಲಿ ಫಾರ್ಮಸಿಗೆ ಸಂಬಂಧಿಸದ ಸಿಬ್ಬಂದಿ ಔಷಧ, ಗುಳಿಗೆ ವಿತರಿಸುತ್ತಾರೆ. ಅವರಲ್ಲಿ ಕೆಲವರಿಗೆ ಸರಿಯಾಗಿ ಇಂಗ್ಲಿಷ್ ಭಾಷೆ ಜ್ಞಾನವಿಲ್ಲ. ತಪ್ಪು ತಿಳುವಳಿಕೆಯಿಂದ ಬೇರೆ ಔಷಧ, ಗುಳಿಗೆ ನೀಡಿದರೆ ರೋಗಿಗಳ ಮೇಲೆ ಅಡ್ಡಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಇಲ್ಲಿನ ಆಡಳಿತಾಧಿಕಾರಿ ಗಮನ ಹರಿಸುವುದು ಸೂಕ್ತ ಎನ್ನುತ್ತಾರೆ ಸಾರ್ವಜನಿಕರು.
 
ಈ ರೀತಿ ದೊಡ್ಡ ಆಸ್ಪತ್ರೆ ನಿರ್ಮಿಸಿ ಅಗತ್ಯ ಸಿಬ್ಬಂದಿ ನೇಮಿಸದಿರುವುದು ಸರಿಯಲ್ಲ. ದೂರದ ಹಳ್ಳಿಗಳಿಂದ ತೊಂದರೆ ಪಟ್ಟು ಇಲ್ಲಿಗೆ ಬರುವ ಬಡರೋಗಿಗಳ ಪಾಡೇನು. ವೈದ್ಯರು ಇರದ ಮೇಲೆ ಆಸ್ಪತ್ರೆ ಬಾಗಿಲು ತೆಗೆದಿರುವುದು ಏಕೆ. ಬಾಗಿಲು ಮುಚ್ಚುವುದು ವಾಸಿ.
 
ನಮ್ಮ ಕರ್ಮ ಎಂದುಕೊಂಡು ಇಲ್ಲಿ ಕಾಯುವುದು ಬಿಟ್ಟು ಹಳ್ಳಿಯಲ್ಲೇ ನಾಟಿ  ಔಷಧಿ ಪಡೆದು ಸುಮ್ಮನಿರುತ್ತೇವೆ ಎನ್ನುತ್ತಾರೆ ನೊಂದ ರೋಗಿಯೊಬ್ಬರು. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಇಲ್ಲಿನ ಅವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.