ADVERTISEMENT

ಇಟ್ಟಿಗೆ ತಯಾರಿಕಾ ಘಟಕಗಳ ಪರಿಶೀಲನೆ

ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 10:28 IST
Last Updated 2 ಆಗಸ್ಟ್ 2013, 10:28 IST

ಮೊಳಕಾಲ್ಮುರು: ತಾಲ್ಲೂಕಿನ ಇಟ್ಟಿಗೆ ತಯಾರಿಕಾ ಘಟಕಗಳ ಪರಿಶೀಲನೆಯನ್ನು ಗುರುವಾರ ತಹಶೀಲ್ದಾರ್ ಲಕ್ಷ್ಮೀನರಸಿಂಹಪ್ಪ ನೇತೃತ್ವದಲ್ಲಿ ನಡೆಸಲಾಯಿತು.

ಈಚೆಗೆ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕವು ಜಿಲ್ಲಾಧಿಕಾರಿಗಳಿಗೆ ತಾಲ್ಲೂಕಿನಲ್ಲಿ ಅಕ್ರಮವಾಗಿ ಇಟ್ಟಿಗೆ ತಯಾರಿಕಾ ಘಟಕಗಳು ನಡೆಯುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ತಾಲ್ಲೂಕಿನಲ್ಲಿ ಒಟ್ಟು 40 ಇಟ್ಟಿಗೆ ತಯಾರಿಕಾ ಘಟಕಗಳು ನಡೆಯುತ್ತಿರುವ ಮಾಹಿತಿ ಲಭ್ಯವಾಗಿದೆ. ಸ್ಥಳ ಪರಿಶೀಲನೆ ನಡೆಸಿ ಪರವಾನಗಿ ಬಗ್ಗೆ ವಿಚಾರಣೆ ಮಾಡಲಾಗುವುದು. ಒಂದು ವೇಳೆ ಪರವಾನಗಿ ಇಲ್ಲದೇ ನಡೆಯುತ್ತಿರುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂಬಂಧ ಮಾಹಿತಿ ಪಡೆಯಲು ಸಂಜೆ ತಾಲ್ಲೂಕು ಕಚೇರಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಅವರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಪರಿಶೀಲನೆ ಸಮಯದಲ್ಲಿ ಘಟಕಕ್ಕೆ ಮರಳು ಹಾಗೂ ಮಣ್ಣು ಪೂರೈಕೆ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದರು. 'ಕಾನೂನು ಬಾಹಿರವಾಗಿ ಮಣ್ಣು ಹಾಗೂ ಮರಳು ತಂದು ಇಟ್ಟಿಗೆ ಮಾಡುತ್ತಿರುವ ಘಟಕಗಳನ್ನು ಕೂಡಲೇ ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ' ಜಿಲ್ಲಾಧಿಕಾರಿ ಸೂಚಿಸಿದರು ಎಂದು ವರದಿಯಾಗಿದೆ.

ಎಲ್ಲಾ ಘಟಕಗಳ ಸ್ಥಳ ಪರಿಶೀಲನೆ ಮಾಡಿ ಶೀಘ್ರ ವರದಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಪರಿಸರಕ್ಕೆ ಧಕ್ಕೆಯಾಗುವ ರೀತಿ ಘಟಕ ನಡೆಯುತ್ತಿದ್ದರೆ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಸಿಪಿಐ ಮಂಜುನಾಥ್, ಕಂದಾಯ ಅಧಿಕಾರಿಗಳಾದ ಶ್ರೀನಿವಾಸ್, ಷಫೀವುಲ್ಲಾ, ಪಿಎಸ್‌ಐ ನಾಗಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.