ADVERTISEMENT

ಇಂದು ಜಮುರಾ ಕಪ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 8:05 IST
Last Updated 18 ಅಕ್ಟೋಬರ್ 2012, 8:05 IST

ಚಿತ್ರದುರ್ಗ: ಬಸವಕೇಂದ್ರ ಮತ್ತು ಮುರುಘಾಮಠದ ವತಿಯಿಂದ ನಡೆಯಲಿರುವ ಶರಣ ಸಂಸ್ಕೃತಿ ಉತ್ಸವ- 2012ರ ಅಂಗವಾಗಿ ಆಯೋಜಿಸಿರುವ ಪುರುಷರ ಮತ್ತು ಮಹಿಳೆಯರ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಕ್ರೀಡಾಕೂಟ ಗುರುವಾರ ಆರಂಭವಾಗಲಿದೆ. ಅ.18 ರಿಂದ 20ರವರೆಗೆ ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ.

ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಲಿದ್ದಾರೆ. ವಸತಿ ಸಚಿವ ವಿ. ಸೋಮಣ್ಣ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ನವದೆಹಲಿಯ ನೆಹರು ಯುವ ಕೇಂದ್ರದ ನಿರ್ದೇಶಕ ಸಲೀಂ ಅಹಮ್ಮದ್, ಜಿ.ಪಂ. ಮಾಜಿ ಅಧ್ಯಕ್ಷಟಿ. ರವಿಕುಮಾರ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ. ನಾರಾಯಣಸ್ವಾಮಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಗುಜರಾತಿನಲ್ಲಿ ನಡೆದ ಮ್ಯೋರಥಾನ್ ಸ್ಪರ್ಧೆಯಲ್ಲಿ 42 ಕಿ.ಮೀ ಓಡುವುದರ ಮೂಲಕ ಕ್ರೀಡಾಭಿಮಾನಿಗಳಿಗೆ ಸ್ಪೂರ್ತಿದಾಯಕ ಅಂತರಾಷ್ಟ್ರೀಯ ಮ್ಯಾರಥಾನ್ ಕ್ರೀಡಾಪಟು ವೀರಯ್ಯ ಹಿರೇಮಠ್ ಮತ್ತು ಐರ್ಲಾಂಡ್ಯನಲ್ಲಿ 2009ರಲ್ಲಿ ನಡೆದ ಷಟಲ್ ಬ್ಯಾಡ್ಮಿಂಟನ್‌ನ 5ನೇ `ಡ್ರಾಫ್‌ವರ್ಲ್ಡ್ ಗೇಮ್ಸ~ನಲ್ಲಿ ಚಿನ್ನದ ಪದಕ ಗೆದ್ದು ತನ್ನ ಪ್ರತಿಭೆಯನ್ನು ಪರಿಚಯಿಸಿದ ಆರ್. ಚೇತನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಎಸ್‌ಜೆಎಂ ಫಾರ್ಮಸಿ ಮಹಾವಿದ್ಯಾಲಯ ಹಾಗೂ ಎಸ್‌ಜೆಎಂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸೈಕಲ್ ಜಾಥಾ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳಿಂದ ಅ. 18ರಂದು ಬೆಳಿಗ್ಗೆ 9ಕ್ಕೆ ಸೈಕಲ್ ಜಾಥಾ ಏರ್ಪಡಿಸಲಾಗಿದೆ. ಸಿದ್ದಯ್ಯನ ಕೋಟೆ ವಿಜಯಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಸ್ವಾಮೀಜಿ ಜಾಥಾಗೆ ಚಾಲನೆ ನೀಡಲಿದ್ದಾರೆ.  

ಸೈಕಲ್ ಜಾಥಾ ಹೊಳಲ್ಕೆರೆ ರಸ್ತೆಯ ಎಸ್‌ಜೆಎಂ ಕಾಲೇಜು ಕ್ರೀಡಾಂಗಣದಿಂದ ಪ್ರಾರಂಭವಾಗಿ ನಗರದ ರಾಜ ಬೀದಿಗಳಲ್ಲಿ ಸಂಚರಿಸಿ ಮುರಘಾಮಠದಲ್ಲಿ ಕೊನೆಗೊಳ್ಳಲಿದೆ. ಮಹಿಳಾ ಕ್ರೀಡಾಕೂಟ:  ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಅ. 19ರಂದು ಬೆಳಿಗ್ಗೆ 10.30ಕ್ಕೆ ಮಹಿಳಾ ಕ್ರೀಡಾಕೂಟ ಆಯೋಜಿಸಲಾಗಿದೆ.

ಮಡಕೆ ಹೊತ್ತು ಓಡುವುದು, ಪೊಟಾಟೋ ರೇಸ್, ಕುಂಟಿಕೊಂಡು ಓಡುವುದು, ಭಾರತೀಯ ಸಾಂಪ್ರದಾಯಿಕ ಉಡುಗೆ, ಸ್ಯಾಕ್‌ರೇಸ್, ಸಂಗೀತ ಕುರ್ಚಿ, ಶಿಶು ಸ್ಪರ್ಧೆ, ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಮೊಬೈಲ್: 87620 04822, 97387 66484, ಸಂಪರ್ಕಿಸಲು  ಕೋರಲಾಗಿದೆ.
ಪ್ರವಚನ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದಲ್ಲಿ ಅ.18 ಮತ್ತು 19 ಎರಡು ದಿನಗಳ ಕಾಲ ಬಿಜಾಪುರ ಜಿಲ್ಲೆ ತಿಕ್ಕೋಟ ವಿರಕ್ತ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಅವರಿಂದ ವಿಶೇಷ ಪ್ರವಚನ ಮಾಲೆ ನಡೆಯಲಿದೆ.  

ಶರಣಸಂಸ್ಕೃತಿ ಉತ್ಸವಕ್ಕೆ ಪೂರ್ವಭಾವಿಯಾಗಿ ಈ ವರ್ಷವೂ ಹದಿನಾರು ದಿನಗಳ ಕಾಲ ವಿಶೇಷ ಪ್ರವಚನ ಮಾಲೆ ಏರ್ಪಡಿಸಲಾಗಿದ್ದು, ಕನ್ನಡದ ಕಬೀರ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್. ಇಬ್ರಾಹಿಂ ಸುತಾರ ಹಾಗೂ ಧಾರವಾಡದ ವಚನ ಸಂಸ್ಕೃತಿ ಪ್ರತಿಷ್ಠಾನದ ಬಸವಲಿಂಗ ಸ್ವಾಮೀಜಿ ವಿಶೇಷ ಪ್ರವಚನ ಮಾಲೆಯನ್ನು ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.