ADVERTISEMENT

ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 6:00 IST
Last Updated 6 ಏಪ್ರಿಲ್ 2011, 6:00 IST
ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಸಲಹೆ
ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಸಲಹೆ   

ಚಿತ್ರದುರ್ಗ: ಜಾತಿ-ಮತ-ಧರ್ಮಗಳ ಗೋಡೆ ಕಳಚಿ ಅದರಾಚೆಗಿನ ಮಾನವೀಯ ಧರ್ಮದ ತಳಹದಿಯ ಮೇಲೆ ಮುರುಘಾಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ ನುಡಿದರು.ಬಸವಕೇಂದ್ರ ಮತ್ತು ಮುರುಘಾಮಠದ ಆಶ್ರಯದಲ್ಲಿ ಮಂಗಳವಾರ ಬಸವೇಶ್ವರ ಸಭಾಂಗಣದಲ್ಲಿ ಆಯೋಜಿಸಿದ್ದ 19 ಜೋಡಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮೂಹಿಕ ಕಲ್ಯಾಣ ಮಹೋತ್ಸವ ಒಂದು ಮಾದರಿ ಕೆಲಸ. ಈ ಕಾರ್ಯಕ್ರಮದ ಪ್ರಭಾವಕ್ಕೆ ನಾನೂ ಸಹ ಒಳಗಾಗಿದ್ದೇನೆ. ಆಗ ಬಡತನದಲ್ಲಿದ್ದರೂ ನಮ್ಮ ಗೊಲ್ಲರ ಹಟ್ಟಿಯಲ್ಲಿ 7-8 ಜೋಡಿ ಸಾಮೂಹಿಕ ವಿವಾಹದ ಜತೆಗೆ ನನ್ನ ವಿವಾಹವನ್ನೂ ಮಾಡಿಕೊಂಡೆ. ಜನಸಮುದಾಯದಲ್ಲಿ ಇನ್ನೂ ಸಹ ಮಡಿವಂತಿಕೆಯ ಸೂತಕ ಇದೆ. ಅದು ಹೋಗಬೇಕು. ಪ್ರಜ್ಞಾವಂತರಾಗಿ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಕಂಕಣಬದ್ಧರಾಗಬೇಕು ಎಂದು ಕರೆ ನೀಡಿದರು.

ಶ್ರೀ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಸಂಸಾರ ಮೇಲ್ನೋಟಕ್ಕೆ ಖುಷಿ, ಸಂತೋಷ ಎನಿಸಿದರೂ ಒಳಗೆ ಅನೇಕ ಸಂಕಷ್ಟಗಳಿವೆ. ಅದನ್ನು ಸಮಚಿತ್ತದಿಂದ ನಿರ್ವಹಿಸಿದಾಗ ಮಾತ್ರ ಸರಿಯಾದ ದಾರಿಯಲ್ಲಿ ಸಾಗುತ್ತದೆ ಎಂದು ನುಡಿದರು. ಗಂಡಂದಿರು ವಿದ್ಯಾವಂತ ರಾಗಿದ್ದರೂ ತಮ್ಮ ಪತ್ನಿಯರಿಗೆ ಕಿರುಕುಳ ನೀಡುತ್ತಿದ್ದಾರೆ. ಅನಕ್ಷರಸ್ಥರು ಅಜ್ಞಾನದಿಂದ ತಪ್ಪುಗಳನ್ನು ಮಾಡಿದರೆ ವಿದ್ಯಾವಂತರು ಗೊತ್ತಿದ್ದೂ ತಪ್ಪು ಮಾಡಿ ನೆಮ್ಮದಿಗೆ ಭಂಗ ತಂದುಕೊಳ್ಳುತ್ತಿರುವುದು ವಿಪರ್ಯಾಸ ಎಂದು ವಿಷಾದಿಸಿದರು.

ಪಾವಗಡ ಪುರಸಭೆ ಸದಸ್ಯ ಸೊಗಡು ವೆಂಕಟೇಶ್ ಮಾತನಾಡಿ, ನಾಡಿನಲ್ಲಿ ಸಾವಿರಾರು ಮಠಗಳಿರಬಹುದು. ಆದರೆ, ಅವೆಲ್ಲವೂ ಜನಪರ ಕಾಳಜಿ ಹೊಂದಿವೆಯೇ ಎಂದು ಪ್ರಶ್ನಿಸಿಕೊಳ್ಳಬೇಕಿದೆ ಎಂದರು.ಜಮುರಾ ಕಲಾವಿದರು ಪ್ರಾರ್ಥಿಸಿದರು. ಪ್ರೊ. ಕರಿಸಿದ್ದೇಶ್ವರಸ್ವಾಮಿ ಸ್ವಾಗತಿಸಿದರು. ಪ್ರದೀಪ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.