ADVERTISEMENT

ಇಂಗಳದಾಳ್ ಚಿನ್ನದ ಘಟಕ ಮತ್ತೆ ಆರಂಭ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 4:40 IST
Last Updated 3 ಅಕ್ಟೋಬರ್ 2012, 4:40 IST

ಚಿತ್ರದುರ್ಗ: ದಶಕದಿಂದ ಸ್ಥಗಿತವಾಗಿರುವ ತಾಲ್ಲೂಕಿನ ಇಂಗಳದಾಳ್ ಗ್ರಾಮದ ಹಟ್ಟಿ ಚಿನ್ನದ ಗಣಿ ಸಂಸ್ಥೆಯ ಚಿನ್ನದ ಘಟಕಕ್ಕೆ ಪುನಃಶ್ಚೇತನ ನೀಡಿ ಡಿಸೆಂಬರ್ ಒಳಗೆ ಆರಂಭಿಸಲು ನಿರ್ಧರಿಸಲಾಗಿದೆ.

ಮಂಗಳವಾರ ಇಂಗಳದಾಳ್ ಗ್ರಾಮದಲ್ಲಿ ಹಟ್ಟಿ ಚಿನ್ನದ ಗಣಿ ಸಂಸ್ಥೆ ಅಧ್ಯಕ್ಷ ಎಸ್.ವಿ. ರಾಮಚಂದ್ರ ಸ್ದ್ದುದಿಗಾರರಿಗೆ ಈ ವಿಷಯ ತಿಳಿಸಿದರು.

ಈ ಹಿಂದೆ, ಇಂಡಿಯನ್ ಕಾಪರ್ ಕಂಪೆನಿ ಜತೆ ಇಂಗಳದಾಳ್ ಗಣಿ ಆರಂಭಿಸಲು ಉದ್ದೇಶಿಸಲಾಗಿತ್ತು. ಇಲ್ಲಿನ ಸ್ಥಳೀಯ ಆದ್ಯತೆ ಮತ್ತು ಸಂಸ್ಥೆಯ ಸಾಮರ್ಥ್ಯ ಆಧರಿಸಿ ಹಟ್ಟಿ ಚಿನ್ನದ ಸಂಸ್ಥೆಯಿಂದಲೇ ಚಿನ್ನದ ಗಣಿಗಾರಿಕೆ ಆರಂಭಿಸಬೇಕು ಎಂದ ಈಗಾಗಲೇ ಅಗತ್ಯ ಕ್ರಮ ತೆಗೆದುಕೊಂಡು ಅನುಮತಿಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ.
 
ಈ ತಿಂಗಳ ಅಂತ್ಯಕ್ಕೆ ಎಲ್ಲ ಪ್ರಾಧಿಕಾರಗಳಿಂದ ಅನುಮತಿ ಪಡೆದು ಡಿಸೆಂಬರ್‌ನಲ್ಲಿ ಪುನರಾರಂಭ ಮಾಡುವ ಉದ್ದೇಶವಿದೆ. ಇದರಿಂದ ಈ ಭಾಗದಲ್ಲಿ ಸುವರ್ಣ ಯುಗ ಆರಂಭವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಹಟ್ಟಿ ಚಿನ್ನದ ಗಣಿ ಸಂಸ್ಥೆ  ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎ.ಕೆ. ಮೊನ್ನಪ್ಪ ಮಾತನಾಡಿ, 1972ರಲ್ಲಿ ತಾಮ್ರ ಗಣಿಗಾರಿಕೆ ಇಲ್ಲಿ ಆರಂಭಿಸಲಾಗಿತ್ತು.

1994ರವರೆಗೆ 7 ಟನ್ ಉತ್ಪಾದನೆ ಮಾಡಲಾಗಿತ್ತು. 1994ರಲ್ಲಿ ಚಿನ್ನದ ಘಟಕ ಆರಂಭಿಸಲಾಯಿತು. ಆದರೆ, ಆಡಳಿತಾತ್ಮಕ ಹಾಗೂ ಇತರೆ ಸಮಸ್ಯೆಗಳಿಂದ 2002ರಲ್ಲಿ ಈ ಸಂಸ್ಥೆಯ ಕಾರ್ಯ ನಿರ್ವಹಣೆ ಸ್ಥಗಿತಗೊಂಡಿತು.

2002ರವರೆಗೆ 7 ಲಕ್ಷ ಟನ್ ಚಿನ್ನದ ಅದಿರು ತೆಗೆಯಲಾಗಿತ್ತು. ಈ ಘಟಕವನ್ನು ತಮಗೆ ನೀಡಿ ಎಂದು ಹಿಂದೂಸ್ತಾನ್ ಕಾಪರ್ ಕಂಪೆನಿ  ಕೇಳಿಕೊಂಡಿತ್ತು. ಆದರೆ, ನಮ್ಮ ಘಟಕಕ್ಕೆ ನಾವೇ ಪುನಶ್ಚೇತನ ನೀಡಲು ನಿರ್ಧರಿಸಿದ್ದೇವೆ. ಡಿಸೆಂಬರ್ ಒಳಗೆ ಈ ಘಟಕ ಆರಂಭಿಸುವ ಉದ್ದೇಶವಿದೆ ಎಂದು ವಿವರಿಸಿದರು.

