ಚಿತ್ರದುರ್ಗ: ಐದು ತಿಂಗಳು ಆ ಶಾಲೆಯಲ್ಲಿ ಮಳೆ ನೀರಿನಲ್ಲೇ ಬಿಸಿಯೂಟದ ಅಡಿಗೆ ಮಾಡುತ್ತಾರೆ. ಮಳೆ ನೀರನ್ನೇ ಮಕ್ಕಳು ಕುಡಿಯುತ್ತಾರೆ. ಮಳೆ ನೀರಿನಲ್ಲಿ ಕೈ ತೋಟ ಬೆಳೆಸುತ್ತಾರೆ. ಬಹುತೇಕ ಎಲ್ಲ ಚಟುವಟಿಕೆಗೂ ಮಳೆ ನೀರೇ ಆಧಾರವಾಗಿದೆ...!
ಮಳೆ ನೀರು ಆಶ್ರಯದಲ್ಲಿರುವ ಶಾಲೆ ಇರುವುದು ಹೊಳಲ್ಕೆರೆ ತಾಲ್ಲೂಕು ಇಂಗಳದಹಳ್ಳಿಯಲ್ಲಿ. ಜಿಲ್ಲಾ ಕೇಂದ್ರದಿಂದ 55 ಕಿ.ಮೀ ದೂರದಲ್ಲಿರುವ ಈ ಪ್ರಾಥಮಿಕ ಶಾಲೆಯಲ್ಲಿ ವರ್ಷದ ಐದು ತಿಂಗಳ ಕಾಲ ಕೈತೋಟ, ಬಿಸಿಯೂಟ, ಕುಡಿಯುವುದಕ್ಕಾಗಿ ಮಳೆ ನೀರನ್ನೇ ಬಳಸುತ್ತಾರೆ. ಇದು ಆರೇಳು ವರ್ಷಗಳಿಂದ ನಡೆಯುತ್ತಿರುವ ಮಳೆ ನೀರ ಬಳಕೆಯ ಅಭಿಯಾನ !
ಹೊಳಲ್ಕೆರೆ ತಾಲ್ಲೂಕಿನ ಇಂಗಳದ ಹಳ್ಳಿ ಚಿತ್ರದುರ್ಗ ಜಿಲ್ಲೆಯ ಗಡಿ ಗ್ರಾಮ. ಇಲ್ಲಿ 55 ಮನೆಗಳಿವೆ. 195 ಜನಸಂಖ್ಯೆ ಇದೆ. ಈ ಹಳ್ಳಿಯಲ್ಲಿ ಒಂದು ಪ್ರಾಥಮಿಕ ಶಾಲೆ (1 ರಿಂದ 5)ಇದೆ. ಅದರಲ್ಲಿ 30 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಲ್ಲ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದ ಮಕ್ಕಳು. ಇಬ್ಬರು ಶಿಕ್ಷಕರು ಶಾಲೆಗೆ ಉಸ್ತುವಾರಿ.
ಐದು ತಿಂಗಳು ನೀರಿಗೆ ತತ್ವಾರ: ಈ ಗ್ರಾಮದಲ್ಲಿ ಐದಾರು ತಿಂಗಳು ನೀರಿಗೆ ತೀವ್ರ ಬರ. ದಸರೆ ರಜೆ ಕಳೆಯುತ್ತಲೇ (ನವೆಂಬರ್ ತಿಂಗಳಿನಿಂದ) ನೀರಿಗೆ ತತ್ವಾರ ಶುರು. ಈ ಸಮಸ್ಯೆಯನ್ನು ಅರಿತ ಬೆಂಗಳೂರಿನ ಅರ್ಘ್ಯಂ ಸಂಸ್ಥೆ ಹಾಗೂ ಚಿತ್ರದುರ್ಗದ ಜಿಯೋ ರೈನ್ ವಾಟರ್ ಕ್ಲಬ್ ಅವರು 2007–08ರಲ್ಲಿ 'ಮಾದರಿ ಮಳೆ ನೀರು ಸಂಗ್ರಹ ಶಾಲೆ' ಯೋಜನೆಗೆ ಈ ಪುಟ್ಟ ಗ್ರಾಮದ ಚಿಕ್ಕ ಶಾಲೆಯನ್ನು ಆಯ್ಕೆ ಮಾಡಿಕೊಂಡರು.