ಇಂಗಳದಾಳ್ ಚಿನ್ನದ ಘಟಕದಲ್ಲಿ ಗಣಿಗಾರಿಕೆ ಆರಂಭಿಸುವುದರಿಂದ ಸ್ಥಳೀಯವಾಗಿ ಜನರಿಗೆ ಉಪಯೋಗವಾಗಲಿದೆ ಮತ್ತು ಐಟಿಐ ಡಿಪ್ಲೊಮಾ ಶಿಕ್ಷಣ ಪಡೆದವರಿಗೆ ಉದ್ಯೋಗ ದೊರೆಯಲಿದೆ. ಇಲ್ಲಿರುವ ಯಂತ್ರಗಳನ್ನೇ ಬಳಕೆ ಮಾಡಿಕೊಳ್ಳಲಾಗುವುದು. ಅಗತ್ಯ ಬಿದ್ದರೆ ಸಿಬ್ಬಂದಿಯನ್ನು ಹಟ್ಟಿ ಚಿನ್ನದ ಗಣಿಯಿಂದ ವರ್ಗಾವಣೆ ಕೊಳ್ಳಲಾಗುವುದು ಎಂದರು.

600 ಕೋಟಿ ವಹಿವಾಟು

ಹಿಂದೆ ಬಂಗಾರದ ದರ ಕಡಿಮೆ ಇದ್ದ ಕಾರಣ ಉತ್ಪಾದನೆ ವೆಚ್ಚ ಹೆಚ್ಚಾಗಿ ಗಣಿಗಾರಿಕೆ ಸ್ಥಗಿತಗೊಳಿಸಲಾಗಿತ್ತು. ಶಿರಾ ತಾಲ್ಲೂಕಿನ ಅಜ್ಜನಹಳ್ಳಿಯಲ್ಲಿ ಈಗಾಗಲೇ 2 ಲಕ್ಷ ಟನ್ ಚಿನ್ನದ ಅದಿರು ಸಂಗ್ರಹವಾಗಿದೆ. ಸಂಸ್ಥೆಯ ವಹಿವಾಟು ್ಙ 600 ಕೋಟಿ ಇದ್ದು ಇದರಲ್ಲಿ ಕಾರ್ಮಿಕರ ವೇತನ, ಸಾರಿಗೆ, ತೆರಿಗೆ ಪಾವತಿಸಿ ್ಙ 180 ಕೋಟಿ ನಿವ್ವಳ ಲಾಭ ಗಳಿಸಲಾಗಿದೆ. ಈ ಬಾರಿ ಸಿಬ್ಬಂದಿಗೆ ಶೇ 23ರಷ್ಟು ವೇತನ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಂಗಾರದ ಬೇಡಿಕೆ ಹೆಚ್ಚಾಗಿದ್ದು, ದೇಶಕ್ಕೆ 900 ಟನ್ ಚಿನ್ನದ ಅಗತ್ಯವಿದೆ. ದೇಶದ ಅಗತ್ಯತೆ ಮತ್ತು  ಹೆಚ್ಚಾಗುತ್ತಿರುವ ದರದ ಹಿನ್ನೆಲೆಯಲ್ಲಿ ಚಿನ್ನದ ಗಣಿಗಾರಿಕೆ ಲಾಭದಾಯಕವಾಗಲಿದೆ. ಸ್ಥಳೀಯ ಅಗತ್ಯ ಗಮನದ್ಲ್ಲಲಿರಿಸಿ ಇಂಗಳದಾಳ್ ಘಟಕ ಆರಂಭಿಸಲಾಗುತ್ತಿದೆ. ಗಣಿಗಾರಿಕೆ ಮಾಡಿ ಲಾಭ ಗಳಿಸುವ ಒಂದೇ ಉದ್ದೇಶ ಸಂಸ್ಥೆಗಿಲ್ಲ. ಗಣಿಗಾರಿಕೆಯಿಂದಾಗುವ ಪರಿಸರದ ನಷ್ಟ ಪುನಶ್ಚೇತನಕ್ಕೆ ಹಲವು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಮತ್ತು ಸಾಮಾಜಿಕ ಸೇವೆ ಮಾಡಲಾಗುತ್ತಿದೆ. ಸಂಸ್ಥೆಯಿಂದ ಜಿಲ್ಲಾ ಆಸ್ಪತ್ರೆಗೆ ್ಙ 25 ಲಕ್ಷ  ನೀಡಲಾಗಿದೆ ಎಂದು ತಿಳಿಸಿದರು.

ಹಟ್ಟಿ ಹಾಗೂ ಸುತ್ತಮುತ್ತ ಪ್ರದೇಶದ ಪ್ರಗತಿಗಾಗಿ ಮಾಸ್ಟರ್ ಪ್ಲಾನ್ ತಯಾರಿ ನಡೆಯುತ್ತಿದೆ. ಎ್ಲ್ಲಲಿ ಅದಿರು ತೆಗೆಯಲಾಗುತ್ತದೆ ಅದರ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಹೊಸ ಕಂಪೆನಿಗೆ ಚಾಲನೆ: ಹಟ್ಟಿ ಚಿನ್ನದ ಗಣಿ ಸಂಸ್ಥೆ ವತಿಯಿಂದ `ಹಟ್ಟಿ ಗೋಲ್ಡ್ ವಿದೇಶ್~ ಆರಂಭಿಸಲಾಗುವುದು. ಕರ್ನಾಟಕದ ಹೊರಗೆ ಗಣಿಗಾರಿಕೆ ಕೈಗೊಳ್ಳಲಾಗುವುದು. ಈಗಾಗಲೇ ರ‌್ವಂಡಾಗೆ ತಮ್ಮ ಸಂಸ್ಥೆ ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿದ್ಯುತ್ ಉತ್ಪಾದನೆ: ಹಟ್ಟಿ ಚಿನ್ನದ ಗಣಿ ಸಂಸ್ಥೆ ವತಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ 12 ಪವನ ವಿದ್ಯುತ್ ಯಂತ್ರಗಳನ್ನು ಅಳವಡಿಸಲಾಗಿದ್ದು, 11.4 ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.