ಯೋಜನೆಯ ಆರಂಭದಲ್ಲಿ ಶಾಲೆಯ ಮಕ್ಕಳು, ಶಿಕ್ಷಕರು, ಗ್ರಾಮಸ್ಥರನ್ನು ಚಿತ್ರದುರ್ಗದ ಓಂಕಾರೇಶ್ವರ ಆಶ್ರಮದಲ್ಲಿ ಮಳೆ ನೀರು ಸಂಗ್ರಹ ಅಳವಡಿಸಿರುವ ಮಾದರಿ ತೋರಿಸಲು ಕರೆದೊಯ್ದರು. ಆಶ್ರಮದಲ್ಲಿ ಮಳೆ ನೀರು ಸಂಗ್ರಹ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಳೆ ನೀರು ಬಳಕೆಯಿಂದಾಗುವ ಪರಿಣಾಮದ ಬಗ್ಗೆ ಮಾಹಿತಿ ನೀಡಿದರು. ಮುಂದಿನ ಹಂತದಲ್ಲಿ ಶಾಲೆಯಲ್ಲಿ 8000 ಲೀಟರ್ ನೀರು ಹಿಡಿಯುವ ಮಳೆ ನೀರು ಟ್ಯಾಂಕ್ ನಿರ್ಮಿಸಿದರು. ಶಾಲೆಯ ಚಾವಣಿ ಮೇಲೆ ಸುರಿಯುವ ಮಳೆ ನೀರು ಟ್ಯಾಂಕ್‌ನಲ್ಲಿ ಸಂಗ್ರಹವಾಗುವಂತೆ ಪೈಪ್‌ಗಳ ಜೋಡಣೆ ಮಾಡಿದರು. ‘ಆ ವರ್ಷ ಮೊದಲ ಮಳೆಗೆ ಟ್ಯಾಂಕ್ ಭರ್ತಿಯಾಯಿತು. ಆಗಿನಿಂದಲೇ ಶಾಲೆಯ ಎಲ್ಲ ಚಟುವಟಿಕೆಗಳಿಗೂ ಮಳೆ ನೀರು ಬಳಕೆ ಮಾಡಲು ಆರಂಭಿಸಿದರು’ ಎಂದು ನೆನಪಿಸಿ ಕೊಳ್ಳುತ್ತಾರೆ ಅಂದಿನ ಶಾಲಾ ಮುಖ್ಯ ಶಿಕ್ಷಕ ಕುಮಾರ್.
ಮಳೆ ನೀರಿನಿಂದಲೇ ಕೈತೋಟ: ಇಂಗಳದಹಳ್ಳಿಯ ಶಾಲೆಯಲ್ಲಿ ಮಳೆ ನೀರಿನಿಂದಲೇ ಕೈತೋಟ ನಿರ್ಮಿಸಿ ದ್ದಾರೆ. ಮಕ್ಕಳೇ ನಿರ್ಮಿಸಿರುವ ಕೈ ತೋಟದಲ್ಲಿ ತರಕಾರಿ ಗಿಡಗಳಿವೆ. ಬಾಳೆ, ತೆಂಗಿನ ಮರಗಳಿವೆ. ಇದೆಲ್ಲ ಮಳೆ ನೀರಿನಿಂದಲೇ ಬೆಳೆದ ಗಿಡಗಳು ಎನ್ನುತ್ತಾರೆ ಶಾಲೆಯ ಶಿಕ್ಷಕರು. ಶಾಲೆಯ ಬಗ್ಗೆ ಗ್ರಾಮಸ್ಥರಿಗೆ ಎಲ್ಲಿಲ್ಲದ ಪ್ರೀತಿ. ಶಾಲೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಊರಿಗೇ ಊರೇ ಕೈ ಜೋಡಿಸುತ್ತದೆ. ಹಾಗಾಗಿಯೇ ಶಾಲೆಯ ಕೈತೋಟದಲ್ಲಿದ್ದ ತರಕಾರಿಗಳು ಕಳವಾಗುವುದಿಲ್ಲ. 'ಊರಿನಲ್ಲಿರುವ ಒಗ್ಗಟ್ಟು ಶಾಲೆಯ ಬಗಿಗಿನ ಪ್ರೀತಿಯಿಂದಲೇ ಮಳೆ ನೀರು ಸಂಗ್ರಹ ಹಾಗೂ ಕೈತೋಟ ನಿರ್ಮಾಣ ಮಾಡಲು ಸಾಧ್ಯವಾಯಿತು' ಎನ್ನುತ್ತಾರೆ ಮುಖ್ಯ ಶಿಕ್ಷಕ ಕುಮಾರ್.
ಶುಚಿತ್ವಕ್ಕೆ ಗಡುಸು ನೀರು: ಅಕ್ಕಿ. ತರಕಾರಿ ತೊಳೆಯಲು ಕೊಳವೆ ಬಾವಿ (ಗಡಸು) ನೀರು, ಅವುಗಳನ್ನು ಬೇಯಿಸಲು ಮಳೆ ನೀರು ಬಳಸುತ್ತಾರೆ. ಗಡುಸು ನೀರು ಮತ್ತು ಮಳೆ ನೀರನ್ನು ಮಿಶ್ರ ಮಾಡಿ ಅಡುಗೆ ಮಾಡುತ್ತಾರೆ. ವಿಶೇಷ ಎಂದರೆ ಹಬ್ಬದಲ್ಲಿ (ಯುಗಾದಿ ಹಬ್ಬಕ್ಕೆ) ಹಳ್ಳಿಯಲ್ಲಿ ಹೋಳಿಗೆ ಮಾಡುವವರಿಗೆಲ್ಲ ಶಾಲೆಯ ಸಿಬ್ಬಂದಿ ಒಂದೊಂದು ಬಿಂದಿಗೆ ಮಳೆ ನೀರನ್ನು ಕೊಡುತ್ತಾರೆ' ಎಂದು ನೆನಪಿಸಿ ಕೊಳ್ಳುತ್ತಾರೆ ಜಿಯೋ ರೈನ್ ವಾಟರ್ ಸಂಸ್ಥೆಯ ಮುಖ್ಯಸ್ಥ ಡಾ. ಎನ್. ದೇವರಾಜ ರೆಡ್ಡಿ.
ಶ್ಲಾಘನೀಯ ಕೆಲಸ: ಹದಿನೈದು ವರ್ಷಗಳ ಕಾಲ ಶಾಲೆಯನ್ನು ಆಸ್ಥೆಯಿಂದ ಬೆಳೆಸಿ ಕೊಂಡು ಬಂದಿದ್ದ ಮುಖ್ಯ ಶಿಕ್ಷ ಕುಮಾರ್ ಈಗ ಬಡ್ತಿ ಪಡೆದು ಬೇರೆ ಊರಿಗೆ ವರ್ಗವಾಗಿದ್ದಾರೆ. ಈ ಮಳೆ ನೀರು ಸಂಗ್ರಹದ ಯಶಸ್ಸು ಯಾರಿಗೆ ಸಿಗಬೇಕು ಎಂದರೆ ಗ್ರಾಮಸ್ಥರು, ಕುಮಾರ್ ಅವರ ಹೆಸರು ಹೇಳುತ್ತಾರೆ. ಆದರೆ ಕುಮಾರ್ ಅವರು 'ಅದು ಗ್ರಾಮಸ್ಥರಿಗೆ ಸಲ್ಲಬೇಕು' ಎನ್ನುತ್ತಾರೆ. ಇವರೆಲ್ಲರೂ ಸೇರಿ ಗ್ರಾಮದ ಹಿರಿಯ ವ್ಯಕ್ತಿ ಪಾಪಜ್ಜ ಅವರ ಸಹಕಾರವನ್ನು ಶ್ಲಾಘಿಸುತ್ತಾರೆ.
‘ಆರಂಭದಲ್ಲಿ, ಮಳೆ ನೀರು ಯಾರು ಕುಡಿತಾರೆ? ನಮಗೆ ಹಣ ಕೊಡಿ, ರಂಗಮಂದಿರ ಕಟ್ಟುತ್ತೇವೆ ಅಂತ ಊರಿನವರು ಕೇಳಿದ್ದರು. ಆದರೆ ಅರ್ಘ್ಯಂ ಸಂಸ್ಥೆಯವರು ಕೊಟ್ಟ ₨ 50 ಸಾವಿರ ಹಣ ಹಾಗೂ ನಮ್ಮ ಸಂಸ್ಥೆಯ ತಾಂತ್ರಿಕ ನೆರವು ಸೇರಿಸಿಕೊಂಡು ಸರ್ಕಾರಿ ಶಾಲೆಯಲ್ಲಿ ಮಳೆ ನೀರು ಉಳಿಸುವ ಕೆಲಸ ಮಾಡಿದೆವು. ಅದೊಂದು ತೃಪ್ತಿಯಾದ ಕೆಲಸ. ಅದು ಈಗಲೂ ಮುಂದುವರಿಯುತ್ತಿದೆ ಎಂಬುದೇ ಸಂತೋಷದ ವಿಷಯ' ಎನ್ನುವುದು ರೆಡ್ಡಿ ಅವರ ಅಭಿಪ್ರಾಯ.
ಬೇರೆ ಶಾಲೆಗೆ ಮಾದರಿ!
ಇಂಗಳದ ಹಳ್ಳಿಯ ಶಾಲೆಗೆ ಅಕ್ಕಪಕ್ಕದ ಹಳ್ಳಿಯವರು ಭೇಟಿ ನೀಡಿದ್ದಾರೆ. ಹೊಳಲ್ಕೆರೆಯ ರುದ್ರಪ್ಪ ಎಂಬ ವೈದ್ಯರು ಈ ವಿಧಾನವನ್ನು ತಮ್ಮ ಮನೆಗೆ ಅಳವಡಿಸಿದ್ದಾರೆ. ಹೊಸದುರ್ಗ ಸಮೀಪದ ಹೆಬ್ಬಳ್ಳಿ ಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೂ ಇದು ಮಾದರಿಯಾಗಿದೆ. ಈ ಯೋಜನೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೂರು ಹಾಗೂ ದಾವಣಗೆರೆಯ ಆರು ಸರ್ಕಾರಿ ಶಾಲೆಗಳಲ್ಲಿ ಮಳೆ ನೀರು ಸಂಗ್ರಹ ಮಾದರಿಯನ್ನು ಅಳವಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